»   » ದಾಮಿನಿಗೆ ಸಿಕ್ಕಿದ್ದು 10ಸಾವಿರ + ಬಂಡಿಗಟ್ಟಲೇ ಕೆಟ್ಟೆಸರು!

ದಾಮಿನಿಗೆ ಸಿಕ್ಕಿದ್ದು 10ಸಾವಿರ + ಬಂಡಿಗಟ್ಟಲೇ ಕೆಟ್ಟೆಸರು!

Subscribe to Filmibeat Kannada


ಪತ್ರಕರ್ತರ ಮುಂದೆ ದೂರುಗಳನ್ನು ಇಟ್ಟು, ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ದಾಮಿನಿ ಕೈಮುಗಿದರು. ಕಣ್ಣರಳಿಸಿ, ಪತ್ರಕರ್ತರ ನೋಡಿದರು. ಮಾತು ಮುಂದುವರೆಯಿತು.

ತಮ್ಮ ವಿರುದ್ಧದ ‘ಸ್ವತಂತ್ರ ಪಾಳ್ಯ’ ನಿರ್ಮಾಪಕರ ಆರೋಪಗಳಿಗೆ ಸ್ಪಷ್ಟೀಕರಣ ನೀಡಲು, ಅವರು ಪತ್ರಕರ್ತರ ಮುಂದೆ ಕೂತಿದ್ದರು.

ಹೇಳಿದಂತೆ ಸಂಭಾವನೆ ನೀಡದೇ, ನಟಿಯರ ಮೇಲೆ ಗೂಬೆ ಕೂರಿಸುವುದರಲ್ಲಿ ನಿರ್ಮಾಪಕರಿಗೆ ಏನೋ ಒಂದು ರೀತಿಯ ಆನಂದ ಎಂದ ದಾಮಿನಿ ಮುಖದಲ್ಲಿ ಸಿಡಿಮಿಡಿ.

ನಾನು ಚಿತ್ರೀಕರಣಕ್ಕೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪವೇ ಸುಳ್ಳು. ‘ಸ್ವತಂತ್ರ ಪಾಳ್ಯ’ ಚಿತ್ರದ ನಿರ್ಮಾಪಕರು ಒಂದೂವರೆ ಲಕ್ಷ ಸಂಭಾವನೆ ಕೊಡ್ತೀನಿ ಎಂದಿದ್ದರು. ಮುಂಗಡವಾಗಿ ಕೊಟ್ಟದ್ದು 10ಸಾವಿರ. 40ಸಾವಿರ ಕೊಟ್ಟಿದ್ದೇನೆ ಎಂದು ಮಾಧ್ಯಮಗಳಿಗೆ ಸುಳ್ಳು ಹೇಳಿದ್ದಾರೆ. ಇದು ನ್ಯಾಯವೇ ಎಂದು ದಾಮಿನಿ ಪ್ರಶ್ನಿಸಿದರು.

ನನಗೆ ನಿರ್ಮಾಪಕರಿಂದ ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ಬಾಕಿ ಬರಬೇಕು. ಕನಿಷ್ಠ ಒಂದು ಲಕ್ಷ ರೂಪಾಯಿಯಾದರೂ ಕೊಡಬೇಕು. ತಪ್ಪೊಪ್ಪಿಗೆ ರೂಪದಲ್ಲಿ ಯಾವುದಾದರು ಸೇವಾ ಸಂಸ್ಥೆಗೆ ಉಳಿದ 40ಸಾವಿರ ರೂಪಾಯಿ ನೀಡಬೇಕು. ಆಗಷ್ಟೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ ಎಂಬುದು ಅವರ ಷರತ್ತು.

ಸಂಭಾವನೆ ನೀಡದೇ, ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ. ದೂರವಾಣಿಯಲ್ಲಿ ಬೆದರಿಕೆಯಾಡ್ಡುತ್ತಿದ್ದಾರೆ. ಹೀಗೆ ಬೆದರಿಸುವ ನಿರ್ಮಾಪಕ ಹೇಮಂತ್‌ ಸುವರ್ಣ, ನಿರ್ದೇಶಕ ವೆಂಕಟ್‌ಮತ್ತು ಫೈನಾನ್ಷಿಯರ್‌ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ದಾಮಿನಿ ವಿವರಿಸಿದರು.

ಹಿನ್ನೆಲೆ : ಕನ್ನಡದ ಹುಡುಗಿಯರಿಗೆ ಅವಕಾಶ ಕೊಟ್ಟರೇ, ಏನಾದರೂ ತರ್ಲೆ ಮಾಡ್ತಾರೆ. ನಮ್ಮ ಚಿತ್ರದ ಚಿತ್ರೀಕರಣಕ್ಕೆ ದಾಮಿನಿ ಸಹಕಾರ ನೀಡುತ್ತಿಲ್ಲ. ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ದಾಮಿನಿ ವಿರುದ್ಧ ‘ಸ್ವತಂತ್ರ ಪಾಳ್ಯ’ದ ನಿರ್ಮಾಪಕರು ಇತ್ತೀಚೆಗೆ ದೂರಿದ್ದಾರೆ. ದೂರಿಗೆ ಈಗ ಪ್ರತ್ಯುತ್ತರ ಬಂದಿದೆ. ಮುಂದೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada