»   » 'ಸಿಲ್ಕ್ ಸ್ಮಿತಾ ಸತ್ತಿದ್ದು ಆತ್ಮಹತ್ಯೆಯಿಂದಲ್ಲ'

'ಸಿಲ್ಕ್ ಸ್ಮಿತಾ ಸತ್ತಿದ್ದು ಆತ್ಮಹತ್ಯೆಯಿಂದಲ್ಲ'

Subscribe to Filmibeat Kannada

ಆಂಧ್ರದಲ್ಲಿ ಹುಟ್ಟಿ ನಾಲ್ಕನೇ ಕ್ಲಾಸು ಮೆಟ್ಟಿಲಿನಿಂದ ನೇರವಾಗಿ ಸಿನೆಮಾರಂಗಕ್ಕೆ ಜಿಗಿದು, ತಮಿಳಿನಲ್ಲಿ ಹೆಸರು ಮಾಡಿ, ಮಲಯಾಳಂನಲ್ಲಿ ಹಣ ಮಾಡಿ, ಕನ್ನಡ ಚಿತ್ರರಸಿಕರಿಗೂ 'ಕರೆಂಟು' ಹೊಡೆಸಿ 1996ರ ಒಂದು ದಿನ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಹೆಣವಾಗಿ ದೊರೆತ ವಿಜಯಲಕ್ಷ್ಮಿ ಎಂಬ ಕಲಾವಿದೆಯ ಸಾವಿನ ಭೂತ ಮತ್ತೊಮ್ಮೆ ಎದ್ದುನಿಂತಿದೆ.

ಈ ವಿಜಯಲಕ್ಷ್ಮಿ ಮತ್ತಾರೂ ಅಲ್ಲ ದೇವರಾಜ್ ನಟನೆಯ 'ಲಾಕಪ್ ಡೆತ್' ಕನ್ನಡ ಚಿತ್ರದಲ್ಲಿ 'ಬಂತು ಬಂತು ಕರೆಂಟು ಬಂತು' ಹಾಡಿಗೆ ಹೆಜ್ಜೆ ಹಾಕಿ ಚಿತ್ರರಸಿಕರ ಮೈಬೆಚ್ಚಗಾಗಿಸಿದ ಬಹುಭಾಷಾ ತಾರೆ ಸಿಲ್ಕ್ ಸ್ಮಿತಾ. ವಿಜಯಲಕ್ಷ್ಮಿ ಸ್ಮಿತಾಳ ಹುಟ್ಟುಹೆಸರು. ಎಲ್ಲರೂ ಮಾಡುವಂತೆ ನಟನೆಗೆ ಕಾಲಿಟ್ಟಕೂಡಲೇ ಬದಲಿಸಿಕೊಂಡ ಹೆಸರು ಸ್ಮಿತಾ. ಆದರೆ, ಸ್ಮಿತಾಳಿಗೆ ಹೆಸರು ತಂದುಕೊಟ್ಟ 'ವಂಡಿ ಚಕ್ಕರಂ' ಚಿತ್ರದಲ್ಲಿ ಆಕೆ ಮಾಡಿದ ಪಾತ್ರದ ಹೆಸರು 'ಸಿಲ್ಕ್' ಕೊನೆಯವರೆಗೂ ಆಕೆಯ ಹೆಸರಿನೊಂದಿಗೆ ಅಂಟಿಕೊಂ‌ಡಿತು.

ಸ್ಮಿತಾ ಅನ್ನುವ ಹೆಸರೇ ಬೇಕಾಗಿಲ್ಲ. ಸಿಲ್ಕ್ ಅಂದರೆ ಸಾಕು ಮೈಮೇಲಿನ ರೋಮಗಳೆಲ್ಲ ನಿಮಿರಿಕೊಂಡುಬಿಡುತ್ತಿದ್ದ ಕಾಲವೊಂದಿತ್ತು. ತಮಿಳು, ಕನ್ನಡ, ಮಲಯಾಳಂ, ಹಿಂದಿ ಚಿತ್ರಗಳಲ್ಲಿ 200ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದರು. ಭಾರೀ ಸಂಚಲನವುಂಟು ಮಾಡಿದ ಚಿತ್ರ 'ಲಯನಂ' ಸ್ಮಿತಾಳನ್ನು ಸೆಮಿ ಪೋರ್ನ್ ನಾಯಕಿಯ ಪಟ್ಟಕ್ಕೇರಿಸಿ ಕೂಡಿಸಿಬಿಟ್ಟಿತು. ಸುಮಾರು ದಶಕಗಳ ಕಾಲ ಮಾಯಾಜಾಲ ಬೀಸಿದ ಮಾದಕ ಕಂಗಳ ಬೆಡಗಿ ಜೀವನ ಅಂತ್ಯವಾಗಿದ್ದು ಮಾತ್ರ ದುರಂತ.

12 ವರ್ಷಗಳ ಹಿಂದೆ ಸಿಲ್ಕ್ ಸತ್ತಾಗ ಅದು ಆತ್ಮಹತ್ಯೆಯೆಂದು ಪೊಲೀಸರು ಷರಾ ಬರೆದು ಕೇಸು ಮುಚ್ಚಿಹಾಕಿದ್ದರು. "ಆಕೆಯ ಸಾವು ಆತ್ಮಹತ್ಯೆ ಅಲ್ಲವೇ ಅಲ್ಲ" ಎಂದು ಸ್ಮಿತಾಳೊಂದಿಗೆ ಎರಡು ಚಿತ್ರ ನಿರ್ಮಿಸಿದ ತಿರುಪತಿ ರಾಜಾ ಎಂಬ ನಿರ್ದೇಶಕ ಇನ್ನೂ ಬಿಡುಗಡೆಯಾಗಬೇಕಿರುವ ಪುಸ್ತಕದಲ್ಲಿ ಬರೆದು ಆಕೆಯ ಸಾವಿನ ಸುತ್ತ ಹಬ್ಬಿಕೊಂಡಿದ್ದ ಅನುಮಾನಗಳ ಹುತ್ತವನ್ನು ಬಡೆದೆಬ್ಬಿಸಿದ್ದಾರೆ.

ಸಿಲ್ಕ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಅನ್ನುವುದಕ್ಕೆ ನನ್ನ ಹತ್ತಿರ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ರಾಜಾ ಹೇಳಿ ಸ್ಮಿತಾಳೊಂದಿಗೆ ಒಡನಾಟ ಹೊಂದಿದ್ದ ಅನೇಕ ದೊಡ್ಡ ಹೆಸರಿನ ವ್ಯಕ್ತಿಗಳಲ್ಲಿ ನಡುಕ ಹುಟ್ಟುವಂತೆ ಮಾಡಿದ್ದಾರೆ. ಪುಸ್ತಕದಲ್ಲಿ ಸ್ಮಿತಾಳ ಒಡನಾಟಗಳು, ಸಾವಿಗೆ ಸಂಬಂಧಿಸಿದ ಅನೇಕ ಸತ್ಯ ಸಂಗತಿಗಳು, ಯಾರೂ ಊಹಿಸಲಾಗದ ರಹಸ್ಯಗಳು ಅಡಗಿವೆ ಎಂದು ಹೇಳಲಾಗುತ್ತಿದೆ.

ಸ್ಮಿತಾ ಸತ್ತನಂತರ ಸಾವಿನ ಬಗ್ಗೆ ಕೆಲ ಮಹಿಳಾ ಸಂಘಟನೆ ಮತ್ತು ಸಾಮಾಜಿಕ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸಿದರೂ ಸ್ಮಿತಾಳದ್ದು ಆತ್ಮಹತ್ಯೆಯೆಂದು ತಿಪ್ಪೆ ಸಾರಿ ಕೇಸನ್ನು ಮುಚ್ಚಿಹಾಕಲಾಗಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada