ಕಪಾಲಿಯಲ್ಲಿ ಜೋಗಯ್ಯ ಎಂಟ್ರಿಗೆ ಕಿರಾತಕ ಅಡ್ಡಿ?
ಆ.19ರಂದು ಶಿವರಾಜ್ ಕುಮಾರ್ ಅಭಿನಯದ 100ನೇ ಚಿತ್ರ ಜೋಗಯ್ಯ ಬೆಂಗಳೂರಿನ ಕಪಾಲಿ ಚಿತ್ರಮಂದಿರ ಸೇರಿದಂತೆ ರಾಜ್ಯದೆಲ್ಲೆಡೆ ತೆರೆ ಕಾಣಲಿದೆ. ಆದರೆ, ಕಪಾಲಿಯಲ್ಲಿ ಚಿತ್ರ ಅಂದು ತೆರೆ ಕಂಡರೆ ಮತ್ತೊಂದು ಕನ್ನಡ ಸಿನಿಮಾಕ್ಕೆ ಅನ್ಯಾಯವಾಗುತ್ತದೆ. ಅದು ನಮಗೆ ನಿಮಗೂ ಗೊತ್ತು ಆದರೆ, ಶಿವರಾಜ್ ಸಿನಿಮಾ ಎದುರು ಹಾಕಿಕೊಳ್ಳುವ ಧೈರ್ಯ ಕೆಎಫ್ ಸಿಸಿಗೆ ಎಲ್ಲಿದ ಬರಬೇಕು?
ಇದೇ ಶುಕ್ರವಾರ ಯುವ ನಟ ಯಶ್ ಅಭಿನಯದ 'ಕಿರಾತಕ' ಚಿತ್ರ 50 ದಿನ ಪೂರೈಸಲಿದೆ. ಗಳಿಕೆಯಲ್ಲೂ ಉತ್ತಮ ಸ್ಕೋರ್ ಪಡೆದಿರುವ ಚಿತ್ರ ಶತದಿನದ ಕನಸು ಕಾಣುವ ಹೊತ್ತಿನಲ್ಲಿ ಜೋಗಯ್ಯ ಎದುರಿಗೆ ಬಂದು ಕುಂತ್ತವ್ನೆ. ಮೈಸೂರಿನ ಸರಸ್ವತಿ ಚಿತ್ರಮಂದಿರದಿಂದ ಕೂಡಾ ಇದೆ ರೀತಿ ಕಿರಾತಕನನ್ನು ಎತ್ತಂಗಡಿ ಮಾಡಲಾಗಿತ್ತು.
ಒಂದು ಫ್ಲಾಶ್ ಬ್ಯಾಕ್ : ಸದಭಿರುಚಿ ಚಿತ್ರಗಳ ನಿರ್ದೇಶಕ ಟಿಎಸ್ ನಾಗಾಭರಣ ಅವರು ತಮ್ಮ ನೆಚ್ಚಿನ ಚಿತ್ರ 'ಕಲ್ಲರಳಿ ಹೂವಾಗಿ' ಚಿತ್ರವನ್ನು ಸಂತೋಷ್ ಚಿತ್ರಮಂದಿರದಿಂದ ಎತ್ತಂಗಡಿ ಮಾಡಿದಾಗ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ್ದರು.
ವಿಶೇಷವೆಂದರೆ ಪುನೀತ್ ಚಿತ್ರವೊಂದಕ್ಕೆ ಆಗ ಸಂತೋಷ್ ಥೇಟರ್ ಬಿಟ್ಟುಕೊಡಲಾಗಿತ್ತು. ಪುನೀತ್ ಕಸಿನ್ ರಾಘು(ವಿಜಯ ರಾಘವೇಂದ್ರ) ಚಿತ್ರ ಮೂಲೆಗುಂಪಾಯಿತು.
ಕೆಂಪೇಗೌಡನಿಗೆ ಜಾಗ ಕೊಡಲು ಗನ್ ಖ್ಯಾತಿಯ ಹರೀಶ್ ರಾಜ್ ಆತ್ಮಹತ್ಯಾ ಪ್ರಸಂಗ ಎಲ್ಲರಿಗೂ ನೆನಪಲ್ಲೇ ಇದೆ. ದೊಡ್ಡ ಬ್ಯಾನರ್ ಗಳು ಬಂದಾಗ ಸಣ್ಣ ಬಜೆಟ್ ಚಿತ್ರಗಳು ಸದ್ದಿಲ್ಲದೆ ಜಾಗ ಖಾಲಿ ಮಾಡಬೇಕು ಎಂಬ ಅಲಿಖಿತ ನಿಯಮ ಗಾಂಧಿನಗರದಲ್ಲಿದೆ.
ಇದು ಬರೀ ಚಿತ್ರಮಂದಿರ ಸಮಸ್ಯೆಯಲ್ಲ. ಚೆನ್ನಾಗಿ ಓಡೋ ಚಿತ್ರ ಆದರೆ ಅವರಿಗೆ ಪುನೀತ್ ಚಿತ್ರವಾದರೇನು, ಯಶ್ ಚಿತ್ರವಾದರೇನು ಯಾವುದಾದರೂ ಇರ್ಲಿ ಎನ್ನುತ್ತಾರೆ.
ಸಮಸ್ಯೆ ಬಗ್ಗೆ ಸ್ಪಷ್ಟ ಅರಿವಿದ್ದರೂ ಕೆಎಫ್ ಸಿಸಿ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ. ಚಿತ್ರ ಪ್ರದರ್ಶಕರು, ವಿತರಕ ಮೇಲೆ ಕೆಎಫ್ ಸಿಸಿ ಹಿಡಿತ ಎಷ್ಟರಮಟ್ಟಿಗೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಜೋಗಯ್ಯ ಬಂದ ತಕ್ಷಣ ಕಿರಾತಕ ಜಾಗ ಖಾಲಿ ಮಾಡಬೇಕಾಗಿರುವುದು ದುರಂತ. ತಿಕ್ಕಲು ನಿಯಮಗಳಿಂದ ಚಿತ್ರತಂಡಗಳ ನಡುವೆ ಮನಸ್ತಾಪ ಹೆಚ್ಚಾಗುತ್ತಿರುವುದು, ಪ್ರೇಕ್ಷಕರಿಗೆ ಚಿತ್ರಗಳು ಸಿಗದ್ದಂತಾಗಿರುವುದಕ್ಕೆ ಕೆಎಫ್ ಸಿಸಿಯೇ ನೇರ ಹೊಣೆ.
ಒಂದು ಕಡೆ ಡಬ್ಬಿಂಗ್ ವಿರೋಧಿಸುತ್ತಾ ಮತ್ತೊಂದು ಕಡೆ ತೆಲುಗಿಗೆ ಡಬ್ ಆದ ಇಂಗ್ಲೀಷ್ ಚಿತ್ರಗಳಿಗೆ ಮಲ್ಟಿಫೆಕ್ಸ್ ಸ್ಕ್ರೀನ್ ಇರುವ ಚಿತ್ರಮಂದಿರಗಳ ಬಾಗಿಲು ತೆರೆಯುವ ಕೆಎಫ್ ಸಿಸಿನಿಂದ ಕೆಎಫ್ ಐ ಉದ್ಧಾರ ಸಾಧ್ಯವೇ?


Click it and Unblock the Notifications











