»   » ದಿನಕ್ಕೆ ನಾಲ್ಕೇ ನಾಲ್ಕು ಚಿತ್ರ ಪ್ರದರ್ಶನ ಸಾಲದು!

ದಿನಕ್ಕೆ ನಾಲ್ಕೇ ನಾಲ್ಕು ಚಿತ್ರ ಪ್ರದರ್ಶನ ಸಾಲದು!

Posted By:
Subscribe to Filmibeat Kannada

ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಾದ ರೆಕ್ಸ್, ನವರಂಗ್ ಹಾಗೂ ಪ್ರದೀಪ್ ನ ಮಾಲೀಕರು ಸಿಟ್ಟಿಗೆದ್ದಿದ್ದಾರೆ. ಕಾರಣ, ಜಿಲ್ಲಾ ದಂಡಾಧಿಕಾರಿಗಳು ಇತ್ತೀಚೆಗೆ ನೀಡಿದ ನೋಟಿಸ್. ಆ ನೋಟೀಸ್ ನಲ್ಲಿ ದಿನವೊಂದರಲ್ಲಿ ನಾಲ್ಕು ಪ್ರದರ್ಶನ ಮಾತ್ರ ಇರಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದರ ವಿರುದ್ಧ ಮೇಲ್ಕಂಡ ಚಿತ್ರಮಂದಿರಗಳ ಮಾಲೀಕರು ರಾಜ್ಯ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.

ನೋಟಿಸ್ ನಲ್ಲಿ ಬೆಳಗ್ಗೆ 10 ಕ್ಕೂ ಮುಂಚೆ ಹಾಗೂ ರಾತ್ರಿ 10 ರ ನಂತರ ಚಿತ್ರವನ್ನು ಪ್ರದರ್ಶಿಸುವಂತಿಲ್ಲ. ಇದರ ಪ್ರಕಾರ ದಿನಕ್ಕೆ ನಾಲ್ಕು ಪ್ರದರ್ಶನ ಮಾತ್ರ ಸಾಧ್ಯ. 1971ರ ಕರ್ನಾಟಕ ಚಲನಚಿತ್ರ ನಿಯಾಮಾವಳಿ 41(ಎ) ಪ್ರಕಾರ ದಿನದ ಪ್ರದರ್ಶನದ ಸಂಖ್ಯೆಯನ್ನು ನಿಗದಿಗೊಳಿಸಲಾಗಿದೆ.

ಇದಲ್ಲದೆ, ಪ್ರತಿ ಚಿತ್ರ ಪೂರ್ಣಗೊಂಡ ನಂತರ 30 ನಿಮಿಷದ ವಿರಾಮ ನೀಡಬೇಕು. ಆ ವೇಳೆಯಲ್ಲಿ ಚಿತ್ರಮಂದಿರವನ್ನು ಸ್ವಚ್ಛಗೊಳಿಸಬೇಕು. ಒಟ್ಟಿನಲ್ಲಿ ಪ್ರೇಕ್ಷಕರ ಸುರಕ್ಷತೆ ಹಾಗೂ ಅನುಕೂಲಕ್ಕೆ ತಕ್ಕ ವಾತಾವರಣ ನಿರ್ಮಿಸಬೇಕು ಎಂದು ಹೇಳಲಾಗಿದೆ.

ಈಗ ಚಿತ್ರಮಂದಿರ ಮಾಲೀಕರ ದಾವೆಯನ್ನು ಆಲಿಸಿದ ನ್ಯಾಯಮೂರ್ತಿಗಳು, ಕೇಸನ್ನು ಮುಂದೂಡಿದ್ದಾರೆ. ಮಾಲೀಕರ ಪ್ರಕಾರ ಇದು ಅಕ್ರಮ ಹಾಗೂ ದಬ್ಬಾಳಿಕೆಯಾಗಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಪ್ರದರ್ಶನವನ್ನು ಬದಲಾಯಿಸಲಾಗುತ್ತದೆ. ಇದಕ್ಕೆ ನಿಯಮಾವಳಿ ರೂಪಿಸುವುದು ತರವಲ್ಲ. ಚಿತ್ರಮಂದಿರವನ್ನು ಸುಂದರವಾಗಿಟ್ಟುಕೊಳ್ಳುವುದು ನಮ್ಮ ಆದ್ಯತೆ. ಇಲ್ಲದಿದ್ದರೆ ಜನ ಬರುವುದೇ ಕಡಿಮೆಯಾಗುತ್ತದೆ. ಸರ್ಕಾರ ನಿಯಾಮಾವಳಿಗಳನ್ನು ಸಡಿಲಿಸಬೇಕು ಎಂದಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada