ರಾಜ್‌ಕುಮಾರ್ ನಾಯಕತ್ವದಲ್ಲಿ ಕನ್ನಡ ಚಿತ್ರೋದ್ಯಮದ ಬೃಹತ್‌ಜಾಥಾ
ಬೆಂಗಳೂರು : ಕನ್ನಡ ಚಿತ್ರೋದ್ಯಮದಲ್ಲಿನ ಬಿಕ್ಕಟ್ಟು ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಗೋಕಾಕ್ ಚಳವಳಿ ಮಾದರಿಯಲ್ಲಿ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ಚಿತ್ರೋದ್ಯಮ, ಬೆಳಗಾವಿಯಿಂದ ಬೆಂಗಳೂರು ತನಕ ಬೃಹತ್ ಜಾಥಾ ಆಯೋಜಿಸಲು ನಿರ್ಮಾಪಕರ ಸಂಘ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಸಂಘ ಸೆ.12 ರಂದು ಸಭೆ ಕರೆದಿದೆ. ಸಭೆಯಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ಆಂಬರೀಷ್ ಮತ್ತಿತರ ನಟರು, ನಿರ್ದೇಶಕರು, ನಿರ್ಮಾಪಕರು, ಚಿತ್ರರಂಗದ ಕುಶಲಕರ್ಮಿಗಳು ಸೇರಿದಂತೆ 1500 ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಭೆ ವಿಫಲ : ಕನ್ನಡ ಚಿತ್ರಗಳ ಹಿತ ಕಾಯಲು ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯಲ್ಲಿಯೇ ಸಮಸ್ಯೆ ಚರ್ಚೆಯಾಗ ಬೇಕೆಂದು ಮೂರು ವಲಯದ ಪ್ರತಿನಿಧಿಗಳು ಪಟ್ಟು ಹಿಡಿದ ಕಾರಣ, ಸಮಸ್ಯೆ ತಿಳಿಗೊಳಿಸಲು ಬುಧವಾರ ಏರ್ಪಡಿಸಲಾಗಿದ್ದ ವಾಣಿಜ್ಯ ಮಂಡಳಿ ಸಭೆ ಯಾವುದೇ ತೀರ್ಮಾನ ಕೈಗೊಳ್ಳಲಾಗದೇ ಅಪೂರ್ಣಗೊಂಡಿದೆ.
ಕನ್ನಡ ಚಲನ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ವೆಂದು ಪ್ರದರ್ಶಕರ ಸಂಘ ಹೇಳಿದೆ. ಈ ಮಧ್ಯೆ ಶುಕ್ರವಾರ ನರ್ತಕಿ ಚಿತ್ರಮಂದಿರದಲ್ಲಿ ‘ಪ್ರಾಣ’ ಕನ್ನಡ ಚಲನಚಿತ್ರ ಬಿಡುಗಡೆಗೆ ಸಿದ್ಧತೆಗಳು ನಡೆದಿವೆ.
ಹೊಸ ಪರಭಾಷಾ ಚಿತ್ರಗಳನ್ನು ರಾಜ್ಯದಲ್ಲಿ ಏಳು ವಾರಗಳ ನಂತರ ಪ್ರದರ್ಶಿಸ ಬೇಕೆಂಬ ಆದೇಶ ವಿವಾದ ಸೃಷ್ಟಿಸಿದೆ. ಈ ಬಗೆಗಿನ ಪರ ಹಾಗೂ ವಿರೋಧಿ ಅಲೆಗಳ ಸುಳಿಯಲ್ಲಿ ಸರಕಾರ ಮೇಲೆ ಕೆಳಗೆ ನೋಡುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications