»   » ನಡುನೀರಲ್ಲಿ ಕೈಬಿಟ್ಟರು ಭಾವ ಭಾಮೈದ; ನಾರಾಯಣ್‌ಗೆ ನಾಯಿಪಾಡು!

ನಡುನೀರಲ್ಲಿ ಕೈಬಿಟ್ಟರು ಭಾವ ಭಾಮೈದ; ನಾರಾಯಣ್‌ಗೆ ನಾಯಿಪಾಡು!

Subscribe to Filmibeat Kannada

*ಗಣೇಶ್‌ ಕಾಸರಗೋಡು

‘ಕತ್ತೆಗಳು ಸಾರ್‌ ಕತ್ತೆಗಳು’ ಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಹೋಗಿದ್ದ ನಿರ್ದೇಶಕ, ನಿರ್ಮಾಪಕ ಮತ್ತು ನಾಯಕ ನಟರೂ ಆಗಿರುವ ಎಸ್‌.ನಾರಾಯಣ್‌ ಗಂಭೀರ ಆಪರೇಷನ್‌ಗಾಗಿ ಖಾಸಗಿ ಆಸ್ಪತ್ರೆ ಸೇರಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗಲೇ ಪ್ರಸ್ತುತ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಚಿತ್ರ ತಂಡದೊಂದಿಗೆ ಅಲ್ಲಿಂದ ಪರಾರಿಯಾದ ಪ್ರಕರಣ ನಡೆದಿದೆ.

ಈ ಬೇಜವಾಬ್ದಾರಿಯ ವರ್ತನೆಯಿಂದಾಗಿ ಬೇಸ್ತು ಬಿದ್ದ ನಾರಾಯಣ್‌ ಅವರು ಆಪರೇಷನ್‌ ನಂತರ ಹೇಗೋ ಸುಧಾರಿಸಿಕೊಂಡು ಬೆಂಗಳೂರು ಸೇರಿ ಈಗ ಪುನರ್ಜನ್ಮ ಪಡೆದ ಖುಷಿಯಲ್ಲಿ ಕುರುಬರಹಳ್ಳಿಯ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾ ಅದನ್ನೊಂದು ಕೆಟ್ಟ ಕನಸೆಂದು ಮರೆಯುವ ಪ್ರಯತ್ನದಲ್ಲಿದ್ದಾರೆ.

ನಡೆದ ಘಟನೆಯನ್ನು ಚಿತ್ರಕಥೆಗಾರರೂ ಆಗಿರುವ ನಾರಾಯಣ್‌ ಅವರ ಮಾತಿನಲ್ಲೇ ಕೇಳಿ : ‘ಪೈಲ್ಸ್‌ ಎಂದು ತಳ್ಳಿ ಹಾಕುವಂತಿರಲಿಲ್ಲ. ಅದಕ್ಕೆ ಗ್ಯಾಂಗ್ರಿನ್‌ ತಗುಲಿತ್ತು. ವೈದ್ಯರ ಪ್ರಕಾರ ಮತ್ತೆ ನಾಲ್ಕಾರು ದಿನಗಳು ಕಳೆದಿದ್ದರೆ ಗ್ಯಾಂಗ್ರಿನ್‌ ಕರುಳಿಗೆ ವ್ಯಾಪಿಸಿ ಸಾವು ನಿಶ್ಚಿತವಾಗಿತ್ತು. ಆದರೆ ನನ್ನ ದೃಢವಾದ ಸಂಕಲ್ಪ ಶಕ್ತಿಯಿಂದ ನಾನಾಗಿಯೇ ಮೇಜರ್‌ ಎನ್ನಿಸಬಹುದಾದ ಆಪರೇಷನ್‌ ಮಾಡಿಸಿಕೊಂಡು ಬದುಕಿ ಬಂದಿರುವುದೊಂದು ಪವಾಡವೇ ಸರಿ.

ಮೈಸೂರಿನಲ್ಲಿ ಚಿತ್ರೀಕರಣ ನಡೆದಿದ್ದಾಗಲೇ ಆ ಪೈಲ್ಸ್‌ನ ನೋವು ಶುರುವಾಗಿತ್ತು. ನಿರ್ಮಾಪಕರಿಗೆ ತೊಂದರೆಯಾಗಬಾರದೆಂದು ನಾನು ಅದನ್ನೊಂದು ಇಶ್ಯೂ ಮಾಡಿರಲಿಲ್ಲ. ಆದರೆ ಮಂಗಳೂರಿಗೆ ಹೋದ ಮೇಲೆ ನನಗೆ ತಡೆದುಕೊಳ್ಳಲಾಗಲಿಲ್ಲ. ಆಪರೇಷನ್‌ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಅಲ್ಲಿನ ಆಸ್ಪತ್ರೆಗೆ ಸೇರಿಕೊಂಡೆ. ವೈದ್ಯರು ಪರೀಕ್ಷಿಸಿ ತಕ್ಷಣ ಆಪರೇಷನ್‌ ಮಾಡಿಸಿಕೊಳ್ಳದಿದ್ದರೆ ಜೀವಕ್ಕೆ ಅಪಾಯವಿದೆ ಎಂದರು. ಅಂಥಾ ಪರಿಸ್ಥಿತಿಯಲ್ಲಿ ನಿರ್ಮಾಪಕರು ನನಗೆ ಪೇನ್‌ಕಿಲ್ಲರ್‌ ಔಷಧಿ ಕೊಟ್ಟು ನಾಲ್ಕು ದಿನ ಚಿತ್ರೀಕರಣಕ್ಕೆ ಅನುವುಗೊಳಿಸಿ ನಂತರ ಆಪರೇಷನ್‌ ಮಾಡಿಸಿ ಎಂದು ವೈದ್ಯರನ್ನು ಕೇಳಿದರು. ನಾನು ಅಸಾಧ್ಯ ನೋವಿನಿಂದ ಚಡಪಡಿಸುತ್ತಿದ್ದೆ. ವೈದ್ಯರು ನಿರ್ಮಾಪಕರಿಗೆ ಧಮಕಿ ಹಾಕಿದಾಗ ಅವರು ಹೊರಟು ಹೋದರು. ಕೊನೆಗೆ ನನ್ನ ಹೆಂಡತಿಯ ಗೈರು ಹಾಜರಿಯಲ್ಲಿ ನನಗೆ ನಾನೇ ಸಹಿ ಹಾಕಿ ಆಪರೇಷನ್‌ ಥಿಯೇಟರ್‌ಗೆ ಹೋದೆ.

ಹೊರ ಬಂದಾಗ ನನ್ನ ಹೆಂಡತಿ ಹೊರತಾಗಿ ಬೇರಾರೂ ಇರಲಿಲ್ಲ. ಎಲ್ಲಿ ಹೋದರು ಅಂತ ಕೇಳಿದೆ. ನನ್ನಾಕೆ ಅಳುತ್ತಾ ಕುಳಿತಳು. ಕತ್ತೆಗಳು ಸಾರ್‌ ಕತ್ತೆಗಳು ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ನನ್ನಲ್ಲಿ ಒಂದು ಮಾತನ್ನೂ ಹೇಳದೇ, ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿರುವಾಗಲೇ ಮಂಗಳೂರು ಬಿಟ್ಟು ಬೆಂಗಳೂರು ಸೇರಿದ್ದರು.

ನಂತರದ್ದೆಲ್ಲಾ ವೈದ್ಯರ ಶುಶ್ರೂಷೆ . ಡಾ। ವರ್ಗೀಸ್‌ ಅನ್ನುವವರು ತಮ್ಮ ಬಂಧುವಂತೆ ನನ್ನನ್ನು ನೋಡಿಕೊಂಡರು. ಸ್ವಲ್ಪ ಸುಧಾರಿಸಿಕೊಂಡ ನಂತರ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಲೆಂದು ಹೊರಟರೆ ಟಿಕೆಟ್‌ ಇಲ್ಲದೆ ಕಂಗಾಲಾದೆ. ಆ ಸಮಯದಲ್ಲಿ ನನ್ನ ಅಭಿಮಾನಿಯೋಬ್ಬರು ತಮ್ಮ ಟಿಕೆಟನ್ನು ನನಗೆ ಕೊಡಿಸಿ ತಾವು ಟ್ಯಾಕ್ಸಿ ಮಾಡಿ ಬೆಂಗಳೂರಿಗೆ ಹಿಂದಿರುಗಿದರು...’

ಬೆಂಗಳೂರಿನ ಅವರ ಬಂಗಲೆಯ ಸೋಫಾವೊಂದರಲ್ಲಿ ತಲೆಗೆ ಕೈಕೊಟ್ಟು ಮಲಗಿದ್ದ ನಾರಾಯಣ ಇಷ್ಟನ್ನು ಹೇಳಿ ಮುಗಿಸಿದಾಗ ಅವರಿಗರಿವಿಲ್ಲದಂತೆಯೇ ಕಣ್ಣಂಚಿನಿಂದ ನೀರ ಹನಿಯಾಂದು ಕೆಳಗೆ ಬಿತ್ತು.

ಅಂದಹಾಗೆ, ‘ಕತ್ತೆಗಳು ಸಾರ್‌ ಕತ್ತೆಗಳು’ ಚಿತ್ರದ ನಿರ್ಮಾಪಕರ ಹೆಸರು : ಜೈಜಗದೀಶ್‌ ಮತ್ತು ನಿರ್ದೇಶಕರ ಹೆಸರು : ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು.

ಬಾಲಂಗೋಚಿ : ‘ಕತ್ತೆಗಳು ಸಾರ್‌ ಕತ್ತೆಗಳು’ ಎನ್ನುವ ಸಿನಿಮಾ ತೆಗೆಯುವಾಗ ಸಿನಿಮಾ ನಿರ್ಮಾಪಕ ನಿರ್ದೇಶಕರಿಗೂ ಕತ್ತೆಯ ಒರಟು ಸ್ವಭಾವ ಅಂಟಿಕೊಂಡಿತೆ ?

(ವಿಜಯ ಕರ್ನಾಟಕ)

Post your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada