»   » ಐಎಫ್‌ಎಫ್‌ಐ ಏಷ್ಯನ್‌ ಸ್ಪರ್ಧೆಯಲ್ಲಿ ‘ದ್ವೀಪ’ಕ್ಕೇ ಅವಕಾಶವಿಲ್ಲ !

ಐಎಫ್‌ಎಫ್‌ಐ ಏಷ್ಯನ್‌ ಸ್ಪರ್ಧೆಯಲ್ಲಿ ‘ದ್ವೀಪ’ಕ್ಕೇ ಅವಕಾಶವಿಲ್ಲ !

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಕಾಸರವಳ್ಳಿ ಅಪ್‌ಸೆಟ್ಟಾಗಿದ್ದಾರೆ.
ಸ್ವರ್ಣ ಕಮಲ, ರಾಜ್ಯ ಪ್ರಶಸ್ತಿಗಳು ಅವರ ನಿರ್ದೇಶನದ ‘ದ್ವೀಪ’ಕ್ಕೆ ಸಿಕ್ಕಿದ್ದರೂ ಯಾಕೀ ತಾಪ ? ಕಾಸರವಳ್ಳಿ ಹೇಳುತ್ತಾರೆ- 33ನೇ ಅಂತರರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಇಂಡಿಯಾ (ಐಎಫ್‌ಎಫ್‌ಐ) ದ ಏಷ್ಯನ್‌ ಸ್ಪರ್ಧಾತ್ಮಕ ವಿಭಾಗದಲ್ಲಿ ತಮ್ಮ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ.

ಸಿಗದಿದ್ದರೇನಂತೆ, ಅಲ್ಲಿ ‘ದ್ವೀಪ’ ತೆರೆಕಂಡಿತಲ್ಲಾ. ಜನ ಮೆಚ್ಚಿ ಶಹಭಾಸ್‌ ಅಂದರಲ್ಲ. ಆದರೆ, ಕಾಸರವಳ್ಳಿ ಉದ್ದೇಶ ಸುಮ್ಮನೆ ತೆರೆ ಕಂಡು ಸುಮ್ಮನಾಗುವುದಲ್ಲ. ಹತ್ತಾರು ಚೆಂದದ ಚಿತ್ರಗಳ ಸ್ಪರ್ಧೆಯಲ್ಲಿ ತಮ್ಮ ಚಿತ್ರದ ಬಿಗುವನ್ನು ಒರೆಗೆ ಹಚ್ಚಿ ನೋಡುವುದು ಅವರ ಕನಸು.

ಬೇರೆ ದೇಶದವರು ಇದನ್ನ ಕೇಳಿದರೆ ನಗುತ್ತಾರೆ

ಅನೇಕ ಚಿತ್ರೋತ್ಸವಗಳಲ್ಲಿ ಕನ್ನಡ ಸಿನಿಮಾಗಳು ಅವಕಾಶ ವಂಚಿತವಾಗುವುದು ಯಾತಕ್ಕೆ ಗೊತ್ತೆ ; ಐಎಫ್‌ಎಫ್‌ಐನ ಏಷ್ಯನ್‌ ಸ್ಪರ್ಧೆಯಲ್ಲಿ ಅವಕಾಶ ಗಿಟ್ಟಿಸದ ಚಿತ್ರಗಳಿಗೆ ಬೇರಾವ ಸ್ಪರ್ಧೆಗಳಿಗೂ ಬುಲಾವು ಬರೋದಿಲ್ಲ. ಈ ಕಾರಣಕ್ಕೇ ನನಗೆ ಸಿಕ್ಕಾಪಟ್ಟೆ ಬೇಜಾರಾಗಿದ್ದು. ಚಿತ್ರೋತ್ಸವದ ನಿರ್ದೇಶನಾಲಯಕ್ಕೂ ಇ- ಮೇಲ್‌ ಬರೆದೆ. ಆದರೆ ಅದರಿಂದ ಕಿಂಚಿತ್ತೂ ಪ್ರಯೋಜನವಾಗಲಿಲ್ಲ. ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರಕ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಇಲ್ಲ ಅಂದ್ರೇನು? ಬೇರೆ ದೇಶದವರು ಇದನ್ನ ಕೇಳಿದರೆ ನಗುತ್ತಾರೆ.

ಕಾಸರವಳ್ಳಿ ಕಳಕಳಿ ‘ದ್ವೀಪ’

ಇವತ್ತು ಬಾಗಲಕೋಟೆಗೆ ಒಂದು ಸುತ್ತು ಹೋಗಿಬಂದರೆ ಗೊತ್ತಾಗುತ್ತೆ ; ಮುಳುಗಡೆಯ ಬಿಸಿ ಅನುಭವಿಸುವವರ ಪಡಪಾಟಲು. ದ್ವೀಪ ಚಿತ್ರದ್ದು ಇದೇ ಸಮಸ್ಯೆಯ ವಸ್ತು. ಮುಳುಗಡೆ ಆಗುವ ಪ್ರದೇಶಗಳ ಮಂದಿಗೆ ಸರ್ಕಾರ ಇವತ್ತು ಹೇಗೆ ಪುನರ್ವಸತಿ ಕಲ್ಪಿಸುತ್ತಿದೆ ಹೇಳಿ? ಆಲಮಟ್ಟಿ ಅಣೆಕಟ್ಟು ಕಂಠ ಮಟ್ಟ ತುಂಬಿದ ಸಂತೋಷವನ್ನು ಸರ್ಕಾರ ರಾಜಧಾನಿಯಲ್ಲಿ ಕೊಚ್ಚಿಕೊಳ್ಳುತ್ತಿರುವಾಗಲೇ, ನೆಲೆಗೆಟ್ಟ ಎಷ್ಟೋ ಸಹಸ್ರ ಕುಟುಂಬಗಳು ಹಿಡಿಶಾಪ ಹಾಕುತ್ತಿದ್ದವು. ಕಾಸರವಳ್ಳಿ ತಮ್ಮದೇ ಆದ ಧಾಟಿಯಲ್ಲಿ ಪುನರ್ವಸತಿಗೆ ಆಧುನಿಕ ಸಿದ್ಧಾಂತವನ್ನು ‘ದ್ವೀಪ’ ಮೂಲಕ ಕೊಟ್ಟಿದ್ದಾರೆ. ಆ ಮೂಲಕ ಪ್ರಸ್ತುತ ಸಮಸ್ಯೆಯಾಂದಕ್ಕೆ ಪರಿಹಾರ ಕೊಡುವ ಕಳಕಳಿಯೂ ಇದರಲ್ಲಿದೆ ಎನ್ನುತ್ತಿದೆ ಸಿನಿಮಾ ಚಿಂತಕರ ಚಾವಡಿ.

ಸುರಿದದ್ದು ಮಳೆಯಲ್ಲ ; ಎಡರುಗಳು

ಮಳೆ ಜೋರಾಗಿ ಸುರಿಯುವ ಕಾಲದಲ್ಲೇ ಚಿತ್ರೀಕರಣ ಶುರು ಮಾಡಿದ ಕಾಸರವಳ್ಳಿಗೆ ಆಮೇಲೆ ಇದಿರಾದ ಎಡರುಗಳು ಅಷ್ಟಿಷ್ಟಲ್ಲ. ಸಿನಿಮಾ ಚಿತ್ರೀಕರಣ ಅರ್ಧವೂ ಮುಗಿದಿರಲಿಲ್ಲ, ಅಷ್ಟರಲ್ಲಿ ರಾಜ್‌ಕುಮಾರ್‌ ಅಪಹರಣವಾಯಿತು. ರಾಜ್‌ಕುಮಾರ್‌ ಬಿಡುಗಡೆಯಾದ ಮೇಲೆ ಚಿತ್ರದ ಮುಖ್ಯ ಪಾತ್ರವೇ ಆದ ಮಳೆ ಕೈಕೊಟ್ಟಿತು. ಹಾಗಂತ ಕಾಸರವಳ್ಳಿ ಕೈಕಟ್ಟಿ ಕೂರಲಾಗಲಿಲ್ಲ. ಕಿಗ್ಗಲ ನಾಮ ಸಂವತ್ಸರದ ಕೆಮೆರಾದಲ್ಲೇ ಮಳೆಯ ಮನೋಹರ ಅನುಭವ ಕಟ್ಟಿಕೊಡಬಲ್ಲ ಪ್ರತಿಭೆ ರಾಮಚಂದ್ರ ಜೊತೆಗಿದ್ದರು. ಚಿತ್ರದ ಅರ್ಧ ಭಾಗ ಸಹಜ ಮಳೆ. ಇನ್ನರ್ಧ ಕೆಮೆರಾ ಕೈಚಳಕದ ಮಳೆ. ತಮ್ಮ ಕೆಲಸವನ್ನು ರಾಮಚಂದ್ರ ಪಸಂದಾಗಿ ಮಾಡಿದ್ದಾರೆ ಅನ್ನುವುದಕ್ಕೆ ಈಗಾಗಲೇ ಅವರ ಬುಟ್ಟಿಗೆ ಬಿದ್ದಿರುವ ಪ್ರಶಸ್ತಿಗಳೇ ಸಾಕ್ಷಿ. ಸೌಂದರ್ಯ ಕನಸಲ್ಲಿ ಇವತ್ತಿಗೂ ಕೂಡ ದ್ವೀಪ ಚಿತ್ರದ ಪಾತ್ರ ಸುಳಿದಾಡುತ್ತಿದೆಯಂತೆ.

ಇಷ್ಟೆಲ್ಲಾ ಕಷ್ಟಪಟ್ಟು ಸೊಗಸಾದ ಚಿತ್ರ ನಿರ್ದೇಶಿಸಿರುವ ಕಾಸರವಳ್ಳಿ ‘ದ್ವೀಪ’ವನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಕಳುಹಿಸುವ ಅವಕಾಶದಿಂದಲೇ ವಂಚಿತರಾಗಿ, ಕಂಗಾಲಾಗಿದ್ದಾರೆ.

ಸ್ಪರ್ಧೆಯ ಅವಕಾಶ ಗಿಟ್ಟದಿದ್ದರೂ, ಐಎಫ್‌ಎಫ್‌ಐನಲ್ಲಿ ಚಿತ್ರ ನೋಡಿದ ದಿಗ್ಗಜರು ‘ದ್ವೀಪ’ದ ಬಗ್ಗೆ ಹೇಳಿದ್ದು- Outstanding, great, wonderful. ಆದರೂ ಸ್ಪರ್ಧೆಗೆ ಏಕೆ ಅವಕಾಶ ಕೊಡಲಿಲ್ಲ ?- ಐಎಫ್‌ಎಫ್‌ಐನ ನಿರ್ದೇಶನಾಲಯವನ್ನು ಪ್ರಶ್ನಿಸಿ ನೀವೂ ಬರೆಯಿರಿ.

ದ್ವೀಪದ ಒಳ ಹೊರಗೆ..
ದ್ವೀಪ ಮೊದಲ ಅತ್ಯುತ್ತಮ ಚಿತ್ರ
ಗಿರೀಶ್‌ ಗರಿಮೆ : ಸೌಂದರ್ಯ ‘ದ್ವೀಪ’ಕ್ಕೆ ಸ್ವರ್ಣಕಮಲ
ನಾನು ಶ್ರೇಷ್ಠ ನಟ ಪ್ರಶಸ್ತಿ ನಿರೀಕ್ಷಿಸಿದ್ದೆ- ಅವಿನಾಶ್‌
‘ದ್ವೀಪ’ದಲ್ಲಿನ ಮಳೆ ನನ್ನ ಬಾಲ್ಯ ಗೆಳೆಯ - ಕಾಸರವಳ್ಳಿ
‘ನನಗೆ ಮಾತೇ ಹೊರಡುತ್ತಿಲ್ಲ ’-ದ್ವೀಪ ಸುಂದರಿ ಸೌಂದರ್ಯ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada