»   » ಕನ್ನಡವನ್ನೇಕೆ ಕೀಳಾಗಿ ಕಂಡರು ಬಾಲು ?

ಕನ್ನಡವನ್ನೇಕೆ ಕೀಳಾಗಿ ಕಂಡರು ಬಾಲು ?

Posted By:
Subscribe to Filmibeat Kannada
  • ಸತೀಶ್‌ ಕೆ. ಟಿ., ಬೆಂಗಳೂರು
    ktsat_a1@yahoo.com
ಎಸ್‌. ಪಿ. ಬಾಲುರವರ ಸಂಗೀತ ಸಂಜೆ ಕಾರ್ಯಕ್ರಮ ವೀಕ್ಷಿಸಲು ಹೋಗಿದ್ದವರಲ್ಲಿ ನಾನು ಒಬ್ಬ ಎಂದು ಹೇಳಿಕೊಳ್ಳೋಕೆ ತುಂಬಾ ನೋವಾಗುತ್ತಿದೆ. ಎಸ್ಪಿ ಬಾಲು ಕಾರ್ಯಕ್ರಮ ಅಂದರೆ ತುಂಬಾ ಚೆನ್ನಾಗಿರುತ್ತೆ - ಹಾಗೆ ಹೀಗೆ ಅಂತೆಲ್ಲ ಏನೇನೋ ಕಲ್ಪನೆ ಮಾಡಿಕೊಂಡು ಹೋಗಿದ್ದ ನನಗೆ ಆದದ್ದು ನಿರಾಶೆ. ಬಾಲು ಕನ್ನಡಿಗರಿಗೆ ಅವಮಾನ ಮಾಡಿದರು ಅಂತ ಹೇಳೋಕೆ ತುಂಬಾ ಬೇಸರವಾಗುತ್ತಿದೆ.

ಈ ಟೀವಿ ಕನ್ನಡ ವಾಹಿನಿಯಲ್ಲಿ ಕನ್ನಡದ ಬಗ್ಗೆ ಹಾಡಿ ಹೊಗಳಿದ್ದು ಸಾಲದು ಎಂದು 2-3 ಬಾರಿ ಕಣ್ಣೀರು ಹಾಕಿದ್ದರು. ಬಾಲು ಅವರ ಆ ಕಣ್ಣೀರು ಮೊಸಳೆ ಕಣ್ಣೀರು ಅಂತ ಮೊನ್ನೆ ನನಗೆ ಅರಿವಾಯಿತು. ಕನ್ನಡವನ್ನು ಮುಕ್ತ ಕಂಠದಿಂದ ಹೊಗಳುವ ಬಾಲು ಅವರ ಬಾಯಿಯಿಂದ ಮೊನ್ನೆ ಕನ್ನಡದಲ್ಲಿ ಒಂದು ಪದ ಸಹ ಹೊರಬರಲಿಲ್ಲ. ಇಂಗ್ಲಿಷ್‌ ಮತ್ತು ತಮಿಳಿನಲ್ಲೇ ಅವರು ಮಾತಾಡಿದ್ದು. ಅವರು ತಮಿಳ್ನಾಡಿನಲ್ಲಿ ಕಾರ್ಯಕ್ರಮ ಕೊಟ್ಟಿದ್ದರೆ ಪರವಾಗಿಲ್ಲ. ಬೆಂಗಳೂರಿಗೆ ಬಂದು ತಮಿಳಿನಲ್ಲಿ ಮಾತನಾಡುವ ಅವಶ್ಯಕತೆ ಏನಿತ್ತು ?

ಬಾಲು ತಮಿಳಿನ ಅಭಿಮಾನಿಯಾಗಿದ್ದರೆ ನನ್ನದೇನೂ ಅಭ್ಯಂತರ ಇಲ್ಲ (ಈಗ ಕೆಲವು ವರ್ಷಗಳಿಂದ ಅವರಿಗೆ ತಮಿಳು ಚಿತ್ರಗಳಲ್ಲಿ ಅವಕಾಶ ಸಿಗುತ್ತಿಲ್ಲ. ಇದನ್ನು ಅವರು ಮರೆತಿದ್ದಾರೆ ಅಥವಾ ಹೀಗೆ ಮಾಡಿ ತಮಿಳಿನವರ ಪ್ರೀತಿ ಗಳಿಸಲು ಯತ್ನಿಸುತ್ತಿದ್ದಾರಾ ಹೇಗೆ ?). ಆದರೆ ಮೊಸಳೆ ಕಣ್ಣೀರು ಹಾಕಿಕೊಂಡು ಈ ಟೀವಿಯಲ್ಲಿ ಕನ್ನಡದ ಬಗ್ಗೆ ಹೆಮ್ಮೆಯ ಮಾತಾಡುವ ಅವಶ್ಯಕತೆ ಏನು ? ಎಸ್ಪಿ ಒಳ್ಳೆ ಗಾಯಕ ಅಷ್ಟೇ ಅಲ್ಲ. ಒಳ್ಳೆ ‘ನಟ’ ಅಂತ ತೋರಿಸಿಕೊಳ್ಳುತ್ತಿದ್ದಾರೆ.

ನನ್ನ ಬೇಜಾರಿಗೆ ಬಾಲು ಅವರ ತಮಿಳು ಪ್ರೀತಿಯಷ್ಟೇ ಕಾರಣವಲ್ಲ . ಕನ್ನಡದಲ್ಲಿ ಎಂತೆಂಥಾ ಹಾಡುಗಳಿವೆ. ಅವನ್ನೆಲ್ಲಾ ಬಿಟ್ಟು ಇತ್ತೀಚಿನ ಕೆಲವು ನೀರಸ ಹಾಡುಗಳನ್ನು ಬಾಲು ಹಾಡಿದರು. ಜೊತೆಗೆ ತಮಿಳಿನ ಜನಪ್ರಿಯ ಗೀತೆಗಳನ್ನು ಹಾಡಿದರು. ಪ್ರೇಕ್ಷಕರೆಲ್ಲ ಕನ್ನಡ ಹಾಡಿದಾಗ ತೆಪ್ಪಗಿರುತ್ತಿದ್ದರು. ತಮಿಳು ಹಾಡಿದಾಗ ಕುಣಿಯುತ್ತಿದ್ದರು. ಈ ರೀತಿ ಮಾಡಿದಾಗ ಯಾರಿಗೆ ತಾನೇ ಬೇಜಾರಾಗೊಲ್ಲ.

ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಗುರುರಾಜ್‌ (ಮಂಜುಳಾ ಗುರುರಾಜ್‌ ಗಂಡ ) ಆದರೂ ಬಾಲು ಅವರಿಂದ ಯಾವ ಯಾವ ಹಾಡು ಹೇಳಿಸ್ಬೇಕು ಅಂತ ಮುಂಚೆಯೇ ತೀರ್ಮಾನಿಸಬೇಕಿತ್ತು. ರಾಜಧಾನಿಯ ಸಾಂಸ್ಕೃತಿಕ ವಕ್ತಾರರೆಂದು ಹೇಳಿಕೊಳ್ಳುವ ಈ ಮಂದಿಗೆ ಅಷ್ಟೊಂದು ವ್ಯವಧಾನವಾದರೂ ಎಲ್ಲಿಂದ ಬರಬೇಕು ? ಈ ಕನ್ನಡ ವಿರೋಧಿಗಳಿಗೆಲ್ಲ ಧಿಕ್ಕಾರ ಧಿಕ್ಕಾರವು.

ಈಮುನ್ನ ಬಾಲು ಬಗ್ಗೆ ನನಗೆ ತುಂಬು ಅಭಿಮಾನವಿತ್ತು . ಎದೆ ತುಂಬ ಗೌರವವಿತ್ತು . ಆದರೆ, ಕ್ಯಾಥೀಡ್ರಲ್‌ ಶಾಲೆಯ ಸಂಗೀತ ಕಾರ್ಯಕ್ರಮದ ನಂತರ ಇಷ್ಟು ವರ್ಷಗಳಿಂದ ಪೋಷಿಸಿಕೊಂಡ ಬಂದ ಬಾಲು ಮೇಲಿನ ಅಭಿಮಾನ ಹಾಳಾಗಿ ಹೋಯ್ತು.

ಬಾಲು ಒಬ್ಬ ಒಳ್ಳೆಯ ಹಾಡುಗಾರ ಒಪ್ಪಿಕೊಳ್ಳುವೆ. ಆದರೆ ಆತನಿಗೆ ಕನ್ನಡ ಕಾಲಕಸವೆಂಬುದು ಗೊತ್ತಿರಲಿಲ್ಲ .

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada