ಗುಲ್ಬರ್ಗಾದಲ್ಲಿ ಧಗಧಗಿಸಿದ 'ದಂಡುಪಾಳ್ಯ' ವಿವಾದ
ದಂಡುಪಾಳ್ಯ ಚಿತ್ರ ಸೆಟ್ಟೇರಿದ ದಿನದಿಂದಲೂ ಸುದ್ದಿಯಾಗುತ್ತಿರುವುದು ಗೊತ್ತೇ ಇದೆ. ನಿಜ ಘಟನೆಯನ್ನಾಧರಿಸಿದ ಈ ಚಿತ್ರದ ಟೈಟಲ್ ಕೂಡ ಘಟನೆ ನಡೆದ ಸ್ಥಳದ ಹೆಸರೇ ಆಗಿದೆ. ದಂಡುಪಾಳ್ಯ ಚಿತ್ರ, ಚಿತ್ರೀಕರಣದ ಹಂತದಲ್ಲಿದ್ದಾಗ ನಟಿ ಪೂಜಾ ಗಾಂಧಿ ಪಾತ್ರದ ಅಗತ್ಯಕ್ಕೆ ತಕ್ಕಂತೆ ಅರೆಬೆತ್ತಲಾಗಿ ನಟಿಸಿರುವ ಚಿತ್ರ ಓಡಾಡುತ್ತಿದ್ದಂತೆ ಅದು ವಿವಾದಕ್ಕೆ ವಸ್ತುವಾಗಿ ಬಹುಚರ್ಚಿತವಾಗಿತ್ತು.
ಇದೀಗ ಆಡಿಯೋ ಬಿಡುಗಡೆಯನ್ನೂ ಮುಗಿಸಿ ಚಿತ್ರದ ಬಿಡುಗಡೆಗೆ ಸಜ್ಜಾಗಿದೆ ಚಿತ್ರತಂಡ. ಆದರೆ ದಂಡುಪಾಳ್ಳಕ್ಕೆ ಇದೀಗ ಬಲವಾದ ವಿಘ್ನವೊಂದು ಎದುರಾಗಿದೆ. ಗುಲಬರ್ಗಾದ ಬಹುಜನ ಹೋರಾಟ ಸಮಿತಿ, 'ಚಿತ್ರದಲ್ಲಿ ಅಶ್ಲೀಲ ದೃಶ್ಯಗಳಿವೆ. ಯುವಕರು ಇದರಿಂದಾಗಿ ದಾರಿತಪ್ಪುತ್ತಾರೆ. ಚಿತ್ರದ ಹೆಸರನ್ನು ತಕ್ಷಣ ಬದಲಾವಣೆ ಮಾಡಿ' ಎಂದು ಪ್ರತಿಭಟನೆ ನಡೆಸಿದೆ. ಜೊತೆಗೆ ನಟಿ ಪೂಜಾ ಗಾಂಧಿಯ ಪ್ರತಿಕೃತಿ ದಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನಕ್ಕೂ ಬಂದಿದೆ. ವಾಣಿಜ್ಯ ಮಂಡಳಿ ದಂಡುಪಾಳ್ಯ ಚಿತ್ರದ ನಿರ್ಮಾಪಕರಿಗೆ ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಪತ್ರ ಬರೆದಿದ್ದಾರೆ. ಆದರೆ ಚಿತ್ರತಂಡ ' ಆಡಿಯೋ ಬಿಡುಗಡೆ ನಂತರ ಶೀರ್ಷಿಕೆ ಬದಲಾಯಿಸಿದರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ನಿರ್ಮಾಪಕರಿಗೆ ನಷ್ಟವಾಗುತ್ತದೆ. ನೈಜಘಟನೆ ಆಧಾರಿತ ಚಿತ್ರವಾದ್ದರಿಂದ ನೈಜವಾದ ಹೆಸರನ್ನೇ ಇಟ್ಟಿದ್ದೇವೆ.
ಇನ್ನು, 'ಅಶ್ಲೀಲತೆಗೂ ಟೈಟಲ್ ಗೂ ಯಾವ ಸಂಬಂಧ?' ಎಂದು ಪ್ರಶ್ನಿಸಿ ವಾಣಿಜ್ಯಮಂಡಳಿಯ ಆ ಪತ್ರಕ್ಕೆ ಉತ್ತರ ಬರೆದಿದ್ದಾರೆ. ಮುಂದಾನಾಗುತ್ತದೆ ಎಂಬುದು ಇದೀಗ ಕುತೂಹಲದ ವಿಷಯ. ಅಂದಹಾಗೆ ಗುಲ್ಬರ್ಗಾದ ಇಂದಿನ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇದೇರಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











