twitter
    For Quick Alerts
    ALLOW NOTIFICATIONS  
    For Daily Alerts

    'ದೇವನಹಳ್ಳಿ'ಯಲ್ಲಿ ಗೌಡ, ಎಚ್ಡಿಕೆ, ರಾಧಿಕಾ ಪ್ರಸಂಗ

    By Staff
    |

    ವಿವಾದಾತ್ಮಕ ಚಿತ್ರಗಳ ಸಾಲಿಗೆ ಮತ್ತೊಂದು ಕನ್ನಡ ಚಿತ್ರ 'ದೇವನಹಳ್ಳಿ' ಹೊಸದಾಗಿ ಸೇರ್ಪಡೆಯಾಗಿದೆ. ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಅವರ ಮಗ ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ಮೇಲೆ ತೀಕ್ಷ್ಣ ವಿಡಂಬನೆಯ ಹಾಡೊಂದನ್ನು ರಚಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧ ಪಟ್ಟ ವಿವಾದಾತ್ಮಕ ಅಂಶಗಳನ್ನು ಈ ಚಿತ್ರ ಸ್ಪರ್ಶಿಸಿದೆ.

    ಆಶ್ಚರ್ಯವೆಂದರೆ ಈ ಚಿತ್ರವನ್ನು ಮಾನ್ಯ ಆರೋಗ್ಯ ಸಚಿವ ಬಿ . ಶ್ರೀರಾಮುಲು ಅವರೊಂದಿಗೆ ರೆಡ್ಡಿ ಸಹೋದರಾದ ಜಿ.ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಜನಾರ್ಧನ ರೆಡ್ಡಿ ಸಮರ್ಪಿಸಿದ್ದಾರೆ. ಚಿತ್ರದ ಹಾಡಿನಲ್ಲಿ ದೇವೇಗೌಡ, ಕುಮಾರಸ್ವಾಮಿ ಮತ್ತು ರಾಧಿಕಾ ಸ್ಥಾನ ಪಡೆದಿರುವ ಕಾರಣ ಹೊಸ ವಿವಾದದ ಕಿಡಿ ಹೊತ್ತಿಕೊಂಡಿದೆ.

    ಚಿತ್ರದಲ್ಲಿನ ಹಾಡಿನ ಸ್ಯಾಂಪಲ್ ಹೀಗಿದೆ...''ಲಂಡನ್ ನಲ್ಲಿ ಮಗು ಆಯ್ತು ಮಹಾ ಮಂತ್ರಿಗೆ, ನಮ್ಮ ರಾಧವ್ವಗೆ...''ಎಂದು ಬರೆದಿರುವ ಹಾಡು ''ಕರ್ನಾಟಕದಲ್ಲಿ ದೇವೇಗೌಡ್ರು ಹುಟ್ಟಬಾರದಿತ್ತು...'' ಎಂದು ಮುಂದುವರಿಯುತ್ತದೆ. ನಟಿ ರಾಧಿಕಾ ಮತ್ತು ಕುಮಾರಸ್ವಾಮಿ ಅವರ ನಡುವಿನ ಸಂಬಂಧ ಮತ್ತು ''ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು'' ಎಂಬ ದೇವೇಗೌಡರ ಹೇಳಿಕೆಗಳನ್ನು ಆಧರಿಸಿ ಈ ಹಾಡನ್ನು ಹೆಣೆಯಲಾಗಿದೆಯಂತೆ.

    ತರಳಬಾಳು ಮಠದ ಪಂಡಿತಾರಾಧ್ಯ ಸ್ವಾಮೀಜಿಗಳು ಗುರುವಾರ 'ದೇವನಹಳ್ಳಿ' ಧ್ವನಿಸುರುಳಿಯನ್ನು ತಮ್ಮ ಅಮೃತ ಹಸ್ತಗಳಿಂದ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳ ನಿವಾಸದಿಂದ ಹಿಡಿದು ದೇವನಹಳ್ಳಿ ವಿಮಾನ ನಿಲ್ದಾಣದವರೆಗೂ ಧ್ವನಿಸುರುಳಿ ಬಿಡುಗಡೆ ಸಮಾರಂಭ ಯಶಸ್ವಿಯಾಗಲಿ ಎಂಬ ಬ್ಯಾನರ್ ಗಳು ಮತ್ತು ಬಿಜೆಪಿ ಸಚಿವರ ಭಾವಚಿತ್ರಗಳು ರಾರಾಜಿಸುತ್ತಿದ್ದದ್ದು ವಿಶೇಷವಾಗಿತ್ತು.

    'ದೇವನಹಳ್ಳಿ' ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಹೊರತು ಪಡಿಸಿದರೆ ಬಿಜೆಪಿಯ ಸಚಿವರು, ಶಾಸಕರು ಗೈರು ಹಾಜರಾಗಿದ್ದರು. ಆಹ್ವಾನ ಪತ್ರಿಕೆಯಲ್ಲಿ ಮಾತ್ರ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲ ಅವರ ಹೆಸರನ್ನು ಮುದ್ರಿಸಲಾಗಿತ್ತು. ಪಲ್ಲಕ್ಕಿ ರಾಧಾಕೃಷ್ಣ ನಿರ್ದೇಶಿಸಿ ಸ್ವತಃ ಅವರೇ ಚಿತ್ರಕತೆಯನ್ನು ಹೆಣೆದಿದ್ದಾರೆ ದೇವನಹಳ್ಳಿಗೆ.

    ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಸಚಿವ ಶ್ರೀರಾಮುಲು ಅವರು ನನಗೆ ತುಂಬಾ ಆತ್ಮೀಯರು. ಆದರೆ ಈ ಚಿತ್ರಕ್ಕೆ ಬಿಜೆಪಿಯ ಯಾವೊಬ್ಬ ಸಚಿವರಾಗಲಿ, ಶಾಸಕರಾಗಲಿ ನಯಾಪೈಸೆ ಬಂಡವಾಳ ಹೂಡಿಲ್ಲ. ಈ ಚಿತ್ರಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಹಾಗೆಯೇ ಚಿತ್ರದಲ್ಲಿ ದೇವೇಗೌಡ, ಕುಮಾರಸ್ವಾಮಿ ಮತ್ತು ರಾಧಿಕಾ ಅವರ ಬಗ್ಗೆ ಪ್ರಸ್ತಾಪವಿರುವ ಬಗ್ಗೆ ಶ್ರೀರಾಮುಲು ಅವರಿಗಾಗಲಿ ಅಥವಾ ಬಿಜೆಪಿ ಸಚಿವರಿಗಾಗಲಿ ಯಾವುದೇ ಸಂಬಂಧವಿಲ್ಲ ಎಂದು ಪಲ್ಲಕ್ಕಿ ಸ್ಪಷ್ಟಪಡಿಸಿದರು.

    ಈ ಚಿತ್ರವನ್ನು ರವೀಂದ್ರ ರೆಡ್ಡಿ ಅವರ ಸಹ ನಿರ್ಮಾಣದಲ್ಲಿ ಪಲ್ಲಕ್ಕಿ ರಾಧಾಕೃಷ್ಣ ಅವರು ಆರ್ ಕೆ ಥಿಯೇಟರ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎಂಬ ಗೌಡರ ಹೇಳಿಕೆ ಹಾಗೂ ಕುಮಾರಸ್ವಾಮಿ ಮತ್ತು ರಾಧಿಕಾ ನಡುವಿನ ಸಂಬಂಧದ ಬಗ್ಗೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬಂದಂತಹ ಸುದ್ದಿಗಳನ್ನು ಆಧರಿಸಿ ಈ ಗೀತೆಯನ್ನು ರಚಿಸಲಾಗಿದೆ. ಈ ನೈಜ ಸುದ್ದಿಗಳನ್ನು ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ ಅಷ್ಟೇ. ಸೆನ್ಸಾರ್ ಮಂಡಳಿ ಸಹ ಯಾವುದೇ ಕತ್ತರಿ ಪ್ರಯೋಗ ಮಾಡದೆ ಈ ಹಾಡಿಗೆ ಒಪ್ಪಿಗೆ ಸೂಚಿಸಿದೆ ಎಂದು ಪಲ್ಲಕ್ಕಿರಾಧಾಕೃಷ್ಣ ತಿಳಿಸಿದರು.

    ಗೀಯ...ಗೀಯ ಧಾಟಿಯಲ್ಲಿರುವ ಈ ಹಾಡನ್ನು ದಾಸಯ್ಯ ಬರೆದಿದ್ದು ಜನ್ನಿ ಅಕಾ ಜನಾರ್ಧನ್ ಹಾಡಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರ ಸಂಕಷ್ಟಗಳ ಸುತ್ತದ ಕತೆಯನ್ನು ಈ ಚಿತ್ರ ಒಳಗೊಂಡಿದೆ. ಭೂಮಿ ಮಾರಿದ ರೈತರಿಗೆ 4 ರಿಂದ 5 ಲಕ್ಷ ರುಪಾಯಿ ಸಿಗುತ್ತದೆ. ಈ ವ್ಯವಹಾದಲ್ಲಿ ಆದ ಹಗರಣಗಳು, ವಿವಾದಗಳು, ಭಾಗಿಯಾದ ರಾಜಕೀಯ ವ್ಯಕ್ತಿಗಳ ಸುತ್ತ ಕತೆಯನ್ನು ಹೆಣೆಯಲಾಗಿದೆ.

    ದೇವೇಗೌಡ ಮತ್ತವರ ಕುಟುಂಬದವರನ್ನು ತೆರೆಗೆ ತರುತ್ತಿರುವುದು ಇದೇ ಮೊದಲಲ್ಲ. 'ಮುಖ್ಯಮಂತ್ರಿ ಐ ಲವ್ ಯು' ಎಂಬ ರವಿಬೆಳಗೆರೆ ಅವರ ಚಿತ್ರ ಈಗಾಗಲೇ ಇಂತಹದ್ದೇ ಕಥಾ ಎಳೆಯನ್ನು ಒಳಗೊಂಡಿದೆ. ಈ ಚಿತ್ರ ನ್ಯಾಯಾಲಯದ ಮೆಟ್ಟಿಲೇರಿದ್ದು ಬಿಡುಗಡೆಯಾಗಬೇಕಿದೆ. ಕಂಬಾಲಹಳ್ಳಿ ಎಂಬ ಚಿತ್ರವೂ ವಿವಾದದಲ್ಲಿ ಸಿಲುಕಿಕೊಂಡಿತ್ತು. ರಾಮಕೃಷ್ಣ ಹೆಗಡೆ, ದೇವೇಗೌಡ ಮತ್ತು ಎಸ್ ಆರ್ ಬೊಮ್ಮಾಯಿ ಅವರ ತ್ರಿಕೋಣ ಕತೆಯನ್ನು 'ಕಂಬಾಲಹಳ್ಳಿ' ಒಳಗೊಂಡಿತ್ತು.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Tuesday, August 11, 2009, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X