ದಿ ಡರ್ಟಿ ಪಿಕ್ಚರ್‌ನಲ್ಲಿ ಸಿಲ್ಕ್ ಸ್ಮಿತಾ ರಜನಿ ಸಂಬಂಧ!
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳು ಗರಮಾ ಗರಂ ಆಗಿದ್ದಾರೆ. ಏಕ್ತಾ ಕಪೂರ್ ನಿರ್ಮಿಸುತ್ತಿರುವ ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ 'ದಿ ಡರ್ಟಿ ಪಿಕ್ಚರ್'ನಲ್ಲಿ ಎಲ್ಲಿ ತಮ್ಮ ಬಾಸ್ ರಜನಿಕಾಂತ್ ವ್ಯಕ್ತಿತ್ವಕ್ಕೆ ಮಸಿಬಳಿಯುತ್ತಾರೋ ಎಂಬ ದೂರಾಲೋಚನೆಯಲ್ಲಿ ಗರಬಡಿದವರಂತಾಗಿದ್ದಾರೆ. ಐಟಂ ಡಾನ್ಸರ್ ಸಿಲ್ಕ್ ಸ್ಮಿತಾ ಜೊತೆ ನಮ್ಮ ಬಾಸನ್ನು ಥಳುಕು ಹಾಕಿದರೆ ಏನಪ್ಪಾ ಮಾಡೋದು ಎಂಬ ಅನುಮಾನ ಅವರನ್ನು ಕಾಡುತ್ತಿದೆ.
ಒಟ್ಟಿನಲ್ಲಿ ಈ ಚಿತ್ರ ಅತ್ತ ಬಾಲಿವುಡ್ ಸೇರಿದಂತೆ ಇತ್ತ ತಮಿಳುನಾಡಿನಲ್ಲಿ ತೀವ್ರ ಸಂಚಲನಕ್ಕ್ಕೆ ಕಾರಣವಾಗಿದೆ. ಸಿಲ್ಕ್ ಸ್ಮಿತಾ ಪಾತ್ರದಲ್ಲಿ ವಿದ್ಯಾ ಬಾಲನ್ ಅಭಿನಯಿಸುತ್ತಿದ್ದು ರಜನಿ ಪಾತ್ರವನ್ನು ನಾಸಿರುದ್ದೀನ್ ಶಾ ಪೋಷಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ರಜನಿ ಜೊತೆ ಸಿಲ್ಕ್ ಸ್ಮಿತಾ ಕೆಲವು ಚಿತ್ರಗಳಲ್ಲಿ ತೆರೆಹಂಚಿಕೊಂಡಿದ್ದರು. ಆದರೆ ಅವರಿಬ್ಬರ ನಡುವಿನ ಸಂಬಂಧ ಏನು? ಎತ್ತ? ಎಂಬ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆಯೇ?
ಈ ಅನುಮಾನ ಬಂದದ್ದೇ ತಡ ರಜನಿ ಅಭಿಮಾನಿಗಳು ಹಾವು ತುಳಿದವರಂತೆ ಬೆಚ್ಚಿಬಿದ್ದಾರೆ. ಚಿತ್ರದಲ್ಲಿ ತಮ್ಮ ಬಾಸ್ ಬಗ್ಗೆ ದಯವಿಟ್ಟು ಕೆಟ್ಟದಾಗಿ ಚಿತ್ರಿಸಬೇಡಿ. ಸಿಲ್ಕ್ ಸ್ಮಿತಾ ಜೊತೆಗಿನ ರಜನಿ ಸನ್ನಿವೇಶವನ್ನು ತೆಗೆಯುವಂತೆ ರಜನಿ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ.
ಆದರೆ ನಾಸಿರುದ್ದೇನ್ ಶಾ ಪಾತ್ರ ರಜನಿ ಕುರಿತಾದದ್ದಲ್ಲ. ಸಿಲ್ಕ್ ಜೊತೆ ರಜನಿ ಅಭಿನಯಿಸುವಾಗ ಅವರು ಇನ್ನೂ ಯುವಕರಾಗಿದ್ದರು. ಆದರೆ ನಾಸಿರುದ್ದೀನ್ ಶಾ ವಯಸ್ಸಾದ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ರಜನಿ ಅವರನ್ನು ತಾವು ಕೆಟ್ಟದಾಗಿ ತೋರಿಸುತ್ತಿಲ್ಲ ಎಂದಿದ್ದಾರೆ ಏಕ್ತಾ ಕಪೂರ್. ಆದರೂ ರಜನಿ ಅಭಿಮಾನಿಗಳಿಗೆ ಇನ್ನೂ ನಂಬಿಕೆ ಬಂದಿಲ್ಲ. (ಏಜೆನ್ಸೀಸ್)


Click it and Unblock the Notifications











