»   »  ಸಂಗೀತ ನಿರ್ದೇಶಕರಿಗೆ ಲಹರಿ ವೇಲು ಛೀಮಾರಿ

ಸಂಗೀತ ನಿರ್ದೇಶಕರಿಗೆ ಲಹರಿ ವೇಲು ಛೀಮಾರಿ

By: *ಜಯಂತಿ
Subscribe to Filmibeat Kannada
Lahari Velu blasts music directors
ಆಡಿಯೋ ಕಂಪೆನಿಗಳಿಗೆ ಕ್ಯಾಸೆಟ್ ಹಕ್ಕು, ಸೀಡಿ ಹಕ್ಕು ಕೊಡಬೇಡಿ ಅಂತ ಸಂಗೀತ ನಿರ್ದೇಶಕರೊಬ್ಬರು ನಿರ್ಮಾಪಕರಿಗೆ ಅಪ್ಪಣೆ ಕೊಡಿಸಿದ್ದಾರೆ. ಚಿತ್ರೋದ್ಯಮದಲ್ಲಿ ನಿರ್ಮಾಪಕರ ತಲೆ ಬೋಳಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವವರೇ ಸಂಗೀತ ನಿರ್ದೇಶಕರು.... ವೇಲು ತಮ್ಮ ಆಡಿಯೋ ಸಂಸ್ಥೆಯ ಹೆಸರಿನ ತರಹವೇ ಲಹರಿಯಲ್ಲಿ ಹೀಗೆ ಹೇಳುತ್ತಾ ಹೋದರು. ಪ್ರತಿಮಾತಿನಲ್ಲೂ ಕೋಪ ಭರ್ತಿಯಾಗಿತ್ತು. ಅವರು ಹೀಗೆ ಮಾತಾಡಿದ್ದು ವಿ.ಮನೋಹರ್ ಕೊಟ್ಟಿರುವ ಹೇಳಿಕೆಯ ಕುರಿತು ಎಂಬುದು ಅಲ್ಲಿದ್ದ ಅನೇಕರಿಗೆ ಗೊತ್ತಿತ್ತು.

ಸಮಾಗಮ ಚಿತ್ರದ ಸೀಡಿ ಬಿಡುಗಡೆ ಸಮಾರಂಭದಲ್ಲಿ ಗುರುವಾರ ವೇಲು ಸ್ಫೋಟಿಸಲು ಸ್ಪಷ್ಟ ಕಾರಣಗಳಿದ್ದವು. ಆಡಿಯೋ ಕಂಪೆನಿಯವರು ಹಣ ಮಾಡಿಕೊಂಡು ನಿರ್ಮಾಪಕರಿಗೆ ಉಂಡೆನಾಮ ಇಡುತ್ತಾರೆ ಅನ್ನುವುದು ಮನೋಹರ್ ಮಾಡಿದ ಆರೋಪದ ಸಾರ. ಆದರೆ ವೇಲು ವರ್ಶನ್ನೇ ಬೇರೆ. ಅದನ್ನು ಅವರ ಮಾತುಗಳಲ್ಲಿ ಕೇಳಿದರೇನೆ ಚೆನ್ನ-

ಸಂಗೀತ ನಿರ್ದೇಶಕರು ಈಗ ಪ್ಯಾಕೇಜ್ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿ ಗುಳುಂ ಮಾಡುತ್ತಿದ್ದಾರೆ. ಮುಂಬೈಗೆ ಹೋಗುತ್ತಾರೆ. ಅಲ್ಲಿನ ಗಾಯಕ ಸಿಗುವವರೆಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯ. ಗಾಯಕ ಸಿಕ್ಕಮೇಲೆ ರೆಕಾರ್ಡಿಂಗ್. ಮೇಲೆ ಫ್ಲೈಟ್ ಚಾರ್ಜು. ನಿರ್ಮಾಪಕರಿಗೆ ಇವೆಲ್ಲಾ ಬೇಕಾ? ಹಣ ಅವರದು, ಉಡಾಯಿಸುವವರು ಇವರು. ಈಗ ಹಾಡುಗಳಿಗೆ ಮಾರುಕಟ್ಟೆ ಇಲ್ಲ. ಅಷ್ಟು ದುಡ್ಡು ಬರುತ್ತೆ, ಇಷ್ಟು ದುಡ್ಡು ಬರುತ್ತೆ ಅಂತ ನಿರ್ಮಾಪಕರನ್ನು ನಂಬಿಸಿ ಮೋಸ ಮಾಡುತ್ತಿರುವುದು ಸಂಗೀತ ನಿರ್ದೇಶಕರು. ಮೊದಲಿಗೆ ಈ ಪ್ಯಾಕೇಜ್ ಪದ್ಧತಿ ಇಲ್ಲವಾಗಬೇಕು.

ವೇಲು ಮಾತಿಗೆ ಚಪ್ಪಾಳೆ ಜೋರಾಗಿತ್ತು. ಎಫ್‌ಎಂ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಹಾಡುಗಳಿಂದ ಆಡಿಯೋ ಕಂಪೆನಿಗಳು ಹಣ ದೋಚುತ್ತಿವೆ ಎಂಬುದು ಮನೋಹರ್ ಅವರ ಅಭಿಪ್ರಾಯ. ಆದರೆ, ವೇಲು ಪ್ರಕಾರ ಹಾಡು ಒಮ್ಮೆ ಪ್ರಸಾರವಾಗಲು ಎಫ್‌ಎಂ ಚಾನೆಲ್‌ಗಳು ಕೊಡುವ ಹಣ ಕೇವಲ 2.40 ರೂಪಾಯಿ. ಆಕಾಶವಾಣಿ ಕೊಡುವ ಹಣಕ್ಕಿಂತ ಇದು ಕಡಿಮೆ. ಅಂದಮೇಲೆ ಅದರಿಂದ ಲಾಭ ಮಾಡುವುದು ಹೇಗೆ ಸಾಧ್ಯ ಅನ್ನೋದು ವೇಲು ವಾದ.

ವೇಲು ಇಷ್ಟೆಲ್ಲ ಮಾತಾಡುವ ಹೊತ್ತಿಗೆ ಸಭಾಭವನದ ನಡುವೆ ಇದ್ದ ಪಿಆರ್‌ಒ ಇನ್ನೊಂದು ಸತ್ಯ ಸ್ಫೊಟಿಸಿದರು, ಮನೋಮೂರ್ತಿ ಪ್ಯಾಕೇಜ್ ಬೆಲೆ ಅರುವತ್ತು ಲಕ್ಷ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada