»   » ನಿರ್ಮಾಪಕರ ಸಂಘ ಹೋಳು, ಹುಟ್ಟಿತು ದೇವೇಗೌಡ ಪುತ್ರನ ‘ವೇದಿಕೆ’

ನಿರ್ಮಾಪಕರ ಸಂಘ ಹೋಳು, ಹುಟ್ಟಿತು ದೇವೇಗೌಡ ಪುತ್ರನ ‘ವೇದಿಕೆ’

Posted By:
Subscribe to Filmibeat Kannada

ಬೆಂಗಳೂರು : ಪ್ರದರ್ಶಕರು ಹಾಗೂ ನಿರ್ಮಾಪಕರ ನಡುವಿನ ವಿರಸ ತಾರಕಕ್ಕೇರಿರುವ ಈ ಹೊತ್ತಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಬಣ ಇಬ್ಭಾಗವಾಗಿದ್ದು, ಮಾಜಿ ಸಂಸದ ಮತ್ತು ನಿರ್ಮಾಪಕ ಕುಮಾರ ಸ್ವಾಮಿ ನೇತೃತ್ವದಲ್ಲಿ ‘ಚಲನಚಿತ್ರ ನಿರ್ಮಾಪಕರ ವೇದಿಕೆ’ ಎಂಬ ಹೊಸ ಸಂಘ ಹುಟ್ಟಿಕೊಂಡಿದೆ.

ನಿರ್ಮಾಪಕರ ಸಂಘದ ಹಠಮಾರಿತನದಿಂದ ಬೇಸತ್ತ ಹಲವು ನಿರ್ಮಾಪಕರು ಶುಕ್ರವಾರ (ಆ. 08) ಸಿಡಿಮಿಡಿಗೊಂಡ ಪರಿಣಾಮವಿದು. ನಿರ್ಮಾಪಕರ ಸಂಘದ ಶೇ. 90ರಷ್ಟು ಸದಸ್ಯರು ಈಗ ನಮ್ಮ ಜೊತೆಗಿದ್ದಾರೆ ಎಂದು ದೇವೇಗೌಡ ಪುತ್ರ ಕುಮಾರ ಸ್ವಾಮಿ ಹೇಳಿದರು.

ಪ್ರದರ್ಶಕರ ವಿರುದ್ಧದ ಅಸಮಾಧಾನ ಒಮ್ಮೆ ತಣ್ಣಗಾದಂತೆ ಕಂಡಿತ್ತು. ಆದರೆ, ರಾಜ್ಯದಲ್ಲಿ ಮತ್ತೆ ಯಾವುದೇ ಚಿತ್ರ ಪ್ರದರ್ಶನ ಇಲ್ಲ ಎಂದು ಗುರುವಾರ (ಆ. 07) ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ಕುಮಾರ್‌ ಪಾಟೀಲರು ಪ್ರಕಟಿಸಿದರು. ಈಗಾಗಲೇ ಪ್ರದರ್ಶಿತವಾಗುತ್ತಿರುವ ಕನ್ನಡ ಚಿತ್ರಗಳ ಪ್ರಿಂಟನ್ನು ಚಿತ್ರಮಂದಿರಗಳಿಂದ ವಾಪಸ್‌ ಪಡೆಯುವಂತೆ ನಿರ್ಮಾಪಕರಿಗೆ ಹಠಾತ್ತನೆ ಸೂಚಿಸಿದರು.

ಬಸಂತ್‌ಕುಮಾರ್‌ ಪಾಟೀಲರ ಈ ನಡೆ ಕೆಲವು ನಿರ್ಮಾಪಕರಿಗೆ ರುಚಿಸಲಿಲ್ಲ. ಈಗ ತಾನೆ ಬಿಡುಗಡೆಯಾಗಿರುವ ಚಿತ್ರಗಳ ನಿರ್ಮಾಪಕರ ಥೈಲಿಗೆ ಇನ್ನೇನು ಕಾಸು ಬರುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಬಂದ್‌ ಮಾಡಿದ್ದು ನುಂಗಲಾರದ ತುತ್ತಾಗಿದೆ. ಈ ಕಾರಣಕ್ಕೆ ಹೊಸ ವೇದಿಕೆಯನ್ನು ರಚಿಸಲೇಬೇಕಾಯಿತು ಎಂದು ಕುಮಾರ ಸ್ವಾಮಿ ಸಮಜಾಯಿಷಿ ಕೊಟ್ಟರು.

ನಿರ್ಮಾಪಕರ ಸಂಘದ ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡುತ್ತಿರುವುದನ್ನೂ ಖಂಡಿಸಿರುವ ಕುಮಾರಸ್ವಾಮಿ ನೇತೃತ್ವದ ‘ವೇದಿಕೆ’ ಶನಿವಾರ (ಆ. 09) ಸಭೆ ಸೇರಿ ಮುಂದಿನ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ.

(ಇನ್ಫೋ ವಾರ್ತೆ)

Post your views

ವಾರ್ತಾ ಸಂಚಯ
ಶೋ ನಿಲ್ಲಿಸಬೇಡಿ, ಬಸಂತ್‌ಕುಮಾರ್‌ಗೆ ‘ಪಿಪಿಪಿ’ ನಿರ್ಮಾಪಕರ ಪತ್ರ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada