»   » ಹೊಸ ವಿವಾದದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ

ಹೊಸ ವಿವಾದದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ

Subscribe to Filmibeat Kannada

ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ವರಮಾನ ತೆರಿಗೆಯಲ್ಲಿ ವಿನಾಯಿತಿ ಪಡೆದು ಹೊಸ ವಿವಾದದ ಸುಳಿಗೆ ಸಿಕ್ಕಿದ್ದಾರೆ. 1996-97ರಲ್ಲಿ ವಿಶ್ವಸುಂದರಿ ಕಿರೀಟ ಧರಿಸಿದಾಗ ಆಕೆ ಗಳಿಸಿದ ಹಣವನ್ನು 'ತಾನು ಅನಿವಾಸಿ ಭಾರತೀಯಳು' ಎಂದು ಅರ್ಜಿ ಸಲ್ಲಿಸಿ ಆದಾಯ ಕರದಿಂದ ವಿನಾಯಿತಿ ಪಡೆದಿದ್ದಾರೆ. ವಿಶ್ವಸುಂದರಿಯಾಗಿ ಆಯ್ಕೆಯಾದ ನಂತರ ಆಕೆ ವಿದೇಶಗಳಲ್ಲಿ ಗಳಿಸಿದ ರು.26 ಲಕ್ಷಕ್ಕೆ ವರಮಾನ ತೆರಿಗೆಯಿಂದ ವಿನಾಯಿತಿ (ಎನ್ ಆರ್ ಐ ಅಡಿ) ಪಡೆದು, ಕೇವಲ ರು.2.14 ಲಕ್ಷಗಳಿಗೆ ಮಾತ್ರ ವರಮಾನ ತೆರಿಗೆಯನ್ನು ಪಾವತಿಸಿದ್ದಾರೆ.

ವರಮಾನ ತೆರಿಗೆ ವಿನಾಯಿತಿ ಪಡೆಯಲು ಆಕೆ ಸಲ್ಲಿಸಿದ ವಿವರಗಳು ಹಾಗೂ ಪಾಸ್ ಪೋರ್ಟನ್ನು ಪರಿಶೀಲಿಸಲಾಗಿ ಆಕೆ ಅನಿವಾಸಿ ಭಾರತೀಯರಲ್ಲ ಎಂಬ ವಿಚಾರ ಬೆಳಕಿಗೆ ಬಂತು! ಈ ಕುರಿತು ಆದಾಯ ತೆರಿಗೆ ಅಧಿಕಾರಿಗಳು 2003ರಲ್ಲೇ ಐಶ್ವರ್ಯ ರೈ ಅವರನ್ನು ಪ್ರಶ್ನಿಸಿದರು. ನಂತರ ರು.26 ಲಕ್ಷಗಳಿಗೆ ತೆರಿಗೆ ಕಟ್ಟಬೇಕೆಂದು ಆದೇಶ ಸಹ ಹೊರಡಿಸಿದರು. ಆಗ ಐಶ್ವರ್ಯರೈ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮೊರೆ ಹೋಗಿ ಸಮಸ್ಯೆಯಿಂದ ತಾತ್ಕಾಲಿಕ ಪರಿಹಾರ ಪಡೆದಿದ್ದರು.

ನ್ಯಾಯಾಧಿಕರಣ ತೀರ್ಪನ್ನು ಪ್ರಶ್ನಿಸಿಆದಾಯ ತೆರಿಗೆ ಅಧಿಕಾರಿಗಳು ಸೋಮವಾರ(ಅ.13) ಮುಂಬೈ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಐಶ್ವರ್ಯ ರೈ ಅನಿವಾಸಿ ಭಾರತೀಯರು ಎಂದು ಸುಳ್ಳು ಮಾಹಿತಿ ನೀಡಿ ಆದಾಯ ತೆರಿಗೆ ಪಾವತಿಸದೆ ವಂಚಿಸಿರುವ ಬಗ್ಗೆ ವಕೀಲ ಬೆನ್ನಿ ಚಟರ್ಜಿ ಹೈಕೋರ್ಟ್ ನಲ್ಲಿ ವಾದ ಹೂಡಿದ್ದಾರೆ. ಅನಿವಾಸಿ ಭಾರತೀಯ ಸೌಲಭ್ಯದಡಿ ವರಮಾನ ತೆರಿಗೆಯಲ್ಲಿ ವಿನಾಯಿತಿ ಪಡೆಯಬೇಕಾದರೆ,ಕನಿಷ್ಠ 186 ದಿನಗಳ ಕಾಲ ವಿದೇಶದಲ್ಲಿ ನೆಲಸಿರಬೇಕು ಎಂದು ಆದಾಯ ತೆರಿಗೆ ಅಧಿಕಾರಿಗಳು ವಿವರ ನೀಡಿದ್ದಾರೆ. ವಿಶ್ವಸುಂದರಿ ಪಟ್ಟ ಪಡೆಯುವ ಸಂದರ್ಭದಲ್ಲಿ ಐಶ್ವರ್ಯ ರೈ ಕೇವಲ 92 ದಿನಗಳಷ್ಟು ಕಾಲ ಮಾತ್ರ ವಿದೇಶದಲ್ಲಿ ನೆಲೆಸಿದ್ದರು ಎಂದು ಅಧಿಕಾರಿಗಳು ದೂರಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada