ವರದನಾಯಕನಿಗೆ ಎರಡೂ ಕೈ ಎತ್ತಿದ ನಟಿ ಭೂಮಿಕಾ
ಕಡೆಗೂ 'ವರದನಾಯಕ' ಚಿತ್ರಕ್ಕೆ ನಟಿ ಭೂಮಿಕಾ ಚಾವ್ಲಾ ಸರಿಯಾಗಿ ಕೈಕೊಟ್ಟಿದ್ದಾಳೆ. ಇನ್ನೇನು ಈಕೆ ಚಿತ್ರಕ್ಕೆ ಸಹಿಹಾಕಿಯೇ ಬಿಟ್ಟಳು ಎಂಬಂತೆ ಪೆನ್ನು ಕೈಗೆತ್ತಿಕೊಂಡಿದ್ದಳು. ಆದರೆ ಇದ್ದಕ್ಕಿದ್ದಂತೆ ಏನಾಯಿತೋ ಏನೋ ಪೆನ್ನು ಪೇಪರ್ ಸಮೇತ ಮಾಯವಾಗಿದ್ದಾಳೆ. ಈ ಮೂಲಕ ಭೂಮಿಕಾ ಕನ್ನಡಕ್ಕೆ ಬರುವ ಸುದ್ದಿಗೆ ತೆರೆಬಿದ್ದಿದೆ.
ಶಂಕರೇಗೌಡ ನಿರ್ಮಿಸುತ್ತಿರುವ 'ವರದನಾಯಕ' ಚಿತ್ರದಲ್ಲಿ ಸುದೀಪ್ ಜೊತೆ ಭೂಮಿಕಾ ಅಭಿನಯಿಸಬೇಕಾಗಿತ್ತು. ಡೇಟ್ಸ್ ಹೊಂದಾಣಿಕೆ ಆಗದಿರುವುದೇ ಭೂಮಿಕಾ ಕೈ ಎತ್ತರಲು ಕಾರಣ ಎನ್ನಲಾಗಿದೆ. ಅತ್ತ ಸುದೀಪ್ ಕೂಡ 'ವಿಷ್ಣುವರ್ಧನ' ಹಾಗೂ ತೆಲುಗಿನ 'ಈಗ' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
'ವರದನಾಯಕ' ಚಿತ್ರಕ್ಕೆ ಸುದೀಪ್ ಡಿಸೆಂಬರ್‌ನಲ್ಲಿ ಡೇಟ್ಸ್ ಕೊಟ್ಟಿದ್ದಾರೆ. ಅದೇ ಡೇಟ್ಸ್‌ಗೆ ಭೂಮಿಕಾ ಮತ್ತೊಂದು ಚಿತ್ರದಲ್ಲಿ ಎಂಗೇಜ್ ಆಗಿದ್ದಾರೆ. ಈಗ ಮತ್ತೊಬ್ಬ ನಾಯಕಿಯನ್ನು ಕರೆತರುವ ಬಗ್ಗೆ ಶಂಕರೇಗೌಡ ಸಿದ್ಧತೆಗಳನ್ನು ನಡೆಸಿದ್ದಾರೆ.
ತೆಲುಗಿನ ಯಶಸ್ವಿ ಚಿತ್ರ 'ಲಕ್ಷ್ಯಂ' ರೀಮೇಕ್ ಇದಾಗಿದ್ದು ಚಿರಂಜೀವಿ ಸರ್ಜಾ, ನಿಕೇಶಾ ಪಟೇಲ್ ಪ್ರಮುಖ ಪಾತ್ರಧಾರಿಗಳು. ಚಿತ್ರದಲ್ಲಿ ಸುದೀಪ್ ಅವರದು ಗಮನಾರ್ಹ ಪಾತ್ರ. ಯಥಾವತ್ತಾಗಿ ಚಿತ್ರಕತೆಯನ್ನು ಕನ್ನಡಕ್ಕೆ ತರದೆ ಸೂಕ್ತ ಬದಲಾವಣೆಗಳನ್ನು ಮಾಡುತ್ತೇವೆ ಎಂದಿದ್ದಾರೆ ನಿರ್ಮಾಪಕರು. (ಒನ್‌ಇಂಡಿಯಾ ಕನ್ನಡ)


Click it and Unblock the Notifications











