»   » ನೈಸ್ ರೋಡಿನಲ್ಲಿ ಜಾರಿದರೆ ಇಂದ್ರಜಿತ್?

ನೈಸ್ ರೋಡಿನಲ್ಲಿ ಜಾರಿದರೆ ಇಂದ್ರಜಿತ್?

Posted By:
Subscribe to Filmibeat Kannada
Ashok Kheni and Indrajit Lankesh
ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್‌ರನ್ನು ಸಿಸಿಬಿ ಪೊಲೀಸರು ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಮೇಲಿರುವ ಆರೋಪ ಹದಿನೈದು ಕೋಟಿ ರುಪಾಯಿ ವಂಚನೆ.

ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ 'ನೈಸ್" ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಅವರಿಗೆ ಇಂದ್ರಜಿತ್ ಹದಿನೈದು ಕೋಟಿ ರುಪಾಯಿ ವಂಚಿಸಿದ್ದಾರೆ ಎನ್ನುವುದು ಆರೋಪದ ತಿರುಳು. ಇದು ಹೊಸ ಆರೋಪವೇನಲ್ಲ. ಇಂದ್ರಜಿತ್ ಹಾಗೂ ಖೇಣಿ ನಡುವಣ ನಂಟು ಹಾಗೂ ಗಂಟಿಗೆ ಸಂಬಂಧಿಸಿದ ಜಗಳ ಕೂಡ ಹೊಸತಲ್ಲ. ಆದರೆ, ರಾಜಿ-ಸಂಧಾನಗಳ ನಡುವೆ ಗಿರಗಿಟ್ಲೆ ಆಡುತ್ತಿದ್ದ ಪ್ರಕರಣ ಶುಕ್ರವಾರ ಸಂಜೆ(ಡಿ.12) ಇಂದ್ರಜಿತ್ ಬಂಧನದೊಂದಿಗೆ ಗಂಭೀರ ತಿರುವು ಪಡೆದುಕೊಂಡಿದೆ.

ಇಂದ್ರಜಿತ್ ಎನ್ನುವ ಸಿನಿಮಾ ಕುದುರೆ ನೈಸ್ ಕಾರಿಡಾರ್‌ನಲ್ಲಿ ಓಡತೊಡಗಿದ್ದು ಸುಮಾರು ಎರಡು ವರ್ಷಗಳ ಹಿಂದೆ. 'ಶಾದಿ ಕೆ ಆಫ್ಟರ್ ಎಫೇಕ್ಟ್ಸ್" ಎನ್ನುವ ಹಿಂದಿ ಚಿತ್ರವನ್ನು ಖೇಣಿ ಕಂಪನಿಗಾಗಿ ಇಂದ್ರಜಿತ್ ನಿರ್ದೇಶಿಸಿದ್ದರು. ಅಶೋಕ ಹೋಟೆಲ್‌ನಲ್ಲಿ ನಡೆದ ಸಂತೋಷಕೂಟವೊಂದರಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಗಿತ್ತು. ಈ ಸುದ್ದಿಗೋಷ್ಠಿಯಲ್ಲಿ ಖೇಣಿ ತಮ್ಮ ಸಿನಿಮಾ ಕುರಿತು ಕನಸುಗಳನ್ನು ಹಂಚಿಕೊಂಡಿದ್ದರು. ನೂರಾರು ಕೋಟಿ ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಾಣ, ವರ್ಷಕ್ಕೆ ಹತ್ತಾರು ಕನ್ನಡ ಸಿನಿಮಾ, ಹೊಸ ಪ್ರತಿಭೆಗಳಿಗೆ ಅವಕಾಶ, ಇತ್ಯಾದಿ ಇತ್ಯಾದಿ. ತಮ್ಮ ಸಂಸ್ಥೆಯ ಮುಂದಿನ ಹತ್ತು ಕನ್ನಡ ಸಿನಿಮಾಗಳನ್ನು ಇಂದ್ರಜಿತ್ ಅವರೇ ನಿರ್ದೇಶಿಸುತ್ತಾರೆ ಎಂದೂ ಖೇಣಿ ಪ್ರಕಟಿಸಿದ್ದರು.

ಮದುವೆಯ ಪ್ರಣಯ ಮುರಿದು ಬಿದ್ದದ್ದು ಮುಂದಿನ ಚಿತ್ರದಲ್ಲಿ. 'ಬ್ಲಾಕ್ ಡೈಮಂಡ್" ಎನ್ನುವ ಮತ್ತೊಂದು ಹಿಂದಿ ಚಿತ್ರದ ಶೂಟಿಂಗ್‌ಗೆಂದು ಇಂದ್ರಜಿತ್ ಚಿತ್ರತಂಡವನ್ನು ದಕ್ಷಿಣ ಆಫ್ರಿಕಾಕ್ಕೆ ಕರೆದೊಯ್ದರು. ಲೆಕ್ಕ ತಪ್ಪತೊಡಗಿದ್ದು ಅಲ್ಲಿಂದಲೇ. ಕೋಟ್ಯಂತರ ರುಪಾಯಿಗಳಿಗೆ ಇಂದ್ರಜಿತ್ ಲೆಕ್ಕ ಕೊಟ್ಟಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿನಿಮಾ ಉದ್ಯಮಿಯೊಬ್ಬರು ಹೇಳುತ್ತಾರೆ.

ಮುಂದಿನ ಚಿತ್ರಗಳಿಗೆಂದು ಹಲವು ತಂತ್ರಜ್ಞರಿಗೆ ಮುಂಗಡ ಹಣ ಕೊಟ್ಟಿರುವುದಾಗಿ ಇಂದ್ರಜಿತ್ ಹೇಳಿಕೊಂಡಿದ್ದರೂ, ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ ಎನ್ನುವುದು ಆರೋಪ. ಈ ಹಿನ್ನೆಲೆಯಲ್ಲಿ ಖೇಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಇಂದ್ರಜಿತ್ ಕೂಡ ಖೇಣಿ ವಿರುದ್ಧ ಚೆಕ್‌ಬೌನ್ಸ್ ದೂರು ನೀಡಿದ್ದರು. ಒಬ್ಬರು ಪ್ರತಿಷ್ಠಿತ ಉದ್ಯಮಿ. ಮತ್ತೊಬ್ಬರು ಪತ್ರಕರ್ತ. ಇಬ್ಬರ ನಡುವಣ ಜಗಳ ಎಲ್ಲಿಗೆ ಬರುತ್ತದೋ? ಈ ಜಗಳ ಮತ್ತೊಂದು ಸಿನಿಮಾಕ್ಕೆ ವಸ್ತುವಾಗುತ್ತಾ? ಗಾಂಧಿನಗರದ ಮಾಯೆ ಬಲ್ಲವರಾರು!

ಬಂಧನದ ವಿರುದ್ಧ ಸಿನಿ ಪತ್ರಕರ್ತರ ಪ್ರತಿಭಟನೆ

ಇಂದ್ರಜಿತ್ ಲಂಕೇಶ್ ಬಂಧನದ ವಿರುದ್ಧ ಸಿನಿಮಾ ಪತ್ರಕರ್ತರು ಬೆಂಗಳೂರಿನ ಪೊಲೀಸ್ ಕಮೀಷನರ್ ಕಚೇರಿ ಮುಂದೆ ಶನಿವಾರ ಪ್ರತಿಭಟಿಸಿದರು. ಇಂದ್ರಜಿತ್ ಅವರು ಯಾವುದೇ ಅಕ್ರಮ ವ್ಯವಹಾರಗಳಲ್ಲಿ ತೊಡಗಿಕೊಂಡವರಲ್ಲ. ಅಂತಹವರನ್ನು ಏಕಾಏಕಿ ಬಂಧಿಸಿದ್ದಾದರು ಏಕೆ? ಇಂದ್ರಜಿತ್ ಬಂಧನದ ಹಿಂದೆ ಬೇರೆ ಹುನ್ನಾರವೇ ಇದೆ. ಅವರನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಪೊಲೀಸ್ ಕಮೀಷರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

( ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಖೇಣಿಯಿಂದ ಸಿದ್ಧಗಂಗಾ ಶ್ರೀಗಳ ಧಾರಾವಾಹಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada