twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗ ಉಳಿಯಬೇಕಾದರೆ ಡಬ್ಬಿಂಗ್ ಬೇಕೇ ಬೇಕು

    By * ಬಿ. ಜಿ. ಪತ್ತಾರ್, ಹುಣಸಗಿ
    |

    ಕನ್ನಡ ಚಿತ್ರೋದ್ಯಮಕ್ಕೆ ಡಬ್ಬಿಂಗ್ ಬೇಕೆ ಬೇಡವೆ ಎಂಬವಿಷಯ ಈಗಾಗಲೆ ಸಾಕಷ್ಟು ಬಾರಿ ಚರ್ಚೆಗೆ ಬಂದಿದೆ. ಒಂದು ವರ್ಗ ಡಬ್ಬಿಂಗ್ ಮಾತೆತ್ತಿದರೆ ಬೀದಿಗಿಳಿದು ಹೋರಾಟ ಮಾಡ್ತೀವಿ ಅಂತಾರೆ. ಇನ್ನೊಂದು ವರ್ಗ ಡಬ್ಬಿಂಗ್ ಪರ ವಕಾಲತ್ತು ವಹಿಸಿ ಗಂಟಲು ನೋಯಿಸಿಕೊಳ್ಳುತ್ತದೆ. ಬಡಪಾಯಿ ಪ್ರೇಕ್ಷಕರು ಮಾತ್ರ ಇವರಿಬ್ಬರ ವಾದವಿವಾದಗಳಿಗೆ ಕಿವಿಗೊಡದೆ ತಮಗಿಷ್ಟ ಬಂದ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಹಾಗಿದ್ದರೆ ನಿಜಕ್ಕೂ ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೆ ಮಾರಕವೆ? ಇಷ್ಟಕ್ಕೂ ಡಬ್ಬಿಂಗ್ ಬೇಕೆ ಬೇಡವೆ? ಎಂಬುದನ್ನು ಲೇಖಕರು ವಸ್ತುನಿಷ್ಠವಾಗಿ ವಿಶ್ಲೇಷಿಸಿದ್ದಾರೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಸಂಪಾದಕ

    ಕಚಕಾಂತಕ ಒಕ್ಕೂಟ ಅಧ್ಯಕ್ಷ(ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟ) ಹಾಗೂ ನಟ ಅಶೋಕ್ ಸೇರಿದಂತೆ ಕನ್ನಡ ಚಿತ್ರರಂಗದ ಬುದ್ಧಿಜೀವಿಗಳು ಹೇಳುವ ಹಾಗೆ ಕನ್ನಡ ಸಂಸ್ಕೃತಿ ಹಾಳಾಗುವದಾದರೆ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.

    1. ಈಗಾಗಲೆ ಹಲವಾರು ದಶಕಗಳಿಂದ ಹಿಂದಿ, ತಮಿಳು, ತೆಲುಗುಗಳಲ್ಲಿ... 'ಡಬ್ಬಿಂಗ್' ಇದೆ. ಇಂದು ಡಬ್ಬಿಂಗ್ ಇಲ್ಲದ ಕನ್ನಡ ಸಂಸ್ಕೃತಿ ಯಾವ ಉಚ್ಚ್ರಾಯಸ್ಥಿತಿಯಲ್ಲಿ ತೇಲಾಡ್ತಾಯಿದೆ? ಹಾಗೂ ಹಿಂದಿ, ತಮಿಳು, ತೆಲುಗುಗಳೆಲ್ಲಾ ಯಾವ ಅಧೋಗತಿಯಲ್ಲಿ ಮುಳುಗಿವೆ?

    2. ಈ ನಮ್ಮ ಕನ್ನಡ ಸಿನಿಮಾ ಬೇರೆ ಭಾಷೆಗೆ ಡಬ್ ಆದಾಗ ನಾವೆಷ್ಟೋ ಹೆಮ್ಮೆ ಪಡುತ್ತೇವೆ. ನಮ್ಮ ಪ್ರತಿಭೆಯನ್ನ, ನಾಯಕ ನಟ, ಕಥೆಯನ್ನು ಜನ ಮೆಚ್ಚಿಕೊಂಡರೆ ನಾವು ಖುಷಿ ಪಡುತ್ತೇವೆ. ಉದಾ: ಸೂಪರ್, ಜಾಕಿ, ಸತ್ಯ ಹರಿಶ್ಚಂದ್ರ, ಮಾಲ್ಗುಡಿ ಡೇಸ್..ಇತ್ಯಾದಿ. ಆ ಹೆಮ್ಮೆ ಬೇರೆ ಭಾಷೆಯವರಿಗೆ, ಆ ಖುಷಿ ಕೊಡುವ ಸಹೃದಯ ಕನ್ನಡಕ್ಕೆ ಏಕಿಲ್ಲ?

    3. ಇದರಿಂದ ಕನ್ನಡ ಸಂಸ್ಕೃತಿ ಹಾಳಾಗುವದಾದರೆ, ನೀವ್ಯಾಕೆ ಬೇರೆ ಭಾಷೆಯ ಸಂಸ್ಕೃತಿ ಹಾಳುಮಾಡ್ತೀರಿ? ನೀವು ಅಲ್ಲಿಯ 30 ಸಾವಿರ ಕಾರ್ಮಿಕರನ್ನು ಬೀದಿಪಾಲು ಮಾಡುವದನ್ನೂ ನಿಲ್ಲಿಸಿ. ನಮ್ಮ ದೇಶದ, ರಾಜ್ಯದ ಸಂಸ್ಕೃತಿಯನ್ನ ನಿಜವಾಗಿಯೂ ತೋರಿಸ್ತಾರಾ? ಶೇಕಡಾ 90 ಬರೀ ಮಚ್ಚು ಲಾಂಗು ಇಲ್ಲಾ ರಿಮೇಕು!

    4. ಬಿ. ಸರೋಜಾ ದೇವಿಯವರು ಹೇಳಿದಂತೆ ನಾವೆಂದೂ, ಟೈಟಾನಿಕ್, ಅವತಾರ್, ಅಟ್ಟೆನ್‌ಬರೊ ಅವರ ಗಾಂಧಿ, ಟಾಮ್ ಅಂಡ್ ಜೆರ್ರಿ, ಮಾಹಾಭಾರತ... ಅಷ್ಟೇ ಏಕೆ ನೂರಾರು ಕೋಟಿ ವೆಚ್ಚದ ಎಂಧಿರನ್, ಮಗಧೀರದಂಥಹ ಸಿನಿಮಾ ಮಾಡಲು ಸಾಧ್ಯವಿಲ್ಲ. ಮಾಡಿದರೂ ಬರಿ ರು. 6 ಕೋಟಿ ಕನ್ನಡಿಗರಿಂದ ಆ ಹಣ ವಾಪಸ್ ತೆಗೆಯಲೂ ಸಾಧ್ಯವಿಲ್ಲ.

    5. ಕನ್ನಡ ಭಾಷೆ ಗಡಿಮೀರಿ ಬೆಳೆಯಬೇಕು ಅಂದ್ರೆ ಡಬ್ಬಿಂಗ್ ಬೇಕು. ಇವತ್ತು ಯಾವುದಾದರು ಪತ್ರಿಕೆ ತೆಗೆದು ನೋಡಿ ಪ್ರಕಟವಾಗುವ ಕೃತಿಗಳೆಲ್ಲಾ ಭಾಷಾಂತರ! ಅದರ ಹಿಂದಿನ ಉದ್ದೇಶ ಸಿನಿಮಾಗೆ ಯಾಕೆ ಅನ್ವಯವಾಗುವದಿಲ್ಲ? ಅಲ್ಲಿ ಸಂಸ್ಕೃತಿ ಪರಿಚಯವಾಗುತ್ತೆ, ಸಿನಿಮಾ ವಿಷಯದಲ್ಲಿ ಹಾಳಾಗುತ್ತೆ! ಇದು ಎಂಥಹ ಲಾಜಿಕ್ಕು?

    6. ಮಾನ್ಯ ಅಶೋಕ್ ಅವರೆ, ನೀವು ನಿಮ್ಮ ಸ್ನೇಹಿತ ರಜನಿಕಾಂತ್ ಎಷ್ಟು ತಮಿಳು ಸಿನಿಮಾ ನೋಡಿದ್ದೀರಿ? ಇಡೀ 6 ಕೋಟಿ ಕನ್ನಡಿಗರಿಗೆ ಯಾಕೆ ತಮಿಳು, ಹಿಂದಿ, ತೆಲುಗು, ಇಂಗ್ಲಿಷ್ ಕಲಿತು ಆಯಾ ಭಾಷೆಗಳಲ್ಲೆ ಸಿನಿಮಾ ನೋಡಿ ಅಂತ ಒತ್ತಡಹಾಕ್ತಾ ಇದ್ದೀರಿ? ಹಾಗೆ ನೋಡಿದರೆ ಬೇರೆಕಡೆ ತಯಾರಾದ ಯಾವ ವಸ್ತುವನ್ನು ನಾವು ಕನ್ನಡಿಗರು ಖರೀದಿ ಮಾಡಬಾರ್ದು, ನಮ್ಮ ಕಾರ್ಮಿಕರು ಬೀದಿಪಾಲಾಗ್ತಾರೆ.

    7. ಈಗ ವರ್ಷಕ್ಕೆ ಸುಮಾರು 100 ಸಿನಿಮಾ ಕನ್ನಡದಲ್ಲಿ ತಯಾರಾಗುತ್ತವೆ. ಡಬ್ಬಿಂಗ್ ಬಂದ್ರೆ ವರ್ಷಕ್ಕೆ ಸುಮಾರು 130 ರಿಂದ 140 ಸಿನಿಮಾ ಕನ್ನಡದಲ್ಲಿ ತಯಾರಾಗುತ್ತವೆ. ಇದರಲ್ಲಿ 30 ಸಾವಿರ ಕಾರ್ಮಿಕರನ್ನು ಬೀದಿಪಾಲಾಗುವದು ಎಲ್ಲಿ ಬಂತು? ಇದರಿಂದ ಬಹುಶಃ ರಿಮೇಕು ಕಡಿಮೆಯಾಗಬಹುದು, ಸ್ವಮೇಕ್ ಜಾಸ್ತಿಯಾಗಬಹುದು ಅಷ್ಟೆ!

    8. ಇನ್ನೊಂದು ದಾರಿ ಇದೆ. ಈ ಡಬ್ಬಿಂಗ್ ಸಿನಿಮಾಗಳಿಗೆ ಒಂದು ನೀತಿ ಸಂಹಿತಿ ರೂಪಿಸಿ, ಸದಭಿರುಚಿಯ ಸಿನಿಮಾಗಳನ್ನಷ್ಟೆ ಡಬ್ಬಿಂಗ್ ಮಾಡಲು ಅವಕಾಶ ಕೊಡುವುದು. ಇದರಿಂದ ಕೆಟ್ಟ ಸಿನಿಮಾಗಳು ಕನ್ನಡಕ್ಕೆ ಬರದಂತೆ ತಡೆದು, ಆಯಾ ಭಾಷೆಗಳಲ್ಲೆ ನೋಡಬಹುದು!

    9. ಅನ್ಯ ಭಾಷಿಕರಿಗೆ ಅವರವರ ಭಾಷೆಯ ಸಿನಿಮಾ ನೇರವಾಗಿ ಸಿಗೋದರಿಂದ ಕನ್ನಡಕಲಿಯುವ, ತಿಳಿಯುವ ಅವಶ್ಯಕತೆಯೇ ಇಲ್ಲದಂತಾಗಿದೆ. ಡಬ್ಬಿಂಗ್‌ನಿಂದ ತಮ್ಮದೇ ಸಿನಿಮಾ ಮಾತೃ ಭಾಷೆಯಲ್ಲೂ ಮತ್ತು ಕನ್ನಡದಲ್ಲೂ ನೋಡುವುದರಿಂದ ಭಾಷೆ ಅರಿತು ಕೊಳ್ಳಲು ಸಹಾಯ ಅಗುತ್ತೆ.

    ಈಗಾಗಲೆ ಹಿಂದಿಯ ಕಲರ್ಸ್ ಚಾನಲ್‌ನಲ್ಲಿ ನಮ್ಮ 'ವೀರ ಮದಕರಿ' , ತೆಲುಗಿನ 'ವಿಕ್ರಮಾರ್ಕುಡು' ದಿನಾ ಬರೊದಿಲ್ವೆ? ಸಾಲದ್ದಕ್ಕೆ ಅದೇ ಸಿನಿಮಾ ಹಿಂದಿಯಲ್ಲೂ ತಯಾರಾಗುತ್ತಿದೆ. ಏನಿದೆ ಎಲ್ಲಿದೆ ಸಮಸ್ಯೆ? ನಿಜಹೇಳಬೇಕಂದ್ರೆ, ಡಬ್ಬಿಂಗ್ ಇಲ್ಲದೆ ಇರೋದರಿಂದ ಬೇರೆ ಭಾಷೆ ಸಿನಿಮಾಗಳನ್ನು ಅರ್ಥಮಾಡಿಕೊಳ್ಳಲು ಎರಡೆರಡು ಬಾರಿ ನೋಡಬೇಕಾಗುತ್ತಿದೆ! 'ಫೈಂಡಿಂಗ್ ನಿಮೊ' ದಂತಹ ಕಾರ್ಟೂನ್ ಸಿನಿಮಾ ಮಕ್ಕಳಿಗೆ ಬೇಕು, ಇಲ್ಲ ಇಂಗ್ಲಿಷ್‌ನಲ್ಲಿ ತಿಳಿಸಿ ಹೇಳಬೇಕು.

    ಹೀಗೆ ನಮ್ಮ ಕನ್ನಡ ಚಿತ್ರರಂಗ ಸಣ್ಣದು, ನಮ್ಮ ಬಜೆಟ್ ಕಡಿಮೆ ಅಂತ ಎಷ್ಟುದಿನ ಬಾವಿ ಕಪ್ಪೆಗಳಾಗಿ ಇರೋಣ? ಬನ್ನಿ ಡಬ್ಬಿಂಗ್ ಅನುಮತಿಸಿ ಪ್ರಪಂಚದಾದ್ಯಂತ ಇರುವ ಎಲ್ಲ ಸಿನಿಮಾಗಳನ್ನ ಕನ್ನಡದಲ್ಲೆ ನೋಡಿ ಕನ್ನಡ ಬೆಳೆಸುವ. ಬೇರೆ ಭಾಷೆ ಸಿನಿಮಾ ನೇರವಾಗಿ ಕರ್ನಾಟಕಕ್ಕೆ ಬರೊದನ್ನ ತಪ್ಪಿಸುವ. ಆಗ 10 ಸ್ಕ್ರೀನ್ ಇರೊ ಮಾಲ್‌ನಲ್ಲಿ ಕೊನೆ ಪಕ್ಷ 7 ರಿಂದ 8 ಕನ್ನಡ ಸಿನಿಮಾ ನೋಡೋ ಭಾಗ್ಯ ನಮ್ಮದಾಗಲಿದೆ. ಇದರಿಂದ ಅನ್ಯಭಾಷಿಕರು ಕನ್ನಡವನ್ನ ನೋಡಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

    ಈ ತರಹದ ಡಬ್ಬಿಂಗ್ ಸಿನಿಮಾಗೆ ಟಿಕೆಟ್ ಬೆಲೆ 5 ರುಪಾಯಿ ಜಾಸ್ತಿ ಮಾಡಿ. ಆ ಹಣದಲ್ಲಿ ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಿ. ಮೂವತ್ತು ಸಾವಿರ ಕಾರ್ಮಿಕರಿಗೆ ದಾರಿ ಕಲ್ಪಿಸುವ ಹಾಗೆ ಭಾಷಾಂತರ ಕಾರ್ಮಿಕರನ್ನು ಬೆಳೆಸುವ ಕೆಲಸ ಆಗಲಿ. ಕನ್ನಡವನ್ನ ಬೀದಿಪಾಲು ಮಾಡುವದನ್ನು ನಿಲ್ಲಿಸಿ, ಇಲ್ಲದೆ ಇದ್ರೆ ಮಚ್ಚು ಲಾಂಗು ಹಿಡ್ಕೊಂಡು, ಒರಿಜಿನಲ್ ಸಿನಿಮಾದ ಶೇಕಡಾ 10 ಬಜೆಟ್‌ನಲ್ಲಿ ಚಿಂದಿ ಉಡಾಯಿಸಿ.

    ವಸ್ತುಸ್ಥಿತಿ: ಈಗಾಗಲೆ 10 ಸ್ಕ್ರೀನ್ ಮಾಲ್‌ನಲ್ಲಿ 2 ಕನ್ನಡ ಸಿನಿಮಾ ಇದ್ರೆ ಹಬ್ಬ. ಇದ್ದರೂ ಅದನ್ನ ತಲೆಗೆ 200 ರೂಪಾಯಿ ಟಿಕೆಟ್ ಕೊಟ್ಟು ಎಲ್ಲರೂ ಸಿನಿಮಾ ನೊಡಲು ಸಾದ್ಯವಿಲ್ಲ. ಇನ್ನು ಮೆಜೆಸ್ಟಿಕ್‌ಗೆ ಕಾರ್‌‍ನಲ್ಲಿ ಸಿನಿಮಾ ನೋಡಲು ಹೋದ್ರೆ, ಅದು ಒಂದು ದಿನದ ಕಾರ್ಯಕ್ರಮ ಮತ್ತು ಟ್ರಾಫಿಕ್‌‍ನ ನರಕಯಾತನೆ. ಹೇಗೋ ಒಂದೆರಡು ತಿಂಗಳಲ್ಲಿ ಟಿವಿಯಲ್ಲೆ ಬರುತ್ತಲ್ಲಾ?

    ಕೊನೆ ಮಾತು: ಒಳ್ಳೆಯ ಸಿನಿಮಾ ಮಾಡಿದ್ರೆ ಜನ ಖಂಡಿತಾ ಥಿಯೇಟರ್‌ಗೆ ಬಂದು ನೋಡ್ತಾರೆ. ಈ ಮಾತಿಗೆ ಇನ್ನೊಂದು ಲೈನ್ ಸೇರಿಸಿ, "ಒಳ್ಳೆಯ ಸಿನಿಮಾ ಮಾಡಿದ್ರೆ ಜನ ಖಂಡಿತಾ ಥಿಯೇಟರ್‌‍ಗೆ ಬಂದು ನೋಡ್ತಾರೆ, ಅದು ಯಾವ ಭಾಷೆದಾದ್ರು!" ಇಲ್ಲದಿದ್ರೆ ಬಿ, ಸಿ ಸೆಂಟರ್‌ಗಳಲ್ಲೂ ಬೇರೆಭಾಷೆಯ ಚಿತ್ರಗಳು 100 ದಿನ ಒಡಾ ಇದ್ವೆ ನೀವೇ ಹೇಳಿ?

    English summary
    Dubbing of non-Kannada movies has been the biggest concern for long time in Kannada and Ashok has been fight to stop it. Now here is an analytical study about dubbing films by BG Pattar. He raises series of questions on dubbing like what is the problem with dubbing? who will benefit? What is lose? He concludes that it will definitely benefit the industry If dubbing has been adopted in Kannada.
    Friday, March 11, 2011, 11:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X