»   » ಮೊನಿಷಾ ಕೊಯಿರಾಲ : ಹೇಳುವುದು ಒಂದು ಮಾಡುವುದು ಇನ್ನೊಂದು

ಮೊನಿಷಾ ಕೊಯಿರಾಲ : ಹೇಳುವುದು ಒಂದು ಮಾಡುವುದು ಇನ್ನೊಂದು

Posted By:
Subscribe to Filmibeat Kannada

*ದಟ್ಸ್‌ಕನ್ನಡ ಡೆಸ್ಕ್‌

‘ಏಕ್‌ ಛೋಟೀಸಿ ಲವ್‌ ಸ್ಟೋರಿ’ ಎನ್ನುವ ಚಿತ್ರದ ಕುರಿತು ಗರತಿ ಗಂಗಮ್ಮನಂತೆ ಹುಯಿಲೆಬ್ಬಿಸಿದ್ದ ಮೊನಿಷಾ ಕೊಯಿರಾಲ ಎಂಬ ಕನ್ಯಾಮಣಿ ಇದ್ದಕ್ಕಿದ್ದಂತೆ ಧಾರಾಳಿಯಾದುದು ಹೇಗೆ ? ಮೊನಿಷಾಳ ಹೊಸ ಚಿತ್ರ ‘ತುಮ್‌’ ನೋಡಿದವರೆಲ್ಲ ಈ ಪ್ರಶ್ನೆ ಎತ್ತುತ್ತಿದ್ದಾರೆ.

ಡ್ಯೂಪ್‌ ಬಳಸಿಕೊಂಡು ತನ್ನ ಪಾತ್ರವನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆ. ಇದರಿಂದ ತನ್ನ ಇಮೇಜ್‌ಗೆ ಧಕ್ಕೆಯಾಗುತ್ತದೆ ಎಂದು ‘ಏಕ್‌ ಛೋಟೀಸಿ ಲವ್‌ ಸ್ಟೋರಿ’ ಚಿತ್ರದ ವಿರುದ್ಧ ಮೊನಿಷಮ್ಮ ಕೋರ್ಟು- ಕಟಕಟೆ ಎಂದೆಲ್ಲ ಓಡಾಡಿದಾಗ- ಈಕೆಯಾಬ್ಬಳು ಒಳ್ಳೆಯ ಹೆಣ್ಣುಮಗಳು ಎಂದು ಸಂಸಾರಸ್ಥರೆಲ್ಲ ಮೆಚ್ಚಿಕೊಂಡಿದ್ದರು. ಆದರೆ, ಮೊನಿಷಾ ಹೊಸ ಅವತಾರ ಬೇರೆಯೇ ಇದೆ !

‘ತುಮ್‌’ ಚಿತ್ರದಲ್ಲಿ ಮೊನಿಷಾ ರೋಚಕ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾಳಂತೆ. ಈ ಚಿತ್ರದಲ್ಲಿ ಮೂರು ಪ್ರಣಯ ದೃಶ್ಯಗಳಲ್ಲಿ ಮೊನಿಷಾ ತನ್ಮಯತೆಯಿಂದ ಭಾಗವಹಿಸಿದ್ದು , ಈ ಮೂರೂ ದೃಶ್ಯಗಳು ಪ್ರೇಕ್ಷಕರಿಗೆ ಕಚಗುಳಿ ಇಡುವಷ್ಟು ಗರಂ ಆಗಿವೆಯಂತೆ. ಅಲ್ಲದೆ ಈ ದೃಶ್ಯಗಳು ಸಾಕಷ್ಟು ಉದ್ದವಾಗಿರುವುದು ರಸಿಕರಿಗೆ ದೊರೆತಿರುವ ಬೋನಸ್ಸು .

ಅರುಣ ರಾಜೇ ಅವರ ‘ತುಮ್‌’ ಚಿತ್ರದಲ್ಲಿ - ಗಂಡನ ಪಾತ್ರದಲ್ಲಿ ಅಭಿನಯಿಸಿರುವ ರಜತ್‌ ಕಪೂರ್‌ ಹಾಗೂ ಪ್ರೇಮಿ ಕರಣ್‌ನಾಥ್‌ ಜೊತೆಯಲ್ಲಿ ಮೊನಿಷಾ ನಿರ್ಭಿಡೆಯಿಂದ ಅಭಿನಯಿಸಿದ್ದಾಳಂತೆ. ‘ಇದರಲ್ಲಿ ಅಶ್ಲೀಲವೇನೂ ಇಲ್ಲ. ಇದೆಲ್ಲ ಚಿತ್ರಕಥೆಗೆ ಅನಿವಾರ್ಯವಾಗಿತ್ತು . ಈ ದೃಶ್ಯಗಳು ಕಲಾತ್ಮಕವಾಗಿ ಮೂಡಿಬಂದಿವೆ’ ಎಂದಿದ್ದಾರೆ ನಿರ್ದೇಶಕರು. ಕಲೆಯ ಎಲ್ಲೆ ಇತ್ತೀಚೆಗೆ ಹಿಗ್ಗಿದಂತಿದೆ !

ಸೆನ್ಸಾರ್‌ ಮಂದಿಗೆ ಕೂಡ ‘ತುಮ್‌’ ದೃಶ್ಯಗಳು ಅಷ್ಟೇನೂ ಇಷ್ಟವಾಗಿಲ್ಲ . ಚಿತ್ರ ನೋಡಿದ ಸೆನ್ಸಾರಿಗರು ಬಿಸಿಯಾಗಿದ್ದು , ಉದ್ದದ ದೃಶ್ಯಗಳನ್ನು ಸ್ವಲ್ಪ ಕಟ್‌ ಮಾಡೋಣ ಎಂದು ಕತ್ತರಿ ಕೈಗೆತ್ತಿಕೊಂಡಿದ್ದರು. ಆದರೆ ಪಟ್ಟು ಬಿಡದ ರಾಜೇ, ಒಂದು ತಿಂಗಳ ಹೋರಾಟದ ನಂತರ ರೋಚಕ ದೃಶ್ಯಗಳನ್ನು ಯಥಾವತ್ತು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಅಸಲಿ ಬಂಡವಾಳವೇ ಆ ದೃಶ್ಯಗಳು ಎನ್ನುವುದು ಕೆಲವರ ಅಂಬೋಣ.

ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವ ಮಾತು ಮೊನಿಷಾಗೆ ಹೇಳಿ ಮಾಡಿಸಿದಂತಿದೆ ಅಲ್ಲವಾ ? ಬಿಪಾಷಾ ಸರಿಯಪ್ಪ ; ಹೇಳಿದ್ದನ್ನೇ ಮಾಡುತ್ತಾಳೆ !

ಅಂದಹಾಗೆ, ಫೆ.20ರಂದು ‘ತುಮ್‌’ ಚಿತ್ರ ಬಿಡುಗಡೆಯಾಗುತ್ತದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada