»   » ನಿರ್ಮಾಪಕ ಕೆ.ಮಂಜು ಹೇಳಿದ ಲಾಸು ಕಥೆ

ನಿರ್ಮಾಪಕ ಕೆ.ಮಂಜು ಹೇಳಿದ ಲಾಸು ಕಥೆ

Subscribe to Filmibeat Kannada
producer K Manju
ಕೊಬ್ರಿ ಮಂಜು ಉರುಫ್ ಕೆ. ಮಂಜು ಉರುಫ್ ಗಂಡುಗಲಿ ಮಂಜು ಗುಡುಗುವ ಮೂಡಿನಲ್ಲಿದ್ದರು. ಸ್ಟಾರ್‌ಗಳ ಡೇಟ್ಸ್ ಪಟ್ಟಾಗಿ ಹಿಡಿದು ಸಿನಿಮಾ ಮಾಡುತ್ತಾ, ವಾಹನ ಚಾಲಕರಿಗೂ ಸರಿಯಾಗಿ ಸಂಭಾವನೆ ಚುಕ್ತಾ ಮಾಡದ ಮಂಜು ಕೆಂಡಾಮಂಡಲವಾಗಲು ಕಾರಣ ಮತ್ತದೇ ಸಂಭಾವನೆ!

ಒಂದು ಮ್ಯಾಟಿನಿ ಶೋ ಹೌಸ್‌ಫುಲ್ ಮಾಡುವ ಯೋಗ್ಯತೆ ಇಲ್ಲದ ನಟರು ಸಂಭಾವನೆ ತಗ್ಗಿಸದೇ ಹೋದರೆ ನಿರ್ಮಾಪಕರಿಗೆ ಉಳಿಗಾಲವಿಲ್ಲ ಅನ್ನೋದು ಅವರ ವಾದ. ಇದಕ್ಕೆ ಅವರೊಂದು ಅಂಕಿ-ಅಂಶ ಕೂಡ ಮುಂದಿಟ್ಟರು. ಈ ವರ್ಷ ಏನಿಲ್ಲವೆಂದರೂ 350 ಕೋಟಿ ರೂಪಾಯಿಯನ್ನು ಕನ್ನಡದ ಚಿತ್ರ ನಿರ್ಮಾಪಕರು ಕಳಕೊಂಡಿದ್ದಾರೆ! ಹಾಗೆ ಕಳಕೊಂಡವರಲ್ಲಿ ಅವರೂ ಒಬ್ಬರು ಎಂಬುದರಲ್ಲಿ ಅನುಮಾನವೇ ಇಲ್ಲ. ಗಣೇಶನ 'ಅರಮನೆ" ಚಿತ್ರವನ್ನು ಓಡಿಸಿ ಸುಸ್ತಾಗಿದ್ದ ಅವರು ಅದೇ ನಾಯಕನ ಒತ್ತಡಕ್ಕೆ ಮಣಿದು ಶತದಿನೋತ್ಸವದ ಸಮಾರಂಭವನ್ನೂ ನಡೆಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಇಂತಿಪ್ಪ ಗಂಡುಗಲಿ ಗುಡುಗಲು ಸ್ಟಾರ್ ಎಂಬ ಪದವೇ ಸವಕಲಾಗಿರುವುದೂ ಕಾರಣವಿದ್ದೀತು.

ವಿಷ್ಣುವರ್ಧನ್ ಆಪ್ತೇಷ್ಟರಲ್ಲಿ ಒಬ್ಬರಾದ ಮಂಜು ತಮ್ಮ ಗುರುಗಳ ಮಹತ್ವಾಕಾಂಕ್ಷೆಯನ್ನೂ ಮುಂದಿಟ್ಟರು. ಜಯನಗರದ ಪುಟ್ಟಣ್ಣ ಚಿತ್ರಮಂದಿರವನ್ನು ಮತ್ತೆ ಸಿನಿಮಾ ನೋಡುವ ಮಟ್ಟಕ್ಕೆ ರೂಪುಗೊಳಿಸಲು ವಿಷ್ಣು ಒಂದು ಕೋಟಿ ರೂಪಾಯಿ ಖರ್ಚು ಮಾಡಲು ತಯಾರಿದ್ದರಂತೆ. ಆದರೆ, ಸರ್ಕಾರ ಅದಕ್ಕೆ ಸ್ಪಂದಿಸಲಿಲ್ಲ ಅನ್ನೋದು ಅವರ ದೂರು. ಅಂದಹಾಗೆ, ಜಯನಗರದ ಶಾಂತಿ, ನಂದ, ಪುಟ್ಟಣ್ಣ ಎಲ್ಲಾ ನಿರ್ನಾಮವಾದ ಮೇಲೆ ಈಗ ಅಲ್ಲಿ ಇನಾಕ್ಸ್ ತಲೆಎತ್ತಿದೆ. ಟಿಕೇಟಿಗೆ ನೂರೈವತ್ತು ಇನ್ನೂರು ಸುಲಿಯುತ್ತಾ ತಲೆಬೋಳಿಸುತ್ತಿದೆ ಅಂತಲೂ ಮಂಜು ಅನೌಪಚಾರಿಕವಾಗಿ ಮಾತಾಡುತ್ತಾ ಚಟಾಕಿ ಹಾರಿಸಿದರು.

'ಅದು ಸರಿ ಮಂಜಣ್ಣ, ಅರಮನೆಯಿಂದ ಬಂದ ಲಾಭ ಎಷ್ಟು" ಅಂತ ಯಾರೋ ಕೇಳಲಾಗಿ, ಮಂಜು ಕಣ್ಣಲ್ಲೇ ಏನೋ ಹೇಳುತ್ತಾ ಜಾಗ ಖಾಲಿ ಮಾಡಿದರು!
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada