For Quick Alerts
  ALLOW NOTIFICATIONS  
  For Daily Alerts

  ಸೀತಾರಾಂ ಫ್ಲೈಓವರ್‌ ‘ಮುಕ್ತ’ಬಯಕೆ

  By Staff
  |

  ಬೆಂಗಳೂರು : ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜು ಬಳಿ ಫ್ಲೈ ಓವರ್‌ ನಿರ್ಮಿಸುವ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ನಡೆಯುತ್ತಿರುವ ಜನಾಂದೋಲನಕ್ಕೆ ಖ್ಯಾತ ಕಿರುತೆರೆ ನಿರ್ದೇಶಕ ಮತ್ತು ನಟ ಟಿ.ಎನ್‌.ಸೀತಾರಾಂ ಬೆಂಬಲ ವ್ಯಕ್ತಪಡಿಸಿದ್ದಾರೆ.

  ನ್ಯಾಷನಲ್‌ ಕಾಲೇಜು ಫ್ಲೈ ಓವರ್‌ ಕ್ರಿಯಾ ಸಮಿತಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ (ಮಾ.4) ಸೀತಾರಾಂ, ಈ ಆಂದೋಲನಕ್ಕೆ ತಮ್ಮ ಬೆಂಬಲವಿರುವುದಾಗಿ ಹೇಳಿದರು. ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರಗಳಲ್ಲಿ ಬಸವನಗುಡಿಯೂ ಒಂದಾಗಿದ್ದು , ಈ ಸಾಂಸ್ಕೃತಿಕ ಬೇರುಗಳನ್ನು ನಾಶಗೊಳಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸೀತಾರಾಂ ಹೇಳಿದರು.

  ಸ್ಥಳೀಯ ಜನತೆ ದನಿ ಎತ್ತದಿದ್ದಲ್ಲಿ ಕಬ್ಬನ್‌ ಪಾರ್ಕ್‌ ಹಾಗೂ ಲಾಲ್‌ಬಾಗ್‌ಗಳ ದುಸ್ಥಿತಿ ಬಸವನಗುಡಿಗೂ ಬರುತ್ತದೆ. ಕಟ್ಟಡ ನಿರ್ಮಾಣ ಚಟುವಟಿಕೆಗಳಿಗಾಗಿ ಕಬ್ಬನ್‌ ಪಾರ್ಕ್‌ ಹಾಗೂ ಲಾಲ್‌ಬಾಗ್‌ಗಳಲ್ಲಿ ನೂರಾರು ಮರಗಳನ್ನು ಕತ್ತರಿಸಲಾಗಿದೆ ಎಂದು ಸೀತಾರಾಂ ಹೇಳಿದರು.

  ನ್ಯಾಷನಲ್‌ ಕಾಲೇಜು ವೃತ್ತದಲ್ಲಿ ಟ್ರಾಫಿಕ್‌ ಒತ್ತಡ ಕಡಿಮೆ ಮಾಡಲು ಫ್ಲೈಓವರ್‌ ನಿರ್ಮಾಣವಷ್ಟೇ ಮದ್ದಲ್ಲ . ಏಕಮುಖ ಸಂಚಾರ ಜಾರಿಗೆ ತರುವುದರಿಂದಲೂ ಟ್ರಾಫಿಕ್‌ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ತಕ್ಷಣವೇ ಫ್ಲೈ ಓವರ್‌ ನಿರ್ಮಾಣವನ್ನು ಕೈಬಿಡಬೇಕು. ಇದರಿಂದಾಗಿ ಈ ಪ್ರದೇಶದಲ್ಲಿ ಕಲಿಯುತ್ತಿರುವ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಿದಂತಾಗುತ್ತದೆ ಎಂದು ಸೀತಾರಾಂ ಹೇಳಿದರು.

  ‘ಮುಕ್ತ ’ ಪ್ರಶಂಸೆ

  ಈಟೀವಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಿ.ಎನ್‌.ಸೀತಾರಾಂರ ‘ಮುಕ್ತ ’ ಧಾರಾವಾಹಿ ನೋಡುಗರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ಹೆಣ್ಣುಮಕ್ಕಳ ತವಕ ತಲ್ಲಣಗಳನ್ನು ಚಿತ್ರಿಸುವಲ್ಲಿ ಪಳಗಿರುವ ಸೀತಾರಾಂರ ಚಾಳಿ ಮುಕ್ತದಲ್ಲೂ ಮುಂದುವರಿದಿದೆ. ಆದರೆ ಈ ಧಾರಾವಾಹಿಯಲ್ಲಿ ರಾಜಧಾನಿಯಿಂದ ಪಟ್ಟಣ ಪ್ರದೇಶದ ಪರಿಸರಕ್ಕೆ ಬಂದಿರುವ ಸೀತಾರಾಂ, ಇದೇ ಮೊದಲ ಬಾರಿಗೆ ರೈತರ ಸಮಸ್ಯೆಗಳನ್ನು ಧಾರಾವಾಹಿಯಲ್ಲಿ ಚಿತ್ರಿಸುತ್ತಿದ್ದಾರೆ. ರೈತರ ಆತ್ಮಹತ್ಯೆ, ಕೃಷಿ ಕ್ಷೇತ್ರದ ಮೇಲೆ ಜಾಗತೀಕರಣ ಪರಿಣಾಮ, ಮುಂತಾದ ವಿಷಯಗಳು ಧಾರಾವಾಹಿಯಲ್ಲಿ ಚರ್ಚೆಯಾಗಲಿವೆ.

  ಸೀತಾರಾಂರ ಫೇವರಿಟ್‌ ನಟಿ ಮಾಳವಿಕಾ, ದಿವ್ಯಾ ರಘುರಾಂ, ಸಂಗೀತಾ ಕಟ್ಟಿ , ನಂದಿನಿ ಮುಂತಾದವರು ಮುಕ್ತಾ ಬಳಗದಲ್ಲಿದ್ದಾರೆ. ಕಿರುತೆರೆಯ ಜನಪ್ರಿಯ ನಿರೂಪಕಿ ಚಿತ್ರಶ್ರೀ ‘ಮುಕ್ತಾ’ ಬಳಗದಲ್ಲಿ ಗಮನ ಸೆಳೆಯುತ್ತಿರುವ ಮತ್ತೊಬ್ಬ ಕಲಾವಿದೆ. ಮನೋತಜ್ಞೆ ಪಾತ್ರದಲ್ಲಿ ಚಿತ್ರಶ್ರೀ ಮನೋಜ್ಞ ಅಭಿನಯ ನೀಡುತ್ತಿದ್ದಾರೆ.

  Post your views

  ಪೂರಕ ಓದಿಗೆ
  ಸಿನಿಮಾ ಸಬ್ಸಿಡಿ ಕಮಿಟಿಯ ಲಂಚಾವತಾರ

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X