ದರ್ಶನ್ ಜೀವನದ ಕಥೆಗೆ ಹೊಸ ಕ್ಯಾರೆಕ್ಟರ್ ಎಂಟ್ರಿ

ಇಷ್ಟು ವರ್ಷಗಳ ಕಾಲ ಸುದ್ದಿಯಲ್ಲಿಯೇ ಇಲ್ಲದಿದ್ದ ವಿಜಯಲಕ್ಷ್ಮಿ ಅವರ ಅಣ್ಣನ ಹೆಂಡತಿ ಶ್ರೀಲಕ್ಷ್ಮಿ ಮಾತಿನ ಲಾಂಗ್ ಝಳಪಿಸುತ್ತ ವಿಜಯಲಕ್ಷ್ಮಿ ಮತ್ತು ಮನೆಯವರ ವಿರುದ್ಧ ಕಾದಾಟಕ್ಕಿಳಿದಿದ್ದಾರೆ. ದರ್ಶನ್ ರಿಂದ ಸಖತ್ತು ಹೊಡೆತ ತಿಂದು ಏನೂ ಆಗೇ ಇಲ್ಲ ಎಂದು ಹೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಲಕ್ಷ್ಮಿ ಗಾಯದ ಮೇಲೆ ಬರೆ ಎಳೆದಿದ್ದಾರೆ ಶ್ರೀಲಕ್ಷ್ಮಿ.
ಈ ಶ್ರೀಲಕ್ಷ್ಮಿ ಯಾರೆಂದರೆ, ವಿಜಯಲಕ್ಷ್ಮಿ ಅವರ ಅಣ್ಣ ವಾಸುದೇವ ಅವರ ಹೆಂಡತಿ. ಇವರಿಬ್ಬರಿಗೂ 10 ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ಗಂಡ ಹೆಂಡತಿ ಬೇರೇಬೇರೆಯಾದರು. ಇದಕ್ಕೆ ಕಾರಣ ವಿಲಕ್ಷಣ ಮನಸ್ಸಿನ ವಾಸುದೇವ, ಅವರ ತಾಯಿ ಮತ್ತು ವಿಜಯಲಕ್ಷ್ಮಿ ಎಂಬುದು ಶ್ರೀಲಕ್ಷ್ಮಿಯ ಆರೋಪ.
9 ವರ್ಷಗಳ ಕಾಲ ಸುಮ್ಮನಿದ್ದ ಶ್ರೀಲಕ್ಷ್ಮಿ ಅವರು ದರ್ಶನ್ ಮತ್ತು ವಿಜಯಲಕ್ಷ್ಮಿ ಕಥೆ ಬೀದಿಗೆ ಬೀಳುತ್ತಿದ್ದಂತೆ, ಮಹಿಳಾ ಸಂಘಟನೆಗಳ ಸಹಾಯದೊಂದಿಗೆ ರಣರಂಗಕ್ಕಿಳಿದಿದ್ದಾರೆ. ನನಗೂ ವಿಜಯಲಕ್ಷ್ಮಿ ಕುಟುಂಬದಿಂದ ಅನ್ಯಾಯವಾಗಿದೆ. ನನಗೂ ನ್ಯಾಯ ದೊರಕಿಸಿಕೊಡಿ ಎಂದು ಟಿವಿಗಳೆದಿರು ಬೊಂಬಡಾ ಬಜಾಯಿಸುತ್ತಿದ್ದಾರೆ. ಎಂಥ ನ್ಯಾಯ ಬೇಕೆಂಬುದನ್ನು ಮಾತ್ರ ಸ್ಪಷ್ಟವಾಗಿ ಹೇಳುತ್ತಿಲ್ಲ.
ದರ್ಶನ್ ಅವರು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕಾಮಾಲೆ ರೋಗದ ಚಿಕಿತ್ಸೆಗಾಗಿ ಐಸಿಯು ಸೇರಿದ್ದರೆ, ವಿಜಯಲಕ್ಷ್ಮಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗಂಡ ಹೆಂಡತಿಯ ಮಧ್ಯೆ ಏನೇ ಇರಲಿ ನಮಗೆ ಮಾತ್ರ ದರ್ಶನ್ ಮುಖ ನಮಗೆ ತೋರಿಸಿ, ಅವರು ಜೈಲಿಂದ ಹೊರಬರಲಿ ಎಂದು ಅಭಿಮಾನಿಗಳು ಆಸ್ಪತ್ರೆಯ ಹೊರಗಡೆ ಆಗ್ರಹಿಸುತ್ತಿದ್ದಾರೆ.


Click it and Unblock the Notifications











