»   » ದರ್ಶನ್‌ ವಿಶ್ವರೂಪ ದರ್ಶನ

ದರ್ಶನ್‌ ವಿಶ್ವರೂಪ ದರ್ಶನ

Subscribe to Filmibeat Kannada

ದರ್ಶನ್‌ ತೂಗುದೀಪ ಥೇಟ್‌ ಮೆಜೆಸ್ಟಿಕ್‌ ಸಿನಿಮಾದ ಒರಟು ಕ್ಯಾರೆಕ್ಟರಾಗಿ ಬದಲಾಗಿಬಿಟ್ಟಿದ್ದಾನೆ. ಆತನ ತಲೆ ತಿರುಕುತನ ಮುಗಿಲು ಮುಟ್ಟಿದೆ ಅಂತ ಸ್ಯಾಂಡಲ್‌ವುಡ್‌ ನಿರ್ಮಾಪಕರು ಹಿಡಿ ಶಾಪ ಹಾಕತೊಡಗಿದ್ದಾರೆ.

ಮೆಜೆಸ್ಟಿಕ್‌ ಕಟೌಟ್‌ ತೂಗಿದ್ದೇ ತಡ, ದರ್ಶನ್‌ ಹಿಂದೆ ನಿರ್ಮಾಪಕರ ದಂಡು. ಒಮ್ಮೆಲೇ ಮೂರು ಚಿತ್ರಗಳ ಆಫರ್‌- ನಿನಗೋಸ್ಕರ, ಧ್ರುವ, ಕರಿಯಾ. ದರ್ಶನ್‌ ಇದೇ ತನ್ನ ಯಶಸ್ಸು ಎಂದು ಬೀಗುತ್ತಾ ಹಿಂದೂಮುಂದೂ ನೋಡದೆ ಎಲ್ಲಾ ಸಿನಿಮಾಗಳಿಗೂ ಡೇಟ್ಸ್‌ ಕೊಟ್ಟಿದ್ದಾರೆ. ಆದರೆ, ಪಾಪ ತಾವು ಕೊಟ್ಟಿರುವ ಡೇಟ್‌ಗಳು ಕ್ಲಾಷ್‌ ಆಗುತ್ತವೆ ಅನ್ನುವುದು ಅವರಿಗೆ ಗೊತ್ತಿರಲಿಲ್ಲವಂತೆ!

ಬೆಳಗ್ಗೆ 11 ಗಂಟೆಗೆ ಧ್ರುವ ಶೂಟಿಂಗ್‌ ಇದ್ದರೆ, ದರ್ಶನ್‌ ಅದಕ್ಕೆ ಚಕ್ಕರ್‌ ಹೊಡೆದು ಕರಿಯನಾಗಿ ನಿಂತಿರುತ್ತಾನೆ. ಕರಿಯಾ ತಂಡ ಕಾಯುತ್ತಿರುವಾಗ, ಕೈಕೊಟ್ಟು ನಿನಗೋಸ್ಕರಕ್ಕಾಗಿ ಡ್ಯುಯೆಟ್‌ ಸನ್ನಿವೇಶದಲ್ಲಿ ಮುಳುಗಿರುತ್ತಾನೆ ಅಂತ ನಿರ್ಮಾಪಕರು ನೇರವಾಗಿ ಆರೋಪಿಸುತ್ತಿದ್ದಾರೆ.

ಸಿನಿಮಾ ಕೆಲಸಗಳಲ್ಲದೇ ಸ್ವಂತ ಕೆಲಸಗಳೂ ದರ್ಶನ್‌ಗೆ ಸಾಕಷ್ಟಿವೆ. ಒಂದು ಸಿನಿಮಾ ಹಿಟ್‌ ಆದೊಡನೆ ಮನೆ ಕಟ್ಟುವ ಮನಸ್ಸನ್ನು ಮಾಡಿರುವ ನಾಯಕನನ್ನು ನೀವು ಕಂಡಿದೀರಾ? ಕಂಡಿರದಿದ್ದರೆ, ಈಗ ಕಾಣುವ ಭಾಗ್ಯ ನಿಮ್ಮದು! ದರ್ಶನ್‌ ಹೊಸ ಸೈಟು ಖರೀದಿಸಿದ್ದಾರೆ. ಅದರಲ್ಲಿ ಹಸನಾದ ಮನೆ ಕಟ್ಟಲು ಕಾಂಟ್ರಾಕ್ಟರೊಬ್ಬರನ್ನು ಗೊತ್ತು ಪಡಿಸುವ ಭರಾಟೆಯಲ್ಲಿ ಮುಳುಗಿದ್ದಾರೆ. ಈ ಕೆಲಸದ ನಡುವೆ ಕಳೆದು ಹೋಗಿ ಶೂಟಿಂಗ್‌ಗೆ ಕೈಕೊಡುವುದೂ ಉಂಟು. ಹೀಗಾದಾಗ ಬಡಪಾಯಿ ನಿರ್ಮಾಪಕರು ದರ್ಶನ್‌ನ ಎಲ್ಲಿ ಅಂತ ಹುಡುಕುತ್ತಾರೆ.

ದರ್ಶನನ ದರ್ಶನಕ್ಕೇ ಹಪಹಪಿಸುವ ಪರಿಸ್ಥಿತಿ ಒದಗಿದ್ದನ್ನು ನಿರ್ಮಾಪಕರು ಸಹಿಸಲು ಸಿದ್ಧರಿಲ್ಲ. ಅಹವಾಲು ಸಲ್ಲಿಸಲು ತಮ್ಮದೇ ಆದ ಸಂಘವಿದೆಯಲ್ಲ. ಕರ್ನಾಟಕ ಚಿತ್ರ ನಿರ್ಮಾಪಕರ ಸಂಘಕ್ಕೆ ದರ್ಶನ್‌ ವಿರುದ್ಧ ದೂರು ಹೋದ ತಕ್ಷಣವೇ, ಆತನ ಮೇಲೆ 10 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ.

ಈ ದಂಡವನ್ನು ದರ್ಶನ್‌ ತೆತ್ತರೋ ಇಲ್ಲವೋ ಗೊತ್ತಿಲ್ಲ. ಆದರೆ, ಸುದೀಪ್‌ ಜೊತೆ ಕಾಂಪೀಟ್‌ ಮಾಡಬಲ್ಲ ಪ್ರತಿಭೆ ಎಂಬ ತಮ್ಮ ಇಮೇಜಿಗೆ ಖುದ್ದು ಮಸಿ ಬಳಿದುಕೊಂಡಿರುವುದಂತೂ ದಿಟ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada