ಹೊಸ ವಿವಾದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ 2008-09ನೇ ಸಾಲಿನ ಅಧ್ಯಕ್ಷರಾಗಿದ್ದ ಹಿರಿಯ ನಿರ್ದೇಶಕ ಎಚ್ ಆರ್ ಭಾರ್ಗವ ಅವರನ್ನು ಎತ್ತಂಗಡಿ ಮಾಡಲಾಗಿದೆ. ಅವರ ಸ್ಥಾನಕ್ಕೆ ಪ್ರಣಯ ರಾಜ ಶ್ರೀನಾಥ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೆ ಕರ್ನಾಟಕ ಸರ್ಕಾರ ಭಾರ್ಗವ ಅವರನ್ನು ಆಯ್ಕೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಈಗ ಇದ್ದಕ್ಕಿಂದ್ದಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡರೂ ಆಗಿರುವ ನಟ ಶ್ರೀನಾಥ್ ಅವರನ್ನು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮತ್ತೊಂದು ಆದೇಶ ಹೊರಡಿಸಲಾಗಿದೆ. ಈ ಮೂಲಕ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
2007-08ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಶ್ರೀನಾಥ್ ಅವರ ಸಹೋದರ ಸಿ ಆರ್ ಸಿಂಹ ಅವರನ್ನು ನೇಮಕ ಮಾಡಲಾಗಿತ್ತು. ಅವರ ಅಭಿನಯದ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರ ಸ್ಪರ್ಧೆಯಲ್ಲಿತ್ತು. ಹಾಗಾಗಿ ಈ ಹುದ್ದೆಯಲ್ಲಿರುವುವುದು ಸೂಕ್ತವಲ್ಲ ಎಂದು ಅವರು ರಾಜೀನಾಮೆ ಸಲ್ಲಿಸಿದ್ದರು. ಅವರ ಸ್ಥಾನಕ್ಕೆ ನಿರ್ದೇಶಕ ಕೇಸರಿ ಹರವೂ ಅವರನ್ನು ನೇಮಿಸಲಾಗಿತ್ತು.
ಈಗ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿರುವ ಶ್ರೀನಾಥ್ ಅಭಿನಯದ ಚಿತ್ರಗಳು ಸ್ಪರ್ಧೆಯಲ್ಲಿವೆ. 'ಗಂಗೆ ಬಾರೆ ತುಂಗೆ ಬಾರೆ', 'ಜೋಶ್ 'ಚಿತ್ರಗಳಲ್ಲಿ ಶ್ರೀನಾಥ್ ಅಭಿನಯಿಸಿದ್ದಾರೆ. ಆದರೆ ಶ್ರೀನಾಥ್ ಅವರು ಈ ಸ್ಥಾನದಲ್ಲಿ ಮುಂದುವರಿಯುವುದು ಅನುಮಾನಾಸ್ಪದವಾಗಿದೆ.
"ಸಮಿತಿಗೆ ನನ್ನನ್ನು ನೇಮಕ ಮಾಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನೇ ಅಭಿನಯಿಸಿರುವ ಚಿತ್ರಗಳು ಸ್ಪರ್ಧೆಯಲ್ಲಿವೆ. ಹಾಗಿರುವಾಗ ನಾನು ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ" ಎಂದು ಶ್ರೀನಾಥ್ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಭಾರ್ಗವ ಅವರು ಅಮೆರಿಕಾದಲ್ಲಿದ್ದಾರೆ. ಅವರ ನೇಮಕವನ್ನು ಬದಲಾಯಿಸಲು ಕಾರಣ ಏನು ಎಂಬುದು ನಿಗೂಢವಾಗಿದೆ. ಅವರು ಕರ್ನಾಟಕಕ್ಕೆ ಮರಳಿದ ಬಳಿಕವಷ್ಟೆ ವಿವರಗಳು ಬಹಿರಂಗವಾಗಬಹುದು.


Click it and Unblock the Notifications











