»   » ಸಿನಿ ಬಿಕ್ಕಟ್ಟು : ಅಶೋಕ್‌ ವಿರುದ್ಧ ವಿಷ್ಣು, ಸಂದೇಶ್‌ ಸಮರ!

ಸಿನಿ ಬಿಕ್ಕಟ್ಟು : ಅಶೋಕ್‌ ವಿರುದ್ಧ ವಿಷ್ಣು, ಸಂದೇಶ್‌ ಸಮರ!

Subscribe to Filmibeat Kannada


ಗೌಡ್ರು ಮತ್ತು ಸಿದ್ದರಾಮಯ್ಯನ ಕಾಳಗ ಮುಗಿದು ಬಿಸಿಬಿಸಿ ರಾಜಕಾರಣಕ್ಕೆ ಸದ್ಯಕ್ಕೆ ತೆರೆಬಿದ್ದಿದೆ. ರಾಜಕಾರಣ ಮೀರಿಸುವಂತೆ, ಸ್ಯಾಂಡಲ್‌ವುಡ್‌ನಲ್ಲಿ ಏನೇನೋ ಬೆಳವಣಿಗೆಗಳು, ಕುತಂತ್ರಗಳು ನಡೆಯುತ್ತಿದೆ. ಸದ್ಯಕ್ಕೆ ಎಲ್ಲರ ಕಣ್ಣು ಅಶೋಕ್‌ ಮೇಲೆ! ಅವರಿಗೆ ಅರ್ಧಚಂದ್ರ ನೀಡುವ ಬಯಕೆ ನಿರ್ಮಾಪಕರು ಮತ್ತು ಕಲಾವಿದರದು. ತಂತ್ರಗಾರಿಕೆಯಲ್ಲಿ ಅಶೋಕ್‌ ಕೂಡ ಕಮ್ಮಿಯೇನಿಲ್ಲ ಬಿಡಿ...

  • ಎಸ್ಕೆ.ಶಾಮಸುಂದರ
    shami.sk@greynium.com
ಬೆಂಗಳೂರು : ಶನಿವಾರ ಮಧ್ಯಾಹ್ನ ಪ್ರೆಸ್‌ಕ್ಲಬ್‌ ಅಂಗಳದಲ್ಲಿ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರು ತುಂಬಿ ತುಳುಕುತ್ತಿದ್ದರು. ಒಂದು ರೀತಿ ಶಕ್ತಿ ಪ್ರದರ್ಶನದ ವೇದಿಕೆಯಂತೆ ಅಲ್ಲಿನ ವಾತಾವರಣ ಕಂಡು ಬಂತು.

ಸುಮಾರು ದಿನಗಳಿಂದ ಕನ್ನಡ ಚಿತ್ರರಂಗವನ್ನು ಕಾಡುತ್ತಿರುವ ಇಕ್ಕಟ್ಟು-ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾತನಾಡಲು, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘದ ಹಿರಿಯರು-ಕಿರಿಯರು ಸುದ್ದಿಗೋಷ್ಠಿಯಲ್ಲಿ ಆಸಕ್ತಿ ಪ್ರದರ್ಶಿಸಿದರು. ಎಲ್ಲರ ಮಾತು, ಅಶೋಕ್‌ ವರ್ತನೆಯನ್ನು ಖಂಡಿಸುವುದೇ ಆಗಿತ್ತು.

ಮಾತು ಆರಂಭಿಸಿದ ನಿರ್ಮಾಪಕರ ಸಂಘದ ಅಧ್ಯಕ್ಷ ಸಂದೇಶ್‌ ನಾಗರಾಜ್‌, ಎಲ್ಲಾ ಸಮಸ್ಯೆಗಳಿಗೂ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್‌ ಅವರೇ ಕಾರಣ. ಅವರನ್ನು ಬಿಟ್ಟು ಕಾರ್ಮಿಕರು ಹೊರಬರುವುದಾದರೆ, ನಾವೆಲ್ಲರೂ ಒಂದೇ ಮನೆಯವರಂತೆ ಇರಬಹುದು. ಕಾರ್ಮಿಕರು ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸ್ಪಂದಿಸಬೇಕು. ಅವರ ಎಲ್ಲಾ ಸಮಸ್ಯೆ ಮತ್ತು ಬೇಡಿಕೆಗಳನ್ನು ನಾವು ಇತ್ಯರ್ಥಪಡಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯುದ್ದಕ್ಕೂ ಅಶೋಕ್‌ ವಿರುದ್ಧ ವಾಗ್ದಾಳಿ ಮುಂದುವರೆಯಿತು. ಸಂದೇಶ್‌ ಮಾತನ್ನು ಸಮರ್ಥಿಸಿದ ನಟ ಡಾ.ವಿಷ್ಣುವರ್ಧನ್‌, ಸಂಧಾನದ ಮೂಲಕ ಚಿತ್ರರಂಗದ ಬಿಕ್ಕಟ್ಟು ಇತ್ಯರ್ಥಗೊಂಡಿದೆ ಎಂಬರ್ಥದಲ್ಲಿ ಕೆಲವರು ಪತ್ರಿಕೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಇದು ಅಪ್ಪಟ ಸುಳ್ಳು. ಸಭೆಯಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಂದು ಚರ್ಚೆಯೇ ನಡೆಯಲಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕಲಾವಿದರಾದ ನಮಗೆ ನಿರ್ಮಾಪಕರು ಬೇಕು, ಕಾರ್ಮಿಕರು ಬೇಕು. ಸಂದರ್ಭ ಬಳಸಿಕೊಂಡು ಹಟವಾದಿಯಂತೆ, ಬ್ಲಾಕ್‌ಮೇಲ್‌ ಮಾಡುವಂತೆ ಯಾರೂ ವರ್ತಿಸಬಾರದು. ಹತ್ತು ನಿರ್ಮಾಪಕರ ಚಿತ್ರಗಳಿಗೆ ಬಹಿಷ್ಕಾರ ಹಾಕುವುದಕ್ಕೆ, ಬಹಿಷ್ಕಾರವನ್ನು ತೆರವುಗೊಳಿಸುವುದಕ್ಕೆ ಅಶೋಕ್‌ ಅವರಿಗೆ ಹಕ್ಕಿಲ್ಲ. ಹೀಗೆ ಮಾಡಲು ಅಶೋಕ್‌ ಯಾರು ಎಂದು ವಿಷ್ಣುವರ್ಧನ್‌ ಪ್ರಶ್ನಿಸಿದರು.

ಇಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರ ಅಭಿಪ್ರಾಯಗಳನ್ನು ಗಮನಿಸಿದರೆ, ಅಶೋಕ್‌ ಅವರ ತಲೆದಂಡವನ್ನು ಬಯಸಿದಂತೆ ತೋರುತ್ತಿತ್ತು. ಈ ಸಂದರ್ಭದಲ್ಲಿ ನಟರಾದ ರಮೇಶ್‌, ದೇವರಾಜ್‌, ಮಾಸ್ಟರ್‌ ಮಂಜುನಾಥ್‌, ಜೈಜಗದೀಶ್‌, ಶ್ರೀನಾಥ್‌, ಸುಂದರರಾಜ್‌, ನಿರ್ಮಾಪಕರಾದ ಕೊಬ್ರಿ ಮಂಜ, ಸಾ.ರಾ.ಗೋವಿಂದ್‌, ರಾಕ್‌ಲೈನ್‌ ವೆಂಕಟೇಶ್‌ ಕೆ.ಸಿ.ಎನ್‌.ಚಂದ್ರು, ಪ್ರವೀಣ್‌, ಗಣೇಶ್‌, ನಿರ್ದೇಶಕರಾದ ರಾಜೇಂದ್ರ ಸಿಂಗ್‌ ಬಾಬು, ನಂಜುಂಡೇಗೌಡ ಮತ್ತಿತರರು ಹಾಜರಿದ್ದರು.

ಅಶೋಕ್‌ರನ್ನು ಮಟ್ಟಹಾಕಲು ಪಾರ್ವತಮ್ಮ ರಾಜ್‌ಕುಮಾರ್‌ ಕುಟುಂಬದ ಸಹಕಾರ, ಅಂಬರೀಷ್‌ ಆಶೀರ್ವಾದ ಇದೆಯೇನೋ ಎಂಬಂತೆ ಕಂಡು ಬಂತು. ಚಿತ್ರರಂಗದ ಕಗ್ಗಂಟು ಈ ವರ್ಷ ಮುಗಿಯುವುದು ಕಷ್ಟ. ಯಾಕಂದ್ರೆ; 2007 ದೂರದಲ್ಲೇನು ಇಲ್ಲ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada