»   » ಎಚ್‌ಟುಓ ಸಿನಿಮಾದ ತಮಿಳು ಅಳಿಸಿದ್ದು ಯಾಕೆ?

ಎಚ್‌ಟುಓ ಸಿನಿಮಾದ ತಮಿಳು ಅಳಿಸಿದ್ದು ಯಾಕೆ?

Posted By:
Subscribe to Filmibeat Kannada

*ಪ್ರದೀಪ್‌ ಬೆಳ್ಳಾವೆ, ಬೆಂಗಳೂರು

ಎಚ್‌ಟುಓ ಸಿನಿಮಾ ಬಿಡುಗಡೆಯಾದಾಗ ಅದರಲ್ಲಿನ ತಮಿಳು ಭಾಷೆಯ ಬಗ್ಗೆ ತಕರಾರೇಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕೆಲವು ಸ್ಥಳೀಯ ಮುಖಂಡರ ಒತ್ತಾಯಕ್ಕೆ ಮಣಿದು, ತಮಿಳು ಸಂಭಾಷಣೆ ಇರುವ ಜಾಗದಲ್ಲಿ ಕನ್ನಡ ಸೇರಿಸಿ, ರೀ- ಡಬ್‌ ಮಾಡಬೇಕಾಯಿತು. ಈ ಇಡೀ ವಿದ್ಯಮಾನವನ್ನು ಒಂದು ಹಿಡಿ ಪ್ರಭಾವಿ ಪತ್ರಿಕೆಗಳು (ಬಹುತೇಕ ಇಂಗ್ಲಿಷ್‌) ಬಣ್ಣಿಸಿದ ಪರಿ ವ್ಯಂಗ್ಯಗಳಿಂದಲೇ ತುಂಬಿತ್ತು. ಹೊಸದೊಂದು ವಿಷಯವನ್ನು ತೆಗೆದುಕೊಳ್ಳಬೇಕಾದರೆ ಭಾಷೆಯ ವಿಷಯದಲ್ಲೂ ಜನ ತಾಳ್ಮೆಯಿಂದ ಇರಬೇಕು. ಕನ್ನಡಿಗರು ಹಾಗೆ ಮಾಡಲಿಲ್ಲ ಎಂಬಂತಹ ಧ್ವನಿ ಈ ಪತ್ರಿಕೆಗಳಲ್ಲಿ ಕೇಳಿತು.

ಏನೆಲ್ಲಾ ಬೆಟ್ಟು ಮಾಡಿ ತೋರಿದರೂ, ಭಾಷೆಯಂತಹ ಸೂಕ್ಷ್ಮ ವಿಚಾರ ಎಚ್‌ಟುಓ ವಿಷಯದಲ್ಲಿ ಹೇಗೆ ಕೆಲಸ ಮಾಡಿತು ಎಂಬುದರ ಆಳಕ್ಕೆ ಹೋಗುವ ಪ್ರಯತ್ನವನ್ನು ಯಾವುದೇ ಪತ್ರಿಕೆ ಮಾಡಲಿಲ್ಲ. ಕನಿಷ್ಠ ಪಕ್ಷ ಕನ್ನಡ ಸಿನಿಮಾಗಳಲ್ಲಿ ಬೇರೆ ಭಾಷೆಗಳ ಇತಿಹಾಸದತ್ತ ಕಣ್ಣು ಹಾಯಿಸುವ ಯತ್ನಕ್ಕೂ ಕೈ ಹಾಕಲಿಲ್ಲ.

ಕಾವೇರಿ ನೀರು ಹಂಚಿಕೆಯ ವಿವಾದದ ಎಳೆ ಇರುವ ಎಟ್‌ಟುಓದಂಥ ಚಿತ್ರವನ್ನು ಜನರಿಗೆ ಕೊಡುವಾಗ, ಕೊಂಚ ಅಭಾಸವಾದರೂ ಸಾಕಷ್ಟು ಪ್ರತಿರೋಧವನ್ನು ಮೈಮೇಲೆ ಎಳೆದುಕೊಂಡಂತೆ ಎಂಬುದೇನೋ ನಿಜ. ಆದರೆ ತಕರಾರು ಅಭಾಸದ ಕಾರಣಕ್ಕಲ್ಲ. ಕೇವಲ ತಮಿಳು ಬಳಕೆಯಿದೆ ಎಂಬ ಕಾರಣಕ್ಕೂ ಅಲ್ಲ. ತಮಿಳು ಸಂಭಾಷಣೆಯ ಕೆಲವು ಭಾಗ ಕರ್ನಾಟಕವನ್ನು ಅವಹೇಳನ ಮಾಡುವಂತಿದೆ ಎಂಬ ಕಾರಣ ಕೊಟ್ಟು, ಚಿತ್ರದ ತಮಿಳು ಸಂಭಾಷಣೆ ತೆಗೆದು ಹಾಕಲು ಒತ್ತಾಯ ಹೇರಲಾಯಿತು.

ಅಂತೆ- ಕಂತೆಯ ಮಾತುಗಳು ಹರಿದುಬಂದು, ಪತ್ರಿಕೆಗಳಲ್ಲಿ ಜಾಗ ಪಡಕೊಂಡವು. ಕೇಳಿದ್ದನ್ನು ಪ್ರಮಾಣೀಕರಿಸದೆ ಬರೆದವರೇ ಹೆಚ್ಚು. ಕೆಲವು ಕನ್ನಡ ಹೋರಾಟಗಾರರ ಹುಂಬತನ ಇದು ಎಂದು ಬಣ್ಣಿಸಿದವರೂ ಉಂಟು. ಆದರೆ, ಈ ಹಿಂದೆ ಕನ್ನಡೇತರ ಭಾಷೆ ಬಳಸಿದ ಬೇರಾವ ಚಿತ್ರಕ್ಕೂ ಆಗದ ಪ್ರತಿರೋಧ, ಎಚ್‌ಟುಓಗೆ ಮಾತ್ರ ಯಾಕಾಯಿತು? ಇಂಥಾದ್ದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಯೋಚನೆ ಮಾಡುವ ಗೊಡವೆಗೆ ಯಾರೂ ಹೋಗಲಿಲ್ಲ. ಸತ್ಯ ಶೋಧನೆಯ ಕೆಲಸ ನಡೆಯಲೇ ಇಲ್ಲ.

ಕನ್ನಡಿಗರ ತಾಳ್ಮೆ ಬಗ್ಗೆ ತಗಾದೆ ತೆಗೆಯುವ ಜನರ ಸ್ಮೃತಿಪಟಲ ಅಷ್ಟೊಂದು ವೀಕಾಗಿದೆಯಾ? ಕಳೆದ ವರ್ಷದ ಸೂಪರ್‌ ಹಿಟ್‌ ಚಿತ್ರ ಕುರಿಗಳು ಸಾರ್‌ ಕುರಿಗಳು. ಇದರಲ್ಲಿ ತಮಿಳು- ಕನ್ನಡ, ಮಲೆಯಾಳಿ- ಕನ್ನಡ ಮಾತುಗಳಿದ್ದರೂ ಯಾರಾದರೂ ಕನ್ನಡಿಗರು ಅದನ್ನು ವಿರೋಧಿಸಿದರೇ? ಎಕೆ- 47 ಚಿತ್ರದಲ್ಲಿ ಹಿಂದಿ ಸಂಭಾಷಣೆ ಇರಲಿಲ್ಲವೇ? ಮುಂಬಯಿಯ ಕಥಾವಸ್ತುವಿಗೆ ಹಿಂದಿ ಭಾಷೆ ಪೂರಕವಾಗಿತ್ತು ಅನ್ನುವ ಕಾರಣಕ್ಕೆ ಅದನ್ನು ಕನ್ನಡಿಗರು ಸ್ವೀಕರಿಸಿದರು. ಚಿತ್ರ ಹಿಟ್‌ ಕೂಡ ಆಯಿತು. ಭಾಷೆಯ ವಿಷಯವಾಗಿ ಯಾವ ಪ್ರತಿರೋಧವೂ ವ್ಯಕ್ತವಾಗಲಿಲ್ಲ.

ಕನ್ನಡ ಚಿತ್ರರಂಗದಲ್ಲಿ ಇಂಥಾ ಉದಾಹರಣೆಗಳು ವಿಫುಲವಾಗಿವೆ. ನಮೂನೆಗೆ- 1970ರಲ್ಲಿ ತೆರೆಕಂಡ ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ಒಂದು ಹಾಡಿನ ಪಲ್ಲವಿ ಶುರುವಾಗುವುದು ಹೀಗೆ- ಖಾನ ಪೀನ ಮೋಜ್‌ ಉಡಾನ... ಬಹಮನಿ ಸುಲ್ತಾನನ ಆಸ್ಥಾನದಲ್ಲಿ ಕೇಳಿಬರುವ ಹಾಡಿದು. ಗೀತಪ್ರಿಯ ನಿರ್ದೇಶನದ ಬೆಸುಗೆ ಚಿತ್ರದಲ್ಲಿ ಒಂದು ಇಡೀ ಹಾಡು ಇಂಗ್ಲಿಷ್‌ನಲ್ಲಿತ್ತು. LIFE IS A MERRY MELODY.......ಎಂಬುದು ಆ ಹಾಡು. 1970ರ ದಶಕದಲ್ಲೇ ತೆರೆಕಂಡ ಬಿಳಿ ಹೆಂಡ್ತಿ ಚಿತ್ರದ ಹಾಡೊಂದರಲ್ಲಿ HAPPY MOMENT EVERY EVENT..... ಎಂಬ ಇಂಗ್ಲಿಷ್‌ ಬಳಕೆಯಾಗಿದ್ದು, ಇವತ್ತಿಗೂ ಈ ಹಾಡನ್ನು ಗುನುಗುನಿಸುವವರು ಕಡಿಮೆಯೇನಿಲ್ಲ. ಇಂತಹ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ. ಇವುಗಳಲ್ಲಿ ಭಾಷೆ ಒಂದು ವಿವಾದದ ವಿಷಯವಾಗಿ ಪರಿಣಮಿಸಲೇ ಇಲ್ಲ.

ಎಚ್‌ಟುಓ ಚಿತ್ರದ ತಮಿಳು ಬಳಕೆಗೆ ವಿರೋಧವಾಗಿರುವುದರ ಬಗ್ಗೆ ಕನ್ನಡಿಗರ ತಾಳ್ಮೆಯನ್ನು ತಳಕು ಹಾಕುವುದು ತರವಲ್ಲ. ಕಾವೇರಿ ಸಮಸ್ಯೆಯೇ ಇಲ್ಲಿ ವಿವಾದವಾಗುತ್ತದೆಯೇ ಹೊರತು ಕೇವಲ ಭಾಷೆ ಅಲ್ಲ. ಒಂದು ಕತೆಗೆ ಪೂರಕವಾದ ಭಾಷಾ ಬಳಕೆ ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರಗಳಲ್ಲೂ ಮೂಡಿವೆ. ಆದರೆ, ಒಂದು ಸಮಸ್ಯೆಯನ್ನು ಜನರಿಗೆ ತಿಳಿಸುವಾಗ ಅದರ ಹಿಂದಿನ ನಿಜವಾದ ಕಾರಣ ಪತ್ತೆ ಮಾಡಬೇಕಾಗುತ್ತದೆ. ವಿನಾ ಕಾರಣ ಕನ್ನಡಿಗರ ಮೇಲೆ ಬೆಟ್ಟು ತೋರುವುದು ಸರಿಯಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada