twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್‌ ಭೂತವೇ? ರಿಮೇಕ್‌ ಪಿಶಾಚಿಯೇ?

    By Staff
    |


    (ಕನ್ನಡ ಚಿತ್ರೋದ್ಯಮದಲ್ಲಿ ಈಗ ಸಂಕಷ್ಟದ ಕಾಲ! ಈ ಮಧ್ಯೆ ಡಬ್ಬಿಂಗ್‌ ಬೇಕು/ಬೇಡ ವಾದಗಳು ಕೇಳಿಬರುತ್ತಿವೆ. ನಿಜಕ್ಕೂ ಡಬ್ಬಿಂಗ್‌ ಅಂದ್ರೆ ಏನು? ಅದರಿಂದಾಗುವ ಉಪಯೋಗಗಳೇನು? ಅಡ್ಡಪರಿಣಾಮಗಳೇನು ಎಂಬ ಬಗ್ಗೆ ಬಹುಮಂದಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪಿಗೆ ಶ್ರೀನಿವಾಸ್‌ ಹಿಂದೊಮ್ಮೆ ಬರೆದಿದ್ದ ಈ ಲೇಖನ, ಇಂದಿಗೂ ಪ್ರಸ್ತುತ. ಓದುಗರು ಈ ಬಗ್ಗೆ ತಮ್ಮ ಅನಿಸಿಕೆಗಳನ್ನೂ ಬರೆಯಬಹುದು. -ಸಂ)

    • ಸಂಪಿಗೆ ಶ್ರೀನಿವಾಸ, ಬನವಾಸಿ ಬಳಗ, ಬೆಂಗಳೂರು
      [email protected]
    ಡಬ್ಬಿಂಗ್‌ ಅಂದರೆ ಏನು?

    ಚಲನಚಿತ್ರ ಅಥವಾ ಧಾರಾವಾಹಿಗಳನ್ನು ಮೂಲದ ಭಾಷೆಯಿಂದ ಮತ್ತೊಂದು ಭಾಷೆಗೆ, ಕಲಾವಿದರ ಧ್ವನಿ ಮರುಮುದ್ರಿಸುವುದನ್ನು ಡಬ್ಬಿಂಗ್‌ ಎಂದು ಕರೆಯುವುದು ವಾಡಿಕೆ. ಈ ಪ್ರಕ್ರಿಯೆಯಲ್ಲಿ ಮೂಲ ಕಲಾವಿದರ ಕಂಠದಲ್ಲೇ ಡಬ್ಬಿಂಗ್‌ ಮಾಡಬಹುದು ಅಥವಾ ಮೂಲ ಕಲಾವಿದರಿಗೆ ಡಬ್ಬಿಂಗ್‌ ಮಾಡುತ್ತಿರುವ ಭಾಷೆಯಲ್ಲಿ ಕುಶಲತೆ ಇಲ್ಲದಿದ್ದರೆ ಅಂತಹ ಕಲಾವಿದರಿಗೆ ಕಂಠದಾನ ಕಲಾವಿದರ ಧ್ವನಿಯನ್ನು ಡಬ್‌ ಮಾಡಬಹುದು. ಈ ರೀತಿ ಒಂದು ಭಾಷೆಯಲ್ಲಿ ತಯಾರಿಸಿದ ಚಲನಚಿತ್ರಗಳನ್ನು, ಧಾರಾವಾಹಿಗಳನ್ನು ಮತ್ತೊಂದು ಭಾಷೆಗೆ ಸುಲಭವಾಗಿ ಡಬ್‌ ಮಾಡಬಹುದು.

    ಕನ್ನಡ ಚಿತ್ರರಂಗ ಮತ್ತು ಡಬ್ಬಿಂಗ್‌ ಇತಿಹಾಸ :

    ಕನ್ನಡ ಚಿತ್ರರಂಗದ ಪ್ರಾರಂಭದ ದಿನಗಳು ಡಬ್ಬಿಂಗ್‌ ಚಿತ್ರಗಳ ಕಾಲ ಎಂದರೆ ತಪ್ಪಲ್ಲ. 4ಂ-50ರ ದಶಕದಲ್ಲಿ, ಜನಪ್ರಿಯವಾದ ತಮಿಳು ಹಾಗೂ ತೆಲುಗು ಚಿತ್ರಗಳನ್ನು ಕನ್ನಡಕ್ಕೆ ಡಬ್‌ ಮಾಡಿ ಕರ್ನಾಟಕದಲ್ಲಿ ಪ್ರದರ್ಶಿಸುತ್ತಿದ್ದರು. ಆಗಿನ್ನೂ ಕನ್ನಡ ಚಿತ್ರರಂಗಕ್ಕೆ ಕರ್ನಾಟಕದಲ್ಲಿ ಒಂದು ಸ್ವಂತ ನೆಲೆಯಿರಲಿಲ್ಲ. ಕನ್ನಡ ಚಲನಚಿತ್ರರಂಗಕ್ಕೆ ಬೇಕಾದ ಸ್ಟುಡಿಯೋ, ತಂತ್ರಜ್ಞಾನ-ತಂತ್ರಜ್ಞರು ಇನ್ನೂ ಕನ್ನಡ ನಾಡಿನಲ್ಲಿ ಲಭ್ಯವಿರಲಿಲ್ಲ. ಎಲ್ಲದಕ್ಕೂ ನೆರೆಯ ಮದ್ರಾಸನ್ನು ಅವಲಂಬಿಸಬೇಕಾಗಿತ್ತು. ಆದ್ದರಿಂದ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಮದ್ರಾಸ್‌ ನಗರದಲ್ಲಿ ಬೀಡು ಬಿಟ್ಟಿತ್ತು. ಇಂತಹ ಪರಿಸ್ಥಿತಿಯಲ್ಲಿ ವರುಷಕ್ಕೆ ನಾಲ್ಕೈದು ಮೂಲ ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದವು. ಇದರಿಂದ ಡಬ್ಬಿಂಗ್‌ ಚಿತ್ರಗಳ ಹಾವಳಿ ಕನ್ನಡ ಚಿತ್ರರಂಗಕ್ಕೆ ದೊಡ್ಡಸಮಸ್ಯೆಯಾಗಿ ಕಾಡುತ್ತಿತ್ತು. ಡಬ್ಬಿಂಗ್‌ನಿಂದಾಗಿ ಕನ್ನಡದ ಕಲಾವಿದರಿಗೆ, ತೆರೆಯಹಿಂದೆ ಕೆಲಸ ಮಾಡುವ ಚಲನಚಿತ್ರ ಕಾರ್ಮಿಕರ ಕೆಲಸಕ್ಕೆ ಹೊಡೆತ ಬಿತ್ತು. ಆದ್ದರಿಂದ ಇಡೀ ಕನ್ನಡ ಚಿತ್ರರಂಗ ಡಬ್ಬಿಂಗ್‌ ವಿರುದ್ದ ಒಂದಾಗಿ ಪ್ರತಿಭಟಿಸಿ ಪರಭಾಷಾ ಚಿತ್ರಗಳ ಡಬ್ಬಿಂಗ್‌ ಮಾಡುವುದನ್ನು ಸರ್ಕಾರ ನಿಷೇಧಿಸಬೇಕೆಂದು ಒತ್ತಾಯಮಾಡಿತು. ಇದರಿಂದ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್‌ ಚಿತ್ರಗಳ ಹಾವಳಿ ಸಂಪೂರ್ಣವಾಗಿ ನಿಂತುಹೋಯಿತು.

    ಕನ್ನಡ ಚಿತ್ರಗಳ ಸುವರ್ಣ ಕಾಲ :

    60, 70 ಹಾಗೂ 80ರ ದಶಕಗಳು ಕನ್ನಡ ಚಿತ್ರರಂಗದ ಸುವರ್ಣಕಾಲ ಎಂದರೆ ತಪ್ಪಾಗಲಾರದು. 60-70ರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರತಿಭಾವಂತ ನಿರ್ದೇಶಕರನ್ನು, ಕಲಾವಿದರನ್ನು, ಸಾಹಿತಿಗಳನ್ನು, ಸಂಗೀತ ಸಂಯೋಜಕರನ್ನು ಕಂಡಿತು. ಅತ್ಯುತ್ತಮ ಪೌರಾಣಿಕ, ಐತಿಹಾಸಿಕ ಹಾಗೂ ಸಾಂಸಾರಿಕ ಚಿತ್ರಗಳು ಒಂದರ ಮೇಲೆ ಒಂದು ತೆರೆಕಂಡು ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸಿತು. ಪುಟ್ಟಣ್ಣ ಕಣಗಾಲ್‌ರಂತಹ ಪ್ರತಿಭಾವಂತ ನಿರ್ದೇಶಕರ ಹಾಗೂ ಡಾ।। ರಾಜ್‌ ರಂತಹ ಕನ್ನಡದ ಮೇರುನಟರು ನಟಿಸುತ್ತಿದ್ದ ಕಾಲ ಅದು.

    80ರ ದಶಕದಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಮದ್ರಾಸಿನಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ಸುಸಜ್ಜಿತ ಸ್ಟೂಡಿಯೋ, ಮರುಮುದ್ರಣ ಕೇಂದ್ರ, ಸಂಕಲನ ಕೇಂದ್ರಗಳು ಕನ್ನಡ ನಾಡಿನ ರಾಜಧಾನಿಯಾದ ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟು ಕನ್ನಡ ಚಿತ್ರಗಳ ಎಲ್ಲ ಅವಶ್ಯಕತೆಗಳು ಕನ್ನಡ ನಾಡಿನಲ್ಲೇ ಲಭ್ಯವಾಯಿತು. ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ಸ್ವಂತ ನೆಲೆಯನ್ನು ಕಂಡುಕೊಂಡಿತು.

    ಕನ್ನಡ ಚಿತ್ರರಂಗದ ಸಂಧಿಕಾಲ(90ರ ದಶಕ) :

    ತೊಂಬತ್ತರ ದಶಕ ಕನ್ನಡ ಚಿತ್ರರಂಗದ ಸಂಧಿಕಾಲವೆನ್ನಬಹುದು. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕನ್ನಡದ ಕತೆಗಳನ್ನು ಚಲನಚಿತ್ರ ಮಾಡುವ ಪ್ರತಿಭಾವಂತ ನಿರ್ದೇಶಕರ ಕೊರತೆ ಹೆಚ್ಚಾಗಿ ಕಾಡಿತು. ಕನ್ನಡದಲ್ಲಿ ಒಳ್ಳೇ ಕತೆಗಳೇ ಇಲ್ಲ ಎಂದು ಸಬೂಬು ಹೇಳಿ ಪರಭಾಷೆಯ ಜನಪ್ರಿಯ ಚಿತ್ರಗಳ ಕತೆಯನ್ನು ನಕಲುಮಾಡಿ ಕನ್ನಡಿಗರಿಗೆ ತೋರಿಸುವ ರೀಮೆಕ್‌ ಸಂಸ್ಕೃತಿ ಪ್ರಾರಂಭವಾಯಿತು. ಈ ರೀಮೇಕ್‌ ಹಾವಳಿ ಎಷ್ಟು ಹೆಚ್ಚಾಯಿತೆಂದರೆ ಮೂಲ ಕನ್ನಡದ ಕತೆಯನ್ನುಳ್ಳ ಚಿತ್ರಗಳಿಗಿಂತ ಪರಭಾಷೆಯಲ್ಲಿ ಯಶಸ್ವಿಯಾದ ರೀಮೇಕ್‌ ಚಿತ್ರಗಳನ್ನೇ ಕನ್ನಡಿಗರು ಇಷ್ಟಪಡುತ್ತಾರೆ ಎಂದು ನಿರ್ಮಾಪಕರು ಹೇಳುವಂತಾಯಿತು.

    ಇಪ್ಪತ್ತೊಂದನೇ ಶತಮಾನದ ಪ್ರಾರಂಭದ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ರೀಮೇಕ್‌ ಚಿತ್ರಗಳ ಹಾವಳಿ ಮಿತಿಮೀರಿ ಕನ್ನಡ ಚಿತ್ರರಂಗದ ಗುಣಮಟ್ಟ ಕುಸಿದಿದೆ ಎನ್ನುವ ಆಪಾದನೆ ಕನ್ನಡ ಚಿತ್ರರಸಿಕರಿಂದ ಬರಲು ಶುರುವಾಗಿ ಕನ್ನಡ ಚಿತ್ರಗಳನ್ನು ನೋಡುವದ್ದನ್ನೇ ಬಹಳಷ್ಟು ಕನ್ನಡಿಗರು ಬಿಟ್ಟುಬಿಟ್ಟರು. ಇದರಿಂದ ಪರಭಾಷೆಯ ಚಿತ್ರಗಳು ಕನ್ನಡ ನಾಡಿನಲ್ಲಿ ಹೆಚ್ಚಾಗಿ, ಕನ್ನಡದ ಸಂಸ್ಕೃತಿಯ ಮೇಲೆ ದಾಳಿಮಾಡಲು ಕಾರಣವಾಯಿತು.

    ತೊಂಬತ್ತರ ದಶಕದ ಉತ್ತಾರಾರ್ಧದಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ಮಹಾನಗರದಲ್ಲಿ ಮಾಹಿತಿತಂತ್ರಚ್ಞಾನ ಕ್ರಾಂತಿಯಾಗಿ ಪರರಾಜ್ಯದವರ ವಲಸೆ ಹೆಚ್ಚಾಗಿ, ಕನ್ನಡ ಚಿತ್ರಗಳು, ಪರಭಾಷಾಚಿತ್ರಗಳ ಅದರಲ್ಲೂ ಹಿಂದಿ, ತೆಲುಗು, ತಮಿಳು ಚಿತ್ರಗಳ ಜೊತೆ ಪೈಪೋಟಿ ನಡೆಸಬೇಕಾದ ಸನ್ನಿವೇಶವೇರ್ಪಟ್ಟು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ರೀತಿಯಲ್ಲಿ ಹೊಡೆತ ನೀಡುತ್ತಿವೆ. ಪರಭಾಷಿಕರು ಇಲ್ಲಿಗೆ ವಲಸೆ ಬಂದು ಇಲ್ಲಿ ಅವರ ಭಾಷೆಯ ಚಿತ್ರಗಳಿಗೆ ಮಾರುಕಟ್ಟೆಯನ್ನು ಹೆಚ್ಚು ಮಾಡಿ, ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಕಬಳಿಸಿದ್ದಾರೆ. ಕನ್ನಡ ಚಿತ್ರಗಳಿಗೆ ಕನ್ನಡ ನೆಲದಲ್ಲೇ ಚಿತ್ರಮಂದಿರಗಳು ದೊರೆಯದಂತ ಪರಿಸ್ಥಿತಿ ಬಂದಿರುವುದು ಕನ್ನಡ ಚಿತ್ರರಂಗದ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಸಮಯದಲ್ಲಿ ಕನ್ನಡ ಚಿತ್ರರಂಗದವರು ಮತ್ತು ನಮ್ಮ ಘನ ಸರ್ಕಾರ ಡಬ್ಬಿಂಗ್‌ ನೀತಿಯ ಬಗ್ಗೆ ಪುನರಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿಬಂದಿದೆ.

    Friday, April 19, 2024, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X