»   » ವೈಶಾಲಿ ಕಾಸರವಳ್ಳಿಗೆ ‘ಮೂಡಲ ಮನೆ’ಯ ಋಣ ತೀರಿತೇ?

ವೈಶಾಲಿ ಕಾಸರವಳ್ಳಿಗೆ ‘ಮೂಡಲ ಮನೆ’ಯ ಋಣ ತೀರಿತೇ?

Posted By:
Subscribe to Filmibeat Kannada
  • ಶಾಲಿನಿ
ರಾತ್ರಿ 9.30 ರ ಸಮಯದಲ್ಲಿ ರಸ್ತೆಯಲ್ಲಿ ಹಾದು ಹೋದರೆ- ರೆಂಬೆ ಕೊಂಬೆಯ ಮೇಲೆ ಗೂಡು ಕಟ್ಟಿದವು ರೆಕ್ಕೆ ಬಲಿತ ಹಕ್ಕಿ... ಎನ್ನುವ ಹಾಡು ಕಿವಿಗೆ ತಟ್ಟುತ್ತದೆ. ಅನೇಕ ವಿಶೇಷ-ವೈಶಿಷ್ಟ್ಯಗಳ ಈ ಧಾರಾವಾಹಿಯಲ್ಲಿ ಪಾತ್ರಧಾರಿಗಳು ದಿಢೀರನೇ ಬದಲಾಗುವುದು ದೊಡ್ಡ ವಿಶೇಷ.

ಕಿರುತೆರೆಯಲ್ಲಿ ಪಾತ್ರಧಾರಿಗಳು ಬದಲಾಗುವುದು ಅಂತಹ ವಿಶೇಷವೇನಲ್ಲ. ಹಾಗಾಗಿ ಮೂಡಲಮನೆಯಲ್ಲಿನ ಪಾತ್ರಗಳ ಮಾಯೆಗೆ ಪ್ರೇಕ್ಷಕರು ಬೆಚ್ಚಿ ಬಿದ್ದಿರಲಿಲ್ಲ . ಮೊದಲು ನಾಣಿ ಪಾತ್ರಧಾರಿ, ನಂತರ ಅವನ ಹೆಂಡತಿ ಶಾರದ, ಮುಂದೆ ವಾಡೆ ಯಾಜಮಾನಿ ಸುಶೀಲ ಬದಲಾದಾಗ ಕೊಂಚ ಗೊಣಗಿಕೊಂಡಿದ್ದರು. ಆದರೆ ಈಗಿನ ಸುದ್ದಿ ಗೊತ್ತಾ ? ಮೂಡಲಮನೆಯಿಂದ ನಿರ್ದೇಶಕಿ ವೈಶಾಲಿಯೇ ಕಾಣೆಯಾಗುತ್ತಿದ್ದಾರೆ!

ಶ್ರದ್ಧೆಯಿಂದ ಚೆಂದದ ಮೂಡಲ ಮನೆ ಕಟ್ಟಿದ್ದ ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಧಾರಾವಾಹಿಯಿಂದ ದೂರ ಸರಿಯುತ್ತಿದ್ದು- ಅವರ ಹೆಸರು ಇಷ್ಟರಲ್ಲೇ ಮೂಡಲ ಮನೆ ಟೈಟಲ್‌ ಕಾರ್ಡ್‌ನಿಂದ ಕಣ್ಮರೆಯಾಗುವುದು ಬಹುತೇಕ ಖಚಿತವಾಗಿದೆ.

ಕಿರುತೆರೆಯಲ್ಲಿ ಹೆಸರೊಬ್ಬರದು ಬಸಿರೊಬ್ಬರದು ಎನ್ನುವುದು ಸಾಮಾನ್ಯ ಸಂಗತಿ. ಪ್ರಖ್ಯಾತ ನಿರ್ದೇಶಕರ ಹೆಸರುಗಳು ಟೈಟಲ್‌ ಕಾರ್ಡ್‌ನಲ್ಲಿ ಕಾಣುತ್ತವೆಯೇ ಹೊರತು, ಅವರು ಅತ್ತ ತಿರುಗಿ ಸಹಾ ನೋಡುವುದಿಲ್ಲ. ಸಹಾಯಕ ನಿರ್ದೇಶಕರೇ ಧಾರಾವಾಹಿಯ ನಿಜವಾದ ನಿರ್ದೇಶಕರು. ನಾಗಾಭರಣ, ಫಣಿರಾಮಚಂದ್ರ, ಎಸ್‌.ನಾರಾಯಣ್‌ ಮತ್ತಿತರರು ಇದನ್ನೇ ಮಾಡುತ್ತಿದ್ದಾರೆ ಎಂದು ಗಾಂಧಿನಗರ ಗೊಣಗುತ್ತಿದೆ. ಮೂಡಲ ಮನೆಯ ವೈಶಾಲಿ ಕಾಸರವಳ್ಳಿ ಇದೇ ಹಾದಿಯಲ್ಲಿ ಹೋಗಿದ್ದಾರೆ. ತಿಂಗಳುಗಟ್ಟಲೇ ಶೂಟಿಂಗ್‌ಗೆ ಹಾಜರಾಗದ ಕಾರಣ, ಈ-ಟಿ.ವಿ. ವ್ಯವಸ್ಥಾಪಕರ ಜೊತೆ ಮನಸ್ತಾಪಗಳಾಗಿವೆ. ಕಡೆಗೆ ಅನಾರೋಗ್ಯದ ಕಾರಣ ನೀಡಿ, ವೈಶಾಲಿ ತಂಡದಿಂದ ಹೊರಬಂದಿದ್ದಾರೆ ಎಂದು ಕಿರುತೆರೆಯಲ್ಲಿ ಗುಸುಗುಸು.

ಚಲನ ಚಿತ್ರವೊಂದರ ನಿರ್ಮಾಣಕ್ಕೆ ವೈಶಾಲಿ ಸಿದ್ಧತೆ ನಡೆಸಿದ್ದಾರೆ. ಹೀಗಾಗಿಯೇ ಮೂಡಲ ಮನೆಯಿಂದ ದೂರ ಉಳಿದಿದ್ದಾರೆ ಎನ್ನುತ್ತಿದೆ ಮತ್ತೊಂದು ಮೂಲ.

ವಿವಾದದ ಮನೆ : ವೈಶಾಲಿ ಧಾರವಾಹಿಯ ಆರಂಭಿಸುತ್ತಿದ್ದಂತೆಯೇ, ಅದರ ಕತೆ ನನ್ನದೆಂದು ಲೇಖಕಿ ರೇಖಾ ಕಾಖಂಡಕಿ ಗುಲ್ಲೆಬ್ಬಿಸಿದರು. ಟೈಟಲ್‌ ಸಾಂಗ್‌ ಪ್ರತಿ ಸಂಚಿಕೆಯಲ್ಲೂ ಪ್ರಸಾರವಾಗುವ ಕಾರಣ, ಅದರ ಸಂಯೋಜನೆಗೆ ಸಂಭಾವನೆಯನ್ನು ಪ್ರತಿ ಸಂಚಿಕೆಗೂ ನೀಡಬೇಕೆಂದು ಡಾ.ಚಂದ್ರಶೇಖರ್‌ ಕಂಬಾರ ಗದ್ದಲ ಎಬ್ಬಿಸಿದ್ದರು.

ಧಾರಾವಾಹಿಯ ಯಶಸ್ಸಿಗೆ ಮುಖ್ಯ ಕಾರಣ, ಬಳಸಿರುವ ಉತ್ತರ ಕರ್ನಾಟಕದ ಭಾಷೆ. ಸಂಭಾಷಣಾಕಾರನ ಹೆಸರೊಂದಿಗೆ ವೈಶಾಲಿ ತಮ್ಮ ಹೆಸರನ್ನು ಅಂಟಿಸಿಕೊಂಡಿದ್ದರು. ಮೂಡಲ ಮನೆಯ ಸಂವಾದಗಳಲ್ಲಿ-‘ನಿಮ್ಮ ಧಾರಾವಾಹಿಯಲ್ಲಿ ಬಳಸಿಕೊಂಡ ಸಂಭಾಷಣೆ ಅದ್ಭುತವಾಗಿದೆ. ಈ ಸಂಭಾಷಣೆ ಬರೆಯಲು ಸಿಕ್ಕ ಸ್ಫೂರ್ತಿ ಯಾವುದು?’ ಎಂದು ಪ್ರೇಕ್ಷಕ ಕೇಳುವ ಮುಗ್ಧ ಪ್ರಶ್ನೆಗೆ ವೈಶಾಲಿ , ‘ನಾನು ಗುಲ್ಬರ್ಗದಲ್ಲಿ ಹುಟ್ಟಿದೆ. ಆದ್ದರಿಂದ ಆಲ್ಲಿಯ ಭಾಷೆ ಸೊಗಡು ನನಗೆ ಸಂಭಾಷಣೆ ಬರೆಯಲು ಪೂರಕವಾಯಿತು’ ಎನ್ನುತ್ತ ತೆರೆ ಹಿಂದಿನವರನ್ನು ತೆರೆಯ ಹಿಂದೆಯೇ ಉಳಿಸುತ್ತಾರೆ ಎಂಬ ದೂರು ಸಹಾ ಇದೆ.

ಮತ್ತೆ ಆರು ತಿಂಗಳು : ಯಶಸ್ವಿ 300 ಕಂತುಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಮೂಡಲ ಮನೆಯ ಟಿಆರ್‌ಪಿ ಚೆನ್ನಾಗಿದೆ. ಜಾಹೀರಾತುದಾರರಿಂದ ಮುಂಗಡಪಡೆದಿದ್ದೇವೆ. ಹೀಗಾಗಿ ಮೂಡಲ ಮನೆಯನ್ನು ದೊಡ್ಡದು ಮಾಡಿ ಎನ್ನುವ ಒತ್ತಾಯ ಈ ಟಿ.ವಿಯವರದು. ಸದ್ಯಕ್ಕೆ ದೊರೆತ ಮಾಹಿತಿಗಳ ಪ್ರಕಾರ ಮೂಡಲ ಮನೆ ಮುಂದಿನ ಆರು ತಿಂಗಳು ಕಿರುತೆರೆಯಲ್ಲಿ ಕಾಣಿಸಲಿದೆ .

ಕಿರುತೆರೆಯ ಮಟ್ಟಿಗೆ ಧಾರವಾಹಿಯ ಸೂತ್ರಧಾರನಾದ ನಿರ್ದೇಶಕನೇ ಬದಲಾಗುತ್ತಿರುವುದು ಇದೇ ಮೊದಲ ಸಲ. ಮೂಡಲ ಮನೆಯ ಮುಂದಿನ ಹಾದಿ ಕುತೂಹಲಕ್ಕೆ ದಾರಿಮಾಡಿದೆ.

Post your views

ಪೂರಕ ಓದಿಗೆ-
ಮಹಿಳೆಯರು ಕಟ್ಟಿದ ‘ಮೂಡಲ ಮನೆ’ !


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada