For Quick Alerts
  ALLOW NOTIFICATIONS  
  For Daily Alerts

  ಈಸ್ಟ್‌ಮನ್‌ ಕಲರ್‌ ಕೋಳಿಜಗಳ !

  By Staff
  |

  *ದಟ್ಸ್‌ಕನ್ನಡ ಬ್ಯೂರೊ

  ಸೇವಾ ಶುಲ್ಕ ವಸೂಲಿ ವ್ಯವಸ್ಥೆಯನ್ನೇ ಕಿತ್ತುಹಾಕಿ ಎನ್ನುತ್ತಿದ್ದಾರೆ ನಿರ್ಮಾಪಕರು. ಅದನ್ನು ಈಗಿನದ್ದಕ್ಕಿಂತ ಡಬ್ಬಲ್‌ ಮಾಡಿ (1.50 ರುಪಾಯಿಯಿಂದ 3 ರುಪಾಯಿ) ಅಂತ ಪಟ್ಟು ಹಿಡಿದಿದ್ದಾರಂತೆ ಪ್ರದರ್ಶಕರು. ಅಸಲಿಗೆ ಚಿತ್ರ ನಿರ್ಮಾಪಕ ಹಾಗೂ ಪ್ರದರ್ಶಕರ ಕೋಳಿ ಜಗಳದಲ್ಲಿ ಬಡವಾದವರು ರಾಜ್ಯದ 1050 ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಸಾವಿರಾರು ದಿನಗೂಲಿಗಳು, ಈ ವಾರಾಂತ್ಯ ಕನಿಷ್ಠ ಒಂದು ಸಿನಿಮಾ ಕೂಡ ನೋಡೋ ಭಾಗ್ಯ ಇಲ್ಲವಲ್ಲ ಅಂತ ಪೇಚಾಡಿಕೊಂಡ ಸಿನಿಮಾಪ್ರಿಯರು.

  ಇಷ್ಟಾದರೂ ಜಗಳ ಕೊಂಚವೂ ತಣ್ಣಗಾಗಿಲ್ಲ. ಬದಲಿಗೆ ರಂಗೇರಿದೆ. ಜುಲೈ 16, ಬುಧವಾರದೊಳಗೆ ಸರ್ಕಾರ ಈ ಸಮಸ್ಯೆಗೆ ಒಂದು ಪರಿಹಾರ ಅಂತ ಕಂಡುಕೊಡದೇ ಹೋದಲ್ಲಿ ಗುರುವಾರ ಇಡೀ ಚಿತ್ರೋದ್ಯಮ ಹಾಗೂ ಕಿರುತೆರೆಯ ವಿದ್ಯಮಾನಗಳು ಸಂಪೂರ್ಣ ಬಂದ್‌ ಆಗಲಿವೆ ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಧಮಕಿ ಹಾಕಿದ್ದಾರೆ.

  ಜುಲೈ 13, ಭಾನುವಾರ ರಾತ್ರಿ 7 ಗಂಟೆಯಿಂದ 9 ಗಂಟೆಯವರೆಗೆ ಡಾ.ರಾಜ್‌ಕುಮಾರ್‌ ಅವರ ಸದಾಶಿವನಗರದ ಮನೆಯಲ್ಲಿ ನಿರ್ಮಾಪಕರು ಕೂತು ಬಿಸಿಬಿಸಿ ಚರ್ಚೆ ನಡೆಸಿದರು. ಅಂತಿಮವಾಗಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳೆಂದರೆ-

  • ಸೋಮವಾರ (ಜುಲೈ 14) ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ನಿರ್ಮಾಪಕರು ಹಾಗೂ ಪ್ರದರ್ಶಕರನ್ನು ಸಭೆ ಕರೆದಿದ್ದರು. ಆದರೆ, ಯಾವುದೇ ಸಬೂಬು ಕೊಡದೆ ಹಠಾತ್ತನೆ ಸಭೆಯನ್ನು ಮುಂದಕ್ಕೆ ಹಾಕಿದ್ದಾರೆ. ಜುಲೈ 15ನೇ ತಾರೀಕು ಹುಬ್ಬಳ್ಳಿಯಲ್ಲಿ ಚಿತ್ರ ಪ್ರದರ್ಶಕರ ಸಭೆ ನಡೆಯಲಿದೆ. ಈ ಕಾರಣಕ್ಕೆ ಅಲ್ಲಂ ಸಭೆಯನ್ನು ಮುಂದೂಡಿರಬಹುದು. ಈ ವಿಷಯವಾಗಿ ಅಲ್ಲಂ ಅವರೇನೂ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನೇರವಾಗಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರಿಗೇ ಮನವಿ ಪತ್ರ ಸಲ್ಲಿಸುವುದು.
  • ಈ ಸೇವಾ ಶುಲ್ಕ ವ್ಯವಸ್ಥೆಯನ್ನೇ ರದ್ದುಪಡಿಸಿ ಆದೇಶ ಹೊರಡಿಸಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರನ್ನು ಒತ್ತಾಯಿಸುವುದು.
  • ಗುರುವಾರ (ಜುಲೈ 17) ರಾಜ್ಯಾದ್ಯಂತ ಕಿರುತೆರೆ ಹಾಗೂ ಹಿರಿತೆರೆಯ ಎಲ್ಲಾ ಚಟುವಟಿಕೆಗಳ ಸಂಪೂರ್ಣ ಬಂದ್‌ ಆಚರಿಸುವುದು. ಅವತ್ತು ಯಾವುದೇ ಚಿತ್ರೀಕರಣ ಕೂಡ ನಡೆಯುವುದಿಲ್ಲ.
  ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಮುನಿರತ್ನ, ಕೆ.ಮಂಜು, ಎನ್‌.ಕುಮಾರ್‌, ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ಜೋ ಸೈಮನ್‌, ಎಸ್‌. ಎ. ಗೋವಿಂದರಾಜು, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ಕುಮಾರ್‌ ಪಾಟೀಲ್‌, ಗಣೇಶ್‌ ಮೊದಲಾದವರ ದೊಡ್ಡ ದಂಡು ಸಭೆಯಲ್ಲಿ ಭಾಗವಹಿಸಿತ್ತು.
  ಚಿತ್ರ ಪ್ರದರ್ಶನ ಬಂದ್‌ನಿಂದ-
  • ಬೆಂಗಳೂರಿನ 110 ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ 2500 ದಿನಗೂಲಿಗಳಿಗೆ ಕೆಲಸವಿಲ್ಲದಂತಾಗಿದೆ. ಇನ್ನು ರಾಜ್ಯದಲ್ಲಿ ಎಷ್ಟು ಮಂದಿ ಬರಿಗೈಲಿ ಕೂತಿದ್ದಾರೋ?
  • ನಾಲ್ಕು ದಿನಗಳಲ್ಲಿ ಅಂದಾಜು 30 ಲಕ್ಷ ರುಪಾಯಿ ಆದಾಯ ಗೋವಿಂದ ಆಗಿದೆ.
  ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಬಿ.ಎಸ್‌.ಅರುಣ್‌ಕುಮಾರ್‌ ತಮ್ಮದೇ ಆದ ಗೋಳನ್ನು ಮುಂದಿಡುತ್ತಾರೆ- ಚಿತ್ರಮಂದಿರಗಳನ್ನು ನಡೆಸುವುದು ಮಡಿಲಿಗೆ ಕೆಂಡ ಕಟ್ಟಿಕೊಂಡಂತಾಗಿದೆ. ಈ ವ್ಯಾಪಾರದ ಸಹವಾಸ ಸಾಕಾಗಿ ಚಿತ್ರಮಂದಿರಗಳನ್ನು ವಾಣಿಜ್ಯ ಸಂಕೀರ್ಣಗಳನ್ನಾಗಿ ಮಾಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಇನ್ನೈದು ವರ್ಷಗಳಲ್ಲಿ ಈಗಿರುವ ಚಿತ್ರಮಂದಿರಗಳ ಪೈಕಿ ಅರ್ಧದಷ್ಟು ಉಳಿಯುವುದೇ ಇಲ್ಲ. ನಿರ್ಮಾಪಕರಿಗೆ ಚಿತ್ರ ಪ್ರದರ್ಶಕರ ಕಷ್ಟ ಎಂಥದು ಅಂತ ಗೊತ್ತಿದ್ದೂ ಹಟ ಮಾಡುತ್ತಿದ್ದಾರೆ.

  ಇಂಥಾದರಲ್ಲಿ ಹೊಸ ಚಿತ್ರಮಂದಿರ ಕಟ್ಟುವ ಕನಸು ಕಾಣುವವರೂ ಇಲ್ಲವಾಗಿದ್ದಾರೆ. 15 ವರ್ಷಗಳ ಹಿಂದೆ ಬೆಂಗಳೂರಲ್ಲಿ ಅಭಿನಯ ಚಿತ್ರಮಂದಿರ ಕಟ್ಟಿದ ನಂತರ ಇತ್ತೀಚೆಗೆ ಸಂಜಯ್‌ ನಗರದಲ್ಲಿ ವೈಭವ್‌ ಎಂಬ ಏಕೈಕ ಚಿತ್ರಮಂದಿರವನ್ನು ಕಟ್ಟಲಾಯಿತು. ಆದರೆ ಇದರ ನಡುವೆ ಸಂಗಮ್‌ ಸಂಕೀರ್ಣವಾಗುತ್ತಿದೆ. ಹಿಮಾಲಯ ಚಿತ್ರಮಂದಿರ ಮಾಯವಾಗಿದೆ. ಕೆಂಪೇಗೌಡ ಕೂಡ ಸಿನಿಮಾ ತೋರಿಸುತ್ತಿಲ್ಲ. ಯಾರೂ ಚಿತ್ರಮಂದಿರದ ಮಾಲೀಕರಾಗೋಕೆ ಇವತ್ತಿನ ದಿನ ಇಷ್ಟಪಡುತ್ತಿಲ್ಲ. ಯಾಕೆ ಅಂತ ನಿರ್ಮಾಪಕರನ್ನೇ ಕೇಳಿ ಹೇಳುತ್ತಾರೆ ಅಂತ ಅರುಣ್‌ಕುಮಾರ್‌ ಅಳಲನ್ನು ಮುಂದಿಟ್ಟರು.

  ಕಾಡುಗಳ್ಳ ವೀರಪ್ಪನ್‌ ಡಾ.ರಾಜ್‌ಕುಮಾರ್‌ ಅವರನ್ನು ಅಪಹರಿಸಿದ್ದಾಗ ಈ ರೀತಿ ಚಿತ್ರೋದ್ಯಮದ ಚಟುವಟಿಕೆಗಳು ಸಂಪೂರ್ಣ ನಿಂತಿದ್ದವು. ಅದಾದ ನಂತರ ಮತ್ತೆ ಉದ್ದಿಮೆಯಲ್ಲಿ ದೊಡ್ಡ ಮಟ್ಟದ ಅಪಸ್ವರ ಎದ್ದಿದೆ. ಚಿತ್ರೋದ್ಯಮವನ್ನೇ ನೆಚ್ಚಿಕೊಂಡು ತುತ್ತಿನ ಚೀಲ ತುಂಬಿಕೊಳ್ಳುತ್ತಿರುವ ಜೀವಗಳು ಈ ಬಿಕ್ಕಟ್ಟಿನ ಇಕ್ಕಳಕ್ಕೆ ಸಿಕ್ಕಿ ಒದ್ದಾಡುತ್ತಿರುವುದಂತೂ ಅಕ್ಷರಶಃ ನಿಜ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X