For Quick Alerts
ALLOW NOTIFICATIONS  
For Daily Alerts

ತಮಿಳು ಸಿನಿಮಾ : ಪುಲಿಕೇಶಿ-ಸಂಗೊಳ್ಳಿರಾಯಣ್ಣನ ಮುಖಕ್ಕೆ ಮಸಿ

By Staff
|

‘ಹಿಂಸೈ ಅರಸನ್‌ 23ಮ್‌ ಪುಲಿಕೇಶಿ’ ಎಂಬ ತಮಿಳು ಚಿತ್ರ, ಕರ್ನಾಟಕದ ಕೀರ್ತಿ ಪತಾಕೆ ಹಿಡಿದ ಪುಲಿಕೇಶಿ ಮತ್ತು ಸಂಗೊಳ್ಳಿರಾಯಣ್ಣ ಅವರ ಮುಖಕ್ಕೆ ರಾಜಾರೋಷವಾಗಿ ಮಸಿ ಬಳಿಯುತ್ತಿದೆ! ಕನ್ನಡಿಗರು ಮಾತ್ರ ತೆಪ್ಪಗಿದ್ದಾರೆ! ಇದಕ್ಕೆ ಏನನ್ನೋಣ?

ಬೆಂಗಳೂರಿನ ಉದ್ಯಾನವನಕ್ಕೆ ಪರ ರಾಜ್ಯದವರ ಹೆಸರಿಡುವುದು, ನಮ್ಮದೇ ಶಾಸಕರು ಅನ್ಯ ಭಾಷೆಗಳಲ್ಲಿ ಆಡಳಿತ ಪ್ರಮಾಣ ವಚನ ಸ್ವೀಕರಿಸುವುದು, ಕನ್ನಡದ ಕಲಾವಿದರೇ ಪರಭಾಷೆಯ ಹಾಡುಗಳು ಪ್ರಸಾರವಾಗಲು ಪ್ರಚಾರ ನೀಡುವುದು, ಒಂದು ಕನ್ನಡ ಸಂಘಟನೆ ತೆಗೆದು ಕೊಳ್ಳುವ ನಿರ್ದಾರಕ್ಕೆ ಮತ್ತೊಂದು ಸಂಘಟನೆ ಹೀಯಾಳಿಸುವುದು, ಹೀಗೆ ಕನ್ನಡಿಗರೇ ಕನ್ನಡೇತರ ಭಾವನೆಗಳಿಗೆ ಮಣೆ ಹಾಕಿ ನಮ್ಮ ನಮ್ಮಲ್ಲೇ ಬಡಿದಾಡಿಕೊಳ್ಳುತ್ತಿರುವಾಗ ನಮ್ಮ ಸ್ವಾಭಿಮಾನಕ್ಕೆ ಕೊಡಲಿ ಪೆಟ್ಟು ಬಿದ್ದಿರುವ ಸುದ್ದಿಯಾಂದು ಯಾರ ಗಮನಕ್ಕೂ ಬಾರದೆ ಇರುವುದು ದುರದೃಷ್ಟಕರ.

ಚಾಲುಕ್ಯ ಮನೆತನದ ಅತ್ಯಂತ ಶ್ರೇಷ್ಟನೂ, ಪ್ರಾಚೀನ ಭಾರತದ ಅಗ್ರಗಣ್ಯ ಪ್ರಭುಗಳಲ್ಲೊಬ್ಬನೂ, ಕನ್ನಡದ ಕಡುಗಲಿ, ಕನ್ನಡಿಗರ ಹೆಮ್ಮೆಯ ಪುಲಿಕೇಶಿ ಹೆಸರಿನ ಇಬ್ಬರು ಅರಸರು ಕ್ರಿಶ್ತ ಶಕ 550-650ರ ಸಮಯದಲ್ಲಿ ನಮ್ಮನ್ನಾಳಿ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವುದನ್ನು ಚರಿತ್ರೆಯಲ್ಲಿ ನಾವು ಓದಿದ್ದೇವೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಈ ಹೆಸರನ್ನು ಬಳಸಿಕೊಂಡ ತಮಿಳು ಚಲನಚಿತ್ರವೊಂದು ಪ್ರದರ್ಶನಗೊಳ್ಳುತ್ತಿದೆ.

‘ಹಿಂಸೈ ಅರಸನ್‌ 23ಮ್‌ ಪುಲಿಕೇಶಿ’ ಎಂಬ ಈ ಚಿತ್ರದ ಹೆಸರಿನ ಕನ್ನಡದ ಅರ್ಥ -‘ಕ್ರೂರಿ ಅರಸು 23ನೇ ಪುಲಿಕೇಶಿ ’. ಕಾಲ್ಪನಿಕ ಚಿತ್ರಕಥೆಯನ್ನೊಳಗೊಂಡ ಈ ಚಲನಚಿತ್ರ ಕ್ರಿಸ್ತ ಶಕ 1775-1825ರ ಆಸುಪಾಸಿನಲ್ಲಿ ನಡೆದಂತೆ ಚಿತ್ರಿಸಲಾಗಿದೆ. ಆದರೆ ಆ ಸಮಯದಲ್ಲಿ ಪ್ರಸ್ತುತರಾಗಿದ್ದ ಸಮಕಾಲೀನ ದೊರೆಗಳಾದ ಹೈದರಾಲಿ, ಟಿಪ್ಪು ಸುಲ್ತಾನ, ವೀರಪಾಂಡ್ಯ ಕಟ್ಟ ಬೊಮ್ಮನ್‌, ವಲ್ಲವರಾಯ ಎಂಬುವರ ರಾಜ್ಯಗಳ ಕಾರ್ಯಬಾರಗಳನ್ನು ಉಲ್ಲೇಖಿಸಲಾಗಿದೆ.

ಈ ಚಿತ್ರದಲ್ಲಿ ರಾಜನೊಬ್ಬ ‘ಈ 23ನೇ ಪುಲಿಕೇಶಿಯ ತಂದೆ’ ತನ್ನ ಕುಮಾರನಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ತನಗೆ ಈ ಹಿಂದೆ 22 ಮಕ್ಕಳು ಆಗಿ ಹೋದವೆಂದೂ, ಒಮ್ಮೆ ಹೈದರಾಲಿಯನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಪುಲಿಕೇಶಿ ಎಂಬ ದೇವಸ್ಥಾನದಲ್ಲಿ ಹರಕೆ ಹೊತ್ತುದುದರ ಫಲವಾಗಿ ಇವನು ಹುಟ್ಟಿದ್ದಾನೆ, ಅದಕ್ಕಾಗಿ ಇವನನ್ನು 23ನೇ ಪುಲಿಕೇಶಿ ಎಂದು ಕರೆಯಲಾಗುವುದು ಎಂಬ ವಿವರಣೆ ನೀಡುತ್ತಾನೆ. ಮತ್ತೊಂದು ಸಂದರ್ಭದಲ್ಲಿ ಈ ಪುಲಿಕೇಶಿಯ ರಾಜಧಾನಿಗೆ ಅರಸನೊಬ್ಬ ದಂಡೆತ್ತಿ ಬಂದಾಗ ಕಪಿಯಂತೆ ಆಡಿ ಪ್ರಾಣ ಉಳಿಸಿಕೊಳ್ಳಲು ನೆಲಕ್ಕೆ ಬಿದ್ದು ಶರಣಾಗತಿ ಬೇಡುತ್ತಾನೆ. ಪ್ರಾಣ ಭಿಕ್ಷೆ ನೀಡುವ ಆ ಅರಸ 23ನೇ ಪುಲಿಕೇಶಿಗೆ ಉಗಿದು ಹೋಗುತ್ತಾನೆ. ಒಟ್ಟಾರೆ ಈ ಕಾಲ್ಪನಿಕ 23ನೇ ಪುಲಿಕೇಶಿ ಎಂಬ ಅರಸನನ್ನು ಕ್ರೂರಿ, ವ್ಯಭಿಚಾರಿ, ಪುಕ್ಕಲ ಎಂಬಿತ್ಯಾದಿಯಾಗಿ ಬಿಂಬಿಸಲಾಗಿದೆ.

ಇದೇ ಚಿತ್ರದಲ್ಲಿ ಬ್ರಿಟೀಷರರಿಗೆ ಕುಮ್ಮಕ್ಕು ಕೊಡುವ ದೇಶದ್ರೋಹಿಯ ಪಾತ್ರವೊಂದರ ಹೆಸರು ಸಂಗೊಳ್ಳಿ ರಾಯಣ್ಣ!! ಕಾಲ್ಪನಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಚರಿತ್ರೆಯ ಇತರೆ ನೈಜ ಪಾತ್ರಗಳ ಹಿರಿತನವನ್ನು ಎತ್ತಿ ಹಿಡಿದಿರುವಾಗ ನಮ್ಮ ಕನ್ನಡದ ಸ್ವಾಭಿಮಾನದ ಐತಿಹಾಸಿಕ ಸಂಕೇತಗಳಾದ ಪುಲಿಕೇಶಿ ಮತ್ತು ಸಂಗೊಳ್ಳಿಯ ಚರಿತ್ರಾರ್ಹವಾದ ಹೆಸರಿಗೆ ಅವಮಾನಪಡಿಸಿರುವುದು ಸರಿಯೇ?? ಈ ಚಿತ್ರದ ನಿರ್ಮಾಪಕರಿಗೆ ಅವರದೇ ರಾಜರುಗಳಾದ ಕರುಣಾನಿಧಿ!, ಎಂಜಿಆರ್‌!, ಪಾಂಡ್ಯನ್‌, ಚೇರನ್‌, ಅಥವ ಆ ಸಮಯದ ಇತರೆ ಸಮಕಾಲೀನ ರಾಜರುಗಳ ಹೆಸರು ಹೊಳೆಯಲಿಲ್ಲವೇಕೆ? ಹಾಗೇನಾದರೂ ಈ ಮೇಲಿನ ಹೆಸರಿಟ್ಟಿದ್ದಿದ್ದರೆ ಚಿತ್ರಕ್ಕೆ ಸಂಬಂಧ ಪಟ್ಟವರು ಬದುಕುಳಿಯಲು ಸಾಧ್ಯವಿತ್ತೆ??

42 ವರ್ಷಗಳ ಹಿಂದೆ 1964 ರಲ್ಲಿ ‘ಕಾಂಚಿ ತಲೈವನ್‌’ ತಮಿಳು ಚಿತ್ರದಲ್ಲಿ ಇಮ್ಮಡಿ ಪುಲಿಕೇಶಿಯನ್ನು ಬಫೂನಿನಂತೆ ಚಿತ್ರಿಸಿ, ಕನ್ನಡಿಗರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಆಕ್ಷೇಪಾರ್ಹ ಸನ್ನಿವೇಶಗಳನ್ನು ಕಂಡ ಅನಕೃ ಮತ್ತು ಸಂಗಡಿಗರಿಗೆ ವಿಷಯ ತಿಳಿದು ಅಂದು ಅವರೆಲ್ಲರೂ ಪ್ರತಿಭಟನೆ ಮಾಡಿದ್ದನ್ನು ಇಲ್ಲಿ ನೆನೆಯಬೇಕಿದೆ. ಆಗ ‘ಕಾಂಚಿ ತಲೈವನ್‌’ ಪ್ರದರ್ಶನ ರದ್ದುಗೊಂದಿತ್ತು.

ಮತ್ತೊಂದು ವಿಷಯವೆಂದರೆ ಇದಾದ ಕೆಲ ದಿನಗಳಲ್ಲಿ ನಮ್ಮ ಕನ್ನಡ ಚಿತ್ರ ಇಮ್ಮಡಿ ಪುಲಿಕೇಶಿ ತೆರೆಗೆ ಬಂದಾಗ, ತಮಿಳರಿಗೆ ಅವಮಾನ ಮಾಡುವ ಅಂಶ ಚಿತ್ರದಲ್ಲಿದೆ ಎಂದು ಬೆಂಗಳೂರಿನ ದ್ರಾ.ಮು.ಕ. ‘ಡಿಎಂಕೆ’, ತಮಿಳು ಬಾಂಧವರು ಗಲಾಟೆ ಆರಂಭಿಸಿದ್ದರಂತೆ. ಚಿತ್ರ ನೋಡಿದ ಅನಕೃ ‘ಚರಿತ್ರೆಯಲ್ಲಿ ಇರುವಂತೆ ಚರಿತ್ರೆಗೆ ಸರಿಯಾಗಿ ಚಿತ್ರ ನಿರ್ಮಾಣ ಆಗಿರುವುದರಿಂದ ಚಿತ್ರದಲ್ಲೇನೂ ತಪ್ಪಿಲ್ಲ, ಇದರಿಂದಾಗಿ ತಮಿಳರು ಉದ್ರಿಕ್ತಗೊಳ್ಳಬೇಕಿಲ್ಲ, ತಮಿಳು ಭಾಷೆಯನ್ನಾಗಲೀ ಅಥವ ಪರಂಪರೆಯನ್ನಾಗಲಿ ಹೀನಾಯ ಮಾಡುವಂತೆ ಚಿತ್ರಣಗೊಂಡಿಲ್ಲ’ ಎಂಬ ಅನಕೃ ಸಾಂತ್ವನದ ನುಡಿಗಳನ್ನು ಒಪ್ಪಿ ಪ್ರತಿಭಟನೆ ಹಿಂತೆಗೆದುಕೊಂಡಿದ್ದರಂತೆ.

ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಲು ಮತ್ತೊಮ್ಮೆ ಅನಕೃ ಮತ್ತು ಮ. ರಾಮಮೂರ್ತಿ ಹುಟ್ಟಿಬರಲೇಬೇಕೆ?

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more