»   » ಉಪೇಂದ್ರರ ಮಚ್ಚಿನ ಚಿತ್ರದ ಹೆಸರು; ‘ಮಾಸ್ತಿ’!

ಉಪೇಂದ್ರರ ಮಚ್ಚಿನ ಚಿತ್ರದ ಹೆಸರು; ‘ಮಾಸ್ತಿ’!

Subscribe to Filmibeat Kannada


ಚಿತ್ರದ ಆರಂಭಕ್ಕೆ ಮುನ್ನವೇ ವಿವಾದದ ಗೋಡೆ. ಶೀರ್ಷಿಕೆ ಬದಲಿಸಲು ಸಾಹಿತ್ಯಲೋಕದ ಆಗ್ರಹ... ಆಗ್ರಹಕ್ಕೆ ಕೋಟಿ ನಿರ್ಮಾಪಕ ರಾಮು, ನಿರ್ದೇಶಕ ಶಿವಮಣಿ ನಕಾರ... ಉಪೇಂದ್ರ ಮಾತ್ರ ತುಟಿಬಿಚ್ಚುತ್ತಿಲ್ಲ!

ವಿವಾದಗಳಿಂದಲೇ ಚಿತ್ರಕ್ಕೆ ಪ್ರಚಾರ ಪಡೆಯುವ ತಂತ್ರ ಚಿತ್ರರಂಗದಲ್ಲಿ ಹೆಚ್ಚುತ್ತಿದೆ. ಈ ನಿಟ್ಟಿಗೆ ‘ಮಾಸ್ತಿ’ ಹೊಸ ಸೇರ್ಪಡೆ. ಕನ್ನಡದ ಆಸ್ತಿ -ಮಾಸ್ತಿ. ಅವರ ಹೆಸರನ್ನು ರೌಡಿಯಾಬ್ಬನ ಕತೆ ಹೊಂದಿರುವ ಚಿತ್ರಕ್ಕೆ ಇಟ್ಟಿರುವುದು ಸಾಹಿತ್ಯವಲಯದಲ್ಲಿ ಟೀಕೆಯ ವಸ್ತು.

ಮಾಸ್ತಿ ಚಿತ್ರದ ಶೀರ್ಷಿಕೆ ಬದಲಿಸಲು ಆಗ್ರಹಿಸಿ, ಶುಕ್ರವಾರ(ಜು.14) ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಸಾಹಿತ್ಯ ಲೋಕದ ಪ್ರಮುಖರು ಸಭೆ ನಡೆಸಿದರು. ಸಹೃದಯರ ಮನದಲ್ಲಿ ನೆಲೆಸಿರುವ ಮಾಸ್ತಿ ಹೆಸರಿಗೆ, ಬೇರೆ ಅರ್ಥಬರುವಂತೆ ಮಾಡುವ ಪ್ರಯತ್ನ ಸಲ್ಲದು. ಈ ಕೂಡಲೇ ಚಿತ್ರದ ಹೆಸರನ್ನು ಬದಲಿಸಬೇಕು. ಇಲ್ಲದಿದ್ದರೆ, ಹೋರಾಟ ಅನಿವಾರ್ಯವಾಗುತ್ತದೆ ಎಂದು ಸಾಹಿತ್ಯವಲಯ ಎಚ್ಚರಿಸಿದೆ.

ಶೀರ್ಷಿಕೆ ಬಗೆಗೆ ಸಾಹಿತಿಗಳಾದ ಜಿ.ಎಸ್‌.ಶಿವರುದ್ರಪ್ಪ, ಯು.ಆರ್‌.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಸುಮತೀಂದ್ರ ನಾಡಿಗ ಮತ್ತಿತರರು ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಚಿತ್ರದ ನಿರ್ಮಾಪಕ ರಾಮು ಮತ್ತು ನಿರ್ದೇಶಕ ಶಿವಮಣಿ, ಯಾವುದೇ ಕಾರಣಕ್ಕೂ ಶೀರ್ಷಿಕೆ ಬದಲಿಸಲು ಸಾಧ್ಯವಿಲ್ಲ. ನಮಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಬಗ್ಗೆ ಗೌರವವಿದೆ. ಈ ಚಿತ್ರಕ್ಕೂ ಮಾಸ್ತಿ ಅವರಿಗೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಚಿತ್ರದ ಶೀರ್ಷಿಕೆ ಮಾತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಸ್ತಿ ಎನ್ನುವುದು ಊರಿನ ಹೆಸರು. ಈಗಾಗಲೇ ತಿರುಪತಿ, ಹುಬ್ಬಳ್ಳಿ, ಮಂಡ್ಯ, ಕಲಾಸಿಪಾಳ್ಯ ಮತ್ತಿತರ ಚಿತ್ರಗಳು ಹೊರಬಂದಿವೆ. ಹೀಗಾಗಿ ಮಾಸ್ತಿ ಹೆಸರಿಟ್ಟರೇ ತಪ್ಪೇನಿಲ್ಲ ಎಂದು ಚಿತ್ರೋದ್ಯಮದ ಒಂದು ಗುಂಪು ವಾದಿಸುತ್ತಿದೆ. ಮಾಸ್ತಿ ಎಂದು ಹೆಸರಿಡಲು ಯಾವುದೇ ಕಾನೂನು ತೊಡಕುಗಳಿಲ್ಲ. ಅಲ್ಲದೇ ಸಾಹಿತಿಗಳ ಹೆಸರಲ್ಲಿ -ಲಂಕೇಶ, ಚದುರಂಗ ಸಿನಿಮಾಗಳು ಹೊರಬಂದಿಲ್ಲವೇ ಎಂಬ ಪ್ರಶ್ನೆಯನ್ನು ಸಹಾ ಮುಂದಿಟ್ಟಿದೆ.

ಮಾಸ್ತಿ ಎಂದು ಹೆಸರಿಡಲು ಯಾವುದೇ ಕಾನೂನು ತೊಡಕುಗಳಿಲ್ಲದಿರಬಹುದು. ಆದರೆ ಅದು ಸಾಂಸ್ಕೃತಿಕ ಹಾನಿ ಎಂದು ಪ್ರಜ್ಞಾವಂತ ಸಮುದಾಯ ಹೇಳುತ್ತಿದೆ.

ಹೆಸರಿಗೂ ಬರವೇ? : ಕನ್ನಡ ಚಿತ್ರರಂಗದಲ್ಲಿ ಕತೆಗಳಿಲ್ಲ ಎಂಬ ಗೊಣಗಾಟ ಮೊದಲಿನಿಂದಲೂ ಇದೆ. ಪ್ರಸ್ತುತ ಚಿತ್ರದ ಹೆಸರುಗಳಿಗೂ ಬರ ಬಂದಿದೆಯೇನೋ ಎಂಬಂತೆ ನಿರ್ದೇಶಕರು, ನಿರ್ಮಾಪಕರು ವರ್ತಿಸುತ್ತಿದ್ದಾರೆ.

ಗೌಡ್ರು, ಶಾಸ್ತ್ರೀ, ಬ್ರಾಹ್ಮಣ(ಶೀರ್ಷಿಕೆ ಬಗ್ಗೆ ಬ್ರಾಹ್ಮಣ ಸಮುದಾಯ ವಿರೋಧಿಸಿದೆ), ಗೊಲ್ಲ ಮತ್ತಿತರ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸುತ್ತಿವೆ. ಮುಂದೆ ಇನ್ನೆಂಥ ಶೀರ್ಷಿಕೆ ಕಾದಿವೆಯೇ ಗೊತ್ತಿಲ್ಲ.

ಮಾಸ್ತಿ ನಿಜಕ್ಕೂ ಏನು? : ಉಪೇಂದ್ರ ಅಭಿನಯದ ಈ ಚಿತ್ರ ಭೂಗತ ಲೋಕದ ಕತೆಯನ್ನು ಹೊಂದಿದೆ. ಬೆಂಗಳೂರಿನ ಪುರಾತನ ರೌಡಿ, ಇಲ್ಲಿ ಕಥಾನಾಯಕ. ಮಳವಳ್ಳಿ ಸಾಯಿಕೃಷ್ಣ, ರಂಗನಾಥ ಅವರದು ಸಂಭಾಷಣೆ. ಗುರುಕಿರಣ್‌ ಸಂಗೀತ ನೀಡಿದ್ದಾರೆ.

ಅಂದ ಹಾಗೇ ‘ಮಾಸ್ತಿ’ ಶೀರ್ಷಿಕೆಯಡಿಯಲ್ಲಿ ‘ಲವ್‌ ಲಾಂಗ್‌ ಲೈಫ್‌’ ಎಂಬ ಉಪಶೀರ್ಷಿಕೆ ಮಿಂಚುತ್ತಿದೆ. (‘ಲಾಂಗ್‌’ ಎನ್ನುವುದು ರಕ್ತವರ್ಣದಲ್ಲಿದ್ದರೇ, ಶೀರ್ಷಿಕೆ ಪಕ್ಕ ಲಾಂಗ್‌ ಹಿಡಿದ ಉಪೇಂದ್ರ ಭರ್ಜರಿ ರೌಡಿ ಗೆಟಪ್‌ನಲ್ಲಿ ಕೂತಿದ್ದಾರೆ!)

ಚಿತ್ರದ ಶೀರ್ಷಿಕೆ ಬಗ್ಗೆ ನಿಮ್ಮ ಸಮ್ಮತಿ-ಅಸಮ್ಮತಿಯನ್ನು ನಮಗೆ ತಿಳಿಸಿ.

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada