ನಟ ದರ್ಶನ್ ಜತೆ ನನಗೆ ಅಫೇರ್ ಇಲ್ಲ: ನಿಖಿತಾ

'ಆರು ವರ್ಷದ ಸಿನಿಮಾ ಜೀವನದಲ್ಲಿ ಯಾವ ನಟನ ಜತೆಗೂ ನನ್ನ ಹೆಸರು ಕೇಳಿಬಂದಿಲ್ಲ. ಆದರೀಗ ದರ್ಶನ್ ಜತೆ ನನಗೆ ಅಫೇರ್ ಇದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಅದೆಲ್ಲ ಸುಳ್ಳೋ ಸುಳ್ಳು. ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ. ಇನ್ನೂ ಮದ್ವೆ ಆಗಿಲ್ಲ.
ದಯವಿಟ್ಟು ಯಾರ ಯಾರೋ ಜತೆಗೆ ನನಗೆ ಸಂಬಂಧ ಕಲ್ಪಿಸಿ, ನನ್ನ ಹೆಸರಿಗೆ ಮಸಿ ಬಳಿಯಬೇಡಿ' ಎಂದು 'ಚಿತ್ರಲೋಕ ಡಾಟ್ ಕಾಮ್'ಗೆ ನೀಡಿರುವ ಸಂದರ್ಶನದಲ್ಲಿ ನಿಖಿತಾ ತಮ್ಮ ಆತಂಕ ತೋಡಿಕೊಂಡಿದ್ದಾರೆ.
ಮುಂದಿನದನ್ನು ಆಕೆಯ ಬಾಯಿಂದಲೇ ಕೇಳಿ: ದರ್ಶನ್ ಪತ್ನಿ ವಿಜಯಲಕ್ಷ್ಮಿ ಈ ರಾಮಾಯಣದಲ್ಲಿ ನನ್ನನ್ನೇಕೆ ಎಳೆದು ತಂದರು ಎಂಬುದು ನನಗೆ ಗೊತ್ತಿಲ್ಲ. ಆಕೆ ಕೊಟ್ಟ ದೂರಿನಲ್ಲಿ ನನ್ನ ಹೆಸರು ಏಕೆ ಸೇರಿದೆ ಎಂಬುದೂ ಗೊತ್ತಿಲ್ಲ. ಈ ದೂರಿನಿಂದ ನನ್ನ ಹೆಸರು ಕೆಡುತ್ತಿದೆ. ಆದಷ್ಟು ಬೇಗ ನಾನು ಇದರಿಂದ ಹೊರಬರಬೇಕು.
ನನಗೆ ಒಳ್ಳೆಯ ಅವಕಾಶ ನೀಡಿದ ಕನ್ನಡ ಚಿತ್ರರಂಗ ಮತ್ತು ನನ್ನನ್ನು ಪ್ರೀತಿಸುವ ಕನ್ನಡದ ಅಭಿಮಾನಿಗಳ ಬಗ್ಗೆ ನಾನು ತುಂಬಾ ಗೌರವ ಹೊಂದಿದ್ದೇನೆ. ಯಾರಾದರೂ ನನ್ನ ಮತ್ತು ದರ್ಶನ್ ಸರ್ ಮಧ್ಯೆ ಸಂಬಂಧವಿದೆ ಎಂಬುದಕ್ಕೆ ಒಂದೇ ಒಂದು ಸಾಕ್ಷ್ಯ ತೋರಿಸುತ್ತಾರಾ!?
ನನ್ನ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಲು ಕೋರಿ ನಾನು ಕೋರ್ಟಿಗೆ ಹೋಗುತ್ತೇನೆ. ಇಡೀ ಪ್ರಕರಣದ ಬಗ್ಗೆ ಸ್ನೇಹಿತರು, ಹಿತೈಷಿಗಳಿಂದ ಸಲಹೆ ಪಡೆಯುತ್ತಿದ್ದೇನೆ. ಸದ್ಯಕ್ಕೆ, ನವದೆಹಲಿಯಲ್ಲಿ ಮಾಡೆಲಿಂಗ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ.


Click it and Unblock the Notifications











