»   » ನಮ್ಮ ಪುಲಿಕೇಶಿಗೆ ಮಸಿಬಳಿದ ತಮಿಳು ಚಿತ್ರಕ್ಕೆ ಗೇಟ್‌ಪಾಸ್‌

ನಮ್ಮ ಪುಲಿಕೇಶಿಗೆ ಮಸಿಬಳಿದ ತಮಿಳು ಚಿತ್ರಕ್ಕೆ ಗೇಟ್‌ಪಾಸ್‌

Subscribe to Filmibeat Kannada


(‘ಹಿಂಸೈಅರಸನ್‌ 23ನೇ ಪುಲಿಕೇಶಿ’ ತಮಿಳು ಚಿತ್ರವನ್ನು ಕನ್ನಡ ಸಮುದಾಯ ಬಹಿಷ್ಕರಿಸಿದೆ. ಆ ಮೂಲಕ ಮನರಂಜನೆ ಹೆಸರಲ್ಲಿ ನಡೆದ ಚಾರಿತ್ರಿಕ ಅಪಚಾರವನ್ನು ಖಂಡಿಸಿದೆ. ನಾಡಿಗೆ ಕಿಡಿಗೇಡಿಗಳು ಮಸಿ ಬಳಿದಿರುವ ಸಂಗತಿಯನ್ನು ಮೊದಲು ವಿಶ್ವಕನ್ನಡಿಗರ ಮುಂದಿಟ್ಟದ್ದು ‘ದಟ್ಸ್‌ ಕನ್ನಡ’. ಆಮೂಲಕ ಕನ್ನಡ ಪ್ರೇಮಿಗಳಲ್ಲಿ ಜಾಗೃತಿ ತಂದ ಹೆಮ್ಮೆ ನಮ್ಮದು, ಜೊತೆಗೆ ನಿಮ್ಮದು. ಕನ್ನಡ ವಿರೋಧಕ್ಕೆ ಪತ್ರಗಳ ಮೂಲಕ ಹೋರಾಟದ ಕಿಡಿ ಹತ್ತಿಸಿದ ಎಲ್ಲ ಓದುಗರಿಗೂ ಧನ್ಯವಾದಗಳು -ಸಂಪಾದಕ)

  • ದಟ್ಸ್‌ ಕನ್ನಡ ಥಿಂಕ್‌ಟ್ಯಾಂಕ್‌
ಕನ್ನಡ ಪ್ರೇಮಿಗಳ ಹೋರಾಟ ಮತ್ತು ಹಂಬಲಕ್ಕೆ ಜಯ ಸಂದಿದೆ. ವಿವಾದಿತ ‘ಹಿಂಸೈ ಅರಸನ್‌ 23ನೇ ಪುಲಿಕೇಶಿ’ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಟ್ಟಿ ನಿರ್ಧಾರ ಕೈಗೊಂಡಿದೆ.

‘ಚಾರಿತ್ರಿಕ ಅಪಚಾರವನ್ನು ವೀರ-ಶೂರರ ತವರಿನವರಾದ ನಾವೆಂದಿಗೂ ಸಹಿಸುವುದಿಲ್ಲ’ ಎಂಬುದನ್ನು ಕನ್ನಡಿಗರು ಸಾಬೀತುಪಡಿಸಿದ್ದಾರೆ. ಇಂತಹ ಪ್ರಯತ್ನಗಳಿಗೆ ನಮ್ಮ ಉತ್ತರವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕನ್ನಡಿಗರ ಸಹನೆ ಪರೀಕ್ಷಿಸಲು ಹೊರಟ ನಿರ್ಮಾಪಕರು, ಈ ಭಾಗದ ಹಂಚಿಕೆದಾರರು ನಷ್ಟಕ್ಕೆ ಗುರಿಯಾಗಿದ್ದಾರೆ.

ಸಿನಿಮಾ ಮತ್ತು ಮನರಂಜನೆ ನೆಪದಲ್ಲಿ ನಾಡಿನ ಐತಿಹಾಸಿಕ ಪುರುಷ ಪುಲಿಕೇಶಿ ದೊರೆ ಮತ್ತು ಸಂಗೊಳ್ಳಿರಾಯಣ್ಣನ ವ್ಯಕ್ತಿತ್ವಕ್ಕೆ ‘ಹಿಂಸೈ ಅರಸನ್‌ 23ನೇ ಪುಲಿಕೇಶಿ’ ಚಿತ್ರದಲ್ಲಿ ಅಪಚಾರ ಮಾಡಲಾಗಿದೆ ಎಂಬುದನ್ನು ಮೊದಲು ಜಗತ್ತಿನ ಮುಂದಿಟ್ಟದ್ದು, ದಟ್ಸ್‌ ಕನ್ನಡ.

ನಮ್ಮಲ್ಲಿ ಸುದ್ದಿ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಅಪಾರ ಓದುಗರು ತಮ್ಮ ಆಕ್ರೋಶ ಮತ್ತು ಅಸಮಾಧಾನವನ್ನು, ಕನ್ನಡ ವಿರೋಧಿಗಳಿಗೆ ಎಚ್ಚರಿಕೆಯನ್ನು ತಮ್ಮ ಇ-ಮೇಲುಗಳ ಮೂಲಕ ಕಚೇರಿಗೆ ಕಳುಹಿಸಿದರು. ಈಗಲೂ ಇ-ಮೇಲು ಚಳವಳಿ ಮುಂದುವರೆದಿದೆ. ಓದುಗರ ಸಾತ್ವಿಕ ಸಿಟ್ಟಿಗೆ ಕನ್ನಡ ಪರ ಸಂಘಟನೆಗಳು ಕೈಜೋಡಿಸಿದ ಪರಿಣಾಮ, ಕನ್ನಡಿಗರು ಚಾರಿತ್ರಿಕ ಸತ್ವ ಪರೀಕ್ಷೆಯಲ್ಲಿ ಗೆಲ್ಲಲು ಸಾಧ್ಯವಾಯಿತು.

ವಿವಾದಿತ ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗರಾಜು, ಇಂತಹ ಚಿತ್ರಗಳಿಂದ ಕನ್ನಡಿಗರು ಮತ್ತು ತಮಿಳರ ನಡುವಿನ ಬಾಂಧವ್ಯಕ್ಕೆ ಕೊಡಲಿಪೆಟ್ಟು ಬೀಳಲಿದೆ. ಹೀಗಾಗಿ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಚಿತ್ರದ ನಿರ್ಮಾಪಕರು ಮತ್ತು ಹಂಚಿಕೆದಾರರಲ್ಲಿ ಒತ್ತಾಯ ಮಂಡಿಸಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿರುವುದಾಗಿ ತಿಳಿಸಿರುವ ಗಂಗರಾಜು, ಮುಂದೆ ಇಂತಹ ಅಚಾತುರ್ಯವಾಗದಂತೆ ಎಚ್ಚರವಹಿಸಲು ಸಲಹೆ ನೀಡಿದ್ದಾರೆ.

‘ಹಿಂಸೈ ಅರಸನ್‌ 23ನೇ ಪುಲಿಕೇಶಿ’ ತಮಿಳು ಸಿನಿಮಾವನ್ನು ರಾಜ್ಯದಲ್ಲಿ ನಿರ್ಬಂಧಿಸಿದ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮವನ್ನು ಸಂಗೊಳ್ಳಿ ರಾಯಣ್ಣ ಕನ್ನಡಿಗರ ವೇದಿಕೆ, ಕನ್ನಡಪರ ಸಂಘಟನೆಗಳ ಒಕ್ಕೂಟ, ಬನವಾಸಿ ಬಳಗ ಸ್ವಾಗತಿಸಿದೆ.

* ಅಂದಹಾಗೆ, ಪುಲಿಕೇಶಿ ಸಿನಿಮಾದ ಬಗ್ಗೆ ದಟ್ಸ್‌ಕನ್ನಡ ಪತ್ರಿಕೆಗೆ ನಲ್ಮೆಯಿಂದ ಮಾಹಿತಿ / ಲೇಖನ ಬರೆದವರು ಬರಹ ವಾಸು ಅವರ ಅಣ್ಣ ಚಂದ್ರಶೇಖರನ್‌ ಕಲ್ಯಾಣರಾಮನ್‌.

* ಪುಲಿಕೇಶಿ ಸಿನಿಮಾ ಪ್ರದರ್ಶನ ರದ್ದಾದ ಸುದ್ದಿ ಕೇಳಿ ಕನ್ನಡ ಬಾಂಧವರಲ್ಲನೇಕರು ಸಂತಸದ ಇ-ಮೇಲ್‌ಗಳನ್ನು ದಟ್ಸ್‌ಕನ್ನಡ ಕಚೇರಿಗೆ ತಲುಪಿಸುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ ಮತ್ತು ಶುಭಾಶಯ.

Post your views

ಇದನ್ನೂ ಓದಿ
ಕೆಚ್ಚೆದೆಯ ಕಲಿ ‘ಸಂಗೊಳ್ಳಿರಾಯಣ್ಣ’ನಾಗಿ ಅರ್ಜುನ್‌ ಸರ್ಜಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada