'ಗೌಡ Vs ರೆಡ್ಡಿ' ಶೀರ್ಷಿಕೆಗಾಗಿ ಹಗ್ಗ ಜಗ್ಗಾಟ!
ಬೆಳ್ಳಿತೆರೆಯ ಮೇಲೆ "ಗೌಡ Vs ರೆಡ್ಡಿ"! ಇದೇನು ರಾಜಕೀಯ ದೊಂಬರಾಟವಲ್ಲ. ಟಿ ಎನ್ ನಾಗೇಶ್(ಒಲವೇ ವಿಸ್ಮಯ)ನಿರ್ದೇಶನ ಮಾಡಲು ಹೊರಟಿರುವ ಚಿತ್ರದ ಹೆಸರು. ಆದರೆ ಈ ಚಿತ್ರಕ್ಕೆ ಆರಂಭದಿಂದಲೇ ನೂರೆಂಟು ವಿಘ್ನಗಳು. ಚಿತ್ರದ ಶೀರ್ಷಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮೋದನೆ ನೀಡಿಲ್ಲ ಎನ್ನುವುದು ಒಂದಾದರೆ, ಗೌಡರ ಪಾತ್ರ ಮಾಡಲು ಒಪ್ಪಿಕೊಂಡಿದ್ದ ಅನಂತನಾಗ್ ಈಗ ಈ ಪಾತ್ರವನ್ನು ಒಲ್ಲೆ ಎಂದಿದ್ದಾರೆ.
ವಾಣಿಜ್ಯ ಮಂಡಳಿ ಅನುಮತಿ ಪಡೆದ ನಂತರವೇ ಚಿತ್ರದ ಶೀರ್ಷಿಕೆ ಪ್ರಕಟಿಸಿದ್ದು ಎಂದು ಚಿತ್ರತಂಡ ಪ್ರತಿಪಾದಿಸುತ್ತಿದೆ. ಆದರೆ ಮಂಡಳಿ ನಮ್ಮ ಅನುಮತಿ ಪಡೆದಿಲ್ಲ ಎಂದು ಬಹಿರಂಗವಾಗಿ ಪ್ರಕಟಿಸಿದೆ. ನಿರ್ದೇಶಕರು ನನಗೆ ಚಿತ್ರ ಕಥೆ ಹೇಳಿದ ರೀತಿ ಬೇರೆಯಾಗಿತ್ತು. ಅದಕ್ಕಾಗಿ ಮೊದಲು ಒಪ್ಪಿಕೊಂಡೆ. ಆದರೆ ಕಥೆಗೆ ಸಂಬಂಧ ಪಡದ ರೀತಿಯಲ್ಲಿ ಚಿತ್ರಕ್ಕೆ ಹೆಸರಿಟ್ಟಿದ್ದಾರೆ ಎಂಬುದು ವಾಣಿಜ್ಯ ಮಂಡಳಿ ವಾದ.
ಇದೊಂದು ಕುತೂಹಲ ಹುಟ್ಟಿಸುವ ತಂತ್ರ ಅಷ್ಟೇ. ಕಥೆಗೂ ಚಿತ್ರದ ಹೆಸರಿಗೂ ಒಂದಕ್ಕೊಂದು ಸಂಬಂಧವಿಲ್ಲದೆ ಶೀರ್ಷಿಕೆ ಇಟ್ಟಿರುವುದು ನನಗೆ ಬೇಸರ ತಂದಿದೆ ಎಂದು ಅನಂತನಾಗ್ ಚಿತ್ರದಿಂದ ಹೊರ ಬಂದಿದ್ದಾರೆ. ಆದರೆ ಚಿತ್ರದ ಹೆಸರು ಬದಲಾಯಿಸಿದರೆ ನಾನು ನಟಿಸಲು ಒಪ್ಪಿ ಕೊಳ್ಳುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಪ್ರಸಕ್ತ ರಾಜಕೀಯ ವಿದ್ಯಮಾನಕ್ಕೆ ಈ ಚಿತ್ರದ ಹೆಸರು ಹೋಲುವಂತಿದೆ ಎಂದು ವಾಣಿಜ್ಯ ಮಂಡಳಿ ಅನುಮತಿ ನೀಡಲು ನಿರಾಕರಿಸಿತ್ತು. ಆದರೆ ನಿರ್ದೇಶಕ ನಾಗೇಶ್ ಮಂಡಳಿ ಜೊತೆ ಮತ್ತೆ ಮಾತನಾಡಿ ಇದೇ ಹೆಸರನ್ನು ಇಡುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಮಂಡಳಿ ಈ ಹೆಸರಿಗೆ ಅನುಮತಿ ನೀಡಿದರೂ ಗೌಡ ಪಾತ್ರದಲ್ಲಿ ನಾನು ಅಭಿನಯಿಸುವುದಿಲ್ಲ ಎಂದು ಅನಂತನಾಗ್ ಹೇಳಿದ್ದಾರೆ.
ರೆಡ್ಡಿ ಪಾತ್ರವನ್ನು ನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ನಿರ್ವಹಿಸಲು ಮುಂದಾಗಿದ್ದಾರೆ. ಚಿತ್ರದ ನಾಯಕಿ ಹರಿಪ್ರಿಯಾ. ರಂಗಾಯಣ ರಘು, ಸುಧಾ ಬೆಳವಾಡಿ, ರಮೇಶ್ ಪಂಡಿತ್ ಪಾತ್ರವರ್ಗದಲ್ಲಿದ್ದಾರೆ. ಕೃಷ್ಣವರ್ಧನ್ ಕುಲಕರ್ಣಿ ಅವರ ಸಂಗೀತ, ಗುರು ಪ್ರಶಾಂತ್ ರೈ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸೆಪ್ಟೆಂಬರ್ 27ರಿಂದ ಚಿತ್ರೀಕರಣ ಆರಂಭ.


Click it and Unblock the Notifications











