»   » ಚಿತ್ರಲೋಕ ಡಾಟ್‌ ಕಾಂನ ಕೆ.ಎಂ.ವೀರೇಶ್‌ ಮೇಲೆ ಹಲ್ಲೆ

ಚಿತ್ರಲೋಕ ಡಾಟ್‌ ಕಾಂನ ಕೆ.ಎಂ.ವೀರೇಶ್‌ ಮೇಲೆ ಹಲ್ಲೆ

Posted By:
Subscribe to Filmibeat Kannada

ಜುಲೈ 12. ಚಿತ್ರಲೋಕ ಡಾಟ್‌ ಕಾಂನ ವೀರೇಶ್‌ ಪಾಲಿಗೆ ಕರಾಳ ದಿನ. ಅಂದು ಚಿತ್ರ ನಟ ಶಿವರಾಜ್‌ಕುಮಾರ್‌ ಬರ್ತ್‌ಡೇ. ಬೆಂಗಳೂರಿನ ವಯಾಲಿಕಾವಲ್‌ ಮೈದಾನದಲ್ಲಿ ವರದಿ ಹೆಕ್ಕಲು ಹೋಗಿದ್ದ ವೀರೇಶ್‌ ಮೇಲೆ ಇದ್ದಕ್ಕಿದ್ದ ಹಾಗೆ ಎಂಟು ಹತ್ತು ಜನ ದಾಳಿಯಿಟ್ಟರು. ತಲೆಗೆ ಎದೆಗೆ ಎಕ್ಕಾ ಮಕ್ಕಾ ಹೊಡೆದರು. ದಾಳಿ ಮಾಡಿದವರ ಮುಖ್ಯಸ್ಥ ರಾ.ಸೋಮನಾಥ್‌.
- ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ವೀರೇಶ್‌ ಕೊಟ್ಟಿರುವ ದೂರು ಈ ಘಟನೆಯನ್ನು ಹೇಳುತ್ತದೆ.

ಯಾರೀ ಸೋಮನಾಥ್‌?
ರವಿ ಬೆಳಗೆರೆ ಸಾರಥ್ಯದ ‘ಹಾಯ್‌ ಬೆಂಗಳೂರ್‌!’ ವಾರ ಪತ್ರಿಕೆಯ ಯಶಸ್ಸಿನಲ್ಲಿ ಈತನ ಹವಿಸ್ಸೂ ಇದೆ. ಚಳವಳಿಕಾರನೆಂದು ಗುರುತಿಸಿಕೊಂಡಿದ್ದ ಈ ಉತ್ಸಾಹಿಯ ಬರವಣಿಗೆಗೆ ‘ಹಾಯ್‌’ ವೇದಿಕೆಯಾಯಿತು. ಸ್ಫೋಟಕ ಸುದ್ದಿಗಳ ಮೂಲಕ ಸೋಮನಾಥ್‌ ಸದ್ದೂ ಮಾಡಿದರು. ಪತ್ರಿಕೆ ಹೆಸರನ್ನು ಬಳಸಿಕೊಂಡು ಸುಲಿಗೆಗೆ ಇಳಿದಿದ್ದಾರೆ ಎಂಬ ಕಾರಣ ಕೊಟ್ಟು ರವಿ ಬೆಳಗೆರೆ ಸೋಮನಾಥ್‌ಗೆ ಗೇಟ್‌ ಪಾಸ್‌ ಕೊಟ್ಟರು.

‘ರವಿ ಬೆಳಗೆರೆ ಒಬ್ಬ ವಿಕೃತ ಕಾಮಿ , ಅವನನ್ನು ಬಂಧಿಸಿ’ ಎಂಬ ಸ್ಲೋಗನ್ನು ಹೊತ್ತ ರಾ.ಸೋಮನಾಥ್‌ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಚೇರಿ ಮುಂದೆ ಧರಣಿ ಕೂತರು. ದನಿಯಾಗಿ ಒಂದಷ್ಟು ಜನ ಇದ್ದರು. ಈಗ ಲಂಕೇಶ್‌ ಪತ್ರಿಕೆ ಸೋಮನಾಥ್‌ ಬರಹಕ್ಕೆ ಜಾಗ ಕೊಟ್ಟಿದೆ.

ವೀರೇಶ್‌ ಮೇಲೆ ಸೋಮನಾಥ್‌ಗೆ ಯಾಕೆ ಸಿಟ್ಟು?
ಇದು ವೀರೇಶ್‌ಗೂ ಗೊತ್ತಿಲ್ಲ. ವೀರೇಶ್‌ ‘ಹಾಯ್‌..’ನ ಅಧಿಕೃತ ಫೋಟೋಗ್ರಾಫರ್‌ ಕೂಡ ಹೌದು. ಉದಯ ವಾಣಿ, ಕನ್ನಡ ಪ್ರಭ, ಸ್ಕಿೃೕನ್‌ ಮೊದಲಾದ ಪತ್ರಿಕೆಗಳಿಗೆ ಫೋಟೋಗಳನ್ನು ಫ್ರೀಲಾನ್ಸ್‌ ಮಾಡುವ ವೀರೇಶ್‌, ಒಂದು ಕಾಲದಲ್ಲಿ ಸೋಮನಾಥ್‌ ಕಲೀಗ್‌. ಪ್ರಾಯಃ ರವಿ ಬೆಳಗೆರೆ ಮೇಲಿನ ಆಕ್ರೋಶಕ್ಕೆ ವೀರೇಶ್‌ ಬಲಿ ಪಶು ಆಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ!

ಆವತ್ತು ನಡೆದದ್ದೇನು?
ಸಿನಿಮಾ ಸಮಾರಂಭಗಳಿಗೆ ಹೊತ್ತು ಗೊತ್ತೆನ್ನದೆ ಕೆಮೆರಾ ಹಿಡಿದು ಹೊರಡುವ ವೀರೇಶ್‌ ಶಿವರಾಜ್‌ ಹುಟ್ಟುಹಬ್ಬಕ್ಕೂ ಹೋದರು. ಇದ್ದಕ್ಕಿದ್ದಂತೆ ದಾಳಿ. ಕೊನೆಗೆ ಸೋಮನಾಥ್‌ ನಾಪತ್ತೆ. ವೇದಿಕೆ ಹತ್ತಿ ವೀರೇಶ್‌ ತಮ್ಮ ಮೇಲಿನ ದಾಳಿ ಬಗ್ಗೆ ಹೇಳಿಕೊಂಡರು. ಸೋಮನಾಥ್‌ ಸುಮ್ಮನಾಗಲಿಲ್ಲ. ಮೊಬೈಲಿಗೆ ಫೋನಾಯಿಸಿ ಮತ್ತೆ ದಾಳಿಯಿಡುವುದಾಗಿ ವೀರೇಶ್‌ಗೆ ಧಮಕಿ ಹಾಕಿದರು. ರವಿ ಬೆಳಗೆರೆಗೆ ಫೋನಾಯಿಸಿ ವೀರೇಶ್‌ ನಡೆದದ್ದನ್ನು ಹೇಳಿದರು. ಪೊಲೀಸರು ವೀರೇಶ್‌ ಜೊತೆಯಾದರು. ಆಸ್ಪತ್ರೆಗೆ ಹೋಗಿ ಫಸ್ಟ್‌ ಏಡ್‌ ಮಾಡಿಸಿಕೊಂಡ ನಂತರ ವೈಯಾಲಿ ಪೊಲೀಸ್‌ ಠಾಣೆಗೆ ಪೊಲೀಸರ ಜೊತೆಯಲ್ಲೇ ಹೋಗಿ ವೀರೇಶ್‌ ದೂರು ಕೊಟ್ಟರು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada