»   »  ಕನ್ನಡ ಡಬ್ಬಿಂಗ್ ಗೆ ದಿಡ್ಡಿ ಬಾಗಿಲು ತೆರೆದ ಶ್ವೇತನಾಗು

ಕನ್ನಡ ಡಬ್ಬಿಂಗ್ ಗೆ ದಿಡ್ಡಿ ಬಾಗಿಲು ತೆರೆದ ಶ್ವೇತನಾಗು

Posted By:
Subscribe to Filmibeat Kannada

'ಶ್ವೇತನಾಗು' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ ನಿರ್ಮಾಪಕರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಈ ಮೂಲಕ ಚಲನಚಿತ್ರ ವಾಣಿಜ್ಯ ಮಂಡಳಿ ಡಬ್ಬಿಂಗ್ ಚಿತ್ರಗಳನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ ಎಂಬ ದೂರು ಚಿತ್ರೋದ್ಯಮದಲ್ಲಿ ಕೇಳಿಬರುತ್ತಿದೆ.

ಈ ಮಧ್ಯೆ ಖಾಸಗಿ ಟಿವಿ ವಾಹಿನಿಯೊಂದು ಮಲಯಾಳಂ ಮೂಲದ ಭಕ್ತಿಗೀತೆಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುತ್ತಿದೆ. ಇದೇ ವಾಹಿನಿ 'ಶ್ವೇತನಾಗು' ಡಬ್ಬಿಂಗ್ ಚಿತ್ರವನ್ನು ಈ ಹಿಂದೆ ಎರಡು ಬಾರಿ ಪ್ರಸಾರ ಮಾಡಿತ್ತು. ಈ ಚಿತ್ರವನ್ನು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್ ಸೇರಿದಂತೆ ಮತ್ತಿಬ್ಬರು ನಿರ್ಮಿಸಿದ್ದರು.

ಶ್ವೇತನಾಗು ಚಿತ್ರವನ್ನು ಪ್ರಸಾರ ಮಾಡಿದ್ದಕ್ಕೆ ಸುವರ್ಣ ವಾಹಿನಿ ಮಂಡಳಿಯ ಕ್ಷಮೆಯಾಚಿಸಿ, ಇದು ಡಬ್ಬಿಂಗ್ ಚಿತ್ರ ಎಂಬ ಅಂಶವನ್ನು ನಿರ್ಮಾಪಕರು ನಮ್ಮಿಂದ ಮುಚ್ಚಿಟ್ಟಿದ್ದರು ಎಂದು ದೂರಿತ್ತು. ಆದರೆ ನಿರ್ಮಾಪಕರಾದ ಎಚ್ ಎನ್ ಮಾರುತಿ, ಅಜಂತ ರಾಜು ಅವರ ವಿರುದ್ಧ ಮಂಡಳಿಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಈ ಪರಿಸ್ಥಿತಿಯಲಾಭ ಪಡೆದು ಡಬ್ಬಿಂಗ್ ಚಿತ್ರಗಳನ್ನು ಅಥವಾ ಧಾರಾವಾಹಿಗಳನ್ನು ಮಾಡಲು ಬಿಡುವುದಿಲ್ಲ ಎಂದು ಕೆಸಿಎನ್ ಚಂದ್ರಶೇಖರ್ ಗುಡುಗಿದ್ದರು. ಕನ್ನಡ ಚಿತ್ರರಂಗದಲ್ಲಿದ್ದ ಅಲಿಖಿತ ನಿಯಮವನ್ನು ಶ್ವೇತನಾಗು ಚಿತ್ರ ಮುರಿಯುವ ಮೂಲಕ ಕನ್ನಡ ಡಬ್ಬಿಂಗ್ ಚಿತ್ರಗಳಿಗೆ ಬಾಗಿಲು ತೆರೆದಂತಾಗಿದೆ ಎಂಬ ಆರೋಪವೂ ಚಿತ್ರೋದ್ಯಮದಲ್ಲಿ ಪ್ರತಿಧ್ವನಿಸಿದೆ.

ಡಬ್ಬಿಂಗ್ ಚಿತ್ರಗಳ ಭಾಗವಾಗಿ ಈಗ ಮಲಯಾಳಂ ಮೂಲದ ಭಕ್ತಿಗೀತೆಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿವೆ. ಮುಂಜಾನೆ ಪ್ರಸಾರವಾಗುವ ಈ ಭಕ್ತಿಗೀತೆಗಳಿಗೆ ಕನ್ನಡ ಧ್ವನಿಯನ್ನು ಮಾತ್ರ ಸೇರಿಸಲಾಗಿದೆ. ಉಳಿದಂತೆ ಈ ಗೀತೆಗಳು ಮಲಯಾಳಂನಲ್ಲೇ ಚಿತ್ರೀಕರಣಗೊಂಡಿವೆ. ಈ ಬೆಳವಣಿಗೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರ ಗಮನಕ್ಕೆ ತಂದಾಗ, ಕಾರ್ಯಕ್ರಮವನ್ನೊಮ್ಮೆ ವೀಕ್ಷಿಸಿ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕನ್ನಡದಲ್ಲಿಡಬ್ಬಿಂಗ್ ಚಿತ್ರಗಳಿಗೆ 1960ರಲ್ಲೇ ನಿಷೇಧ ಹೇರಲಾಗಿತ್ತು. ಡಬ್ಬಿಂಗ್ ಧಾರಾವಾಹಿಗಳಿಗೆ 1990ರಲ್ಲಿ ವಿರೋಧ ವ್ಯಕ್ತವಾಗಿತ್ತು. ಸಂಜಯ್ ಖಾನ್ ರ ಜನಪ್ರಿಯ ಧಾರಾವಾಹಿ'ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್' ಕನ್ನಡ ಡಬ್ಬಿಂಗ್ ಗೆ ರಾಜ್ ಕುಮಾರ್ ನೇತೃತ್ವದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಏತನ್ಮಧ್ಯೆ ರಮಾನಂದ ಸಾಗರ್ ಅವರ 'ರಾಮಾಯಣ' ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡುವ ವಿಫಲ ಪ್ರಯತ್ನವೂ ನಡೆಯಿತು. ಮತ್ತೊಂದು ಆಶ್ಚರ್ಯಕರವಾದ ಸಂಗತಿಯೆಂದರೆ ಶಂಕರನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್'ನ್ನು ಕನ್ನಡಕ್ಕೆ ಡಬ್ ಮಾಡುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ 'ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಲಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada