ಚಿತ್ರೋದ್ಯಮ ಬಂದ್‌ : ಫಲ ಕೊಡದ ಕಾಗೋಡು ಕಾಜಿ ನ್ಯಾಯ

By Staff

*ದಟ್ಸ್‌ಕನ್ನಡ ಬ್ಯೂರೊ

ಗಾಂಧಿನಗರದಲ್ಲಿ ಮಂಗಳವಾರ ತಾರಾ ಜಾಥಾ. ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳ ಬಾಡಿಗೆ ಇಳಿಸಿ, ಸಿನಿಮಾ ಉಳಿಸಿ ಎಂಬುದು ಇದರ ಧ್ಯೇಯವಾಕ್ಯ. ಮೊದಲೇ ಅಂದುಕೊಂಡಿದ್ದಂತೆ ಅಣ್ಣಾವ್ರು ಬೀದಿಗಿಳಿಯುವ ಪ್ರಸಂಗ ಠುಸ್ಸಾಯಿತು. ಅಣ್ಣಾವ್ರು ಇರದಿದ್ದರೂ, ಅವರ ಹೆಂಡತಿ ಹಾಗೂ ಮಕ್ಕಳು ಅಲ್ಲಿದ್ದರು.

ವಜ್ರೇಶ್ವರಿ ಪಾರ್ವತಮ್ಮ ರಾಜ್‌ಕುಮಾರ್‌, ಯುವರಾಜ ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್‌, ಸೂಪರ್‌ಸ್ಟಾರ್‌ ಉಪೇಂದ್ರ, ಪೊಲೀಸ್‌ ಖದರಿನ ಬಿ.ಸಿ.ಪಾಟೀಲ್‌, ಏಕಾಂಗಿ ರವಿಚಂದ್ರನ್‌, ಹುಚ್ಚ ಸುದೀಪ್‌, ಗಿರಿಕನ್ಯೆ ಜಯಮಾಲ, ಅಪ್ಪು ರಕ್ಷಿತ, ಪೋಷಕ ನಟಿ ಆಶಾಲತ, ಮೈ ಡಿಯರ್‌ ಟೈಗರ್‌ ಖ್ಯಾತಿಯ ಅಖಿಲ, ಡಕೋಟಾ ಎಕ್ಸ್‌ಪ್ರೆಸ್‌ನ ಒಡೆಯ ರಾಕ್‌ಲೈನ್‌ ವೆಂಕಟೇಶ್‌, ವಿಶ್ವಾಮಿತ್ರ ಬಸಂತ ಕುಮಾರ್‌ ಪಾಟೀಲ್‌, ಮೀಸೆ ‘ಜೋಡಿ’ದಾರ ಎಸ್‌.ನಾರಾಯಣ್‌ ಮೊದಲಾದ ತಾರಾ ದಂಡು. ಇವರನ್ನು ನೋಡಲು ಜನರ ಬಂಡು. ಪೊಲೀಸರ ಲಾಟಿಗಳು ಗಾಳಿಯಲ್ಲಿ ತೇಲಾಡಿದವು. ನೂಕು ನುಗ್ಗಲು ನಿಲ್ಲಲಿಲ್ಲ.

ಬೆಳಗ್ಗೆ 9.30 ಗಂಟೆಗೆ ಮೆಜೆಸ್ಟಿಕ್‌ನ ಜನತಾ ಬಜಾರ್‌ನಿಂದ ಶುರುವಾದ ಪ್ರತಿಭಟನೆಯಿಂದ ಗಾಂಧಿನಗರ ಪೂರಾ ಗಿಜಿಗಿಜಿ. ಒಂದೂವರೆ ತಾಸು ಕಾಲ ವಾಹನಗಳು ನಿಂತಲ್ಲೇ ನಿಂತವು. ‘ಚಲನಚಿತ್ರ ಮಂದಿರಗಳ ದುಬಾರಿ ಬಾಡಿಗೆ ಇಳಿಯಬೇಕು’, ‘ನಿರ್ಮಾಪಕರನ್ನು ಕಾಪಾಡಬೇಕು’ ಎಂಬ ಬ್ಯಾನರ್‌ಗಳು ಸಿನಿಮಾ ಮಂದಿಯ ಕೈಲಿ ಫಳಫಳಿಸುತ್ತಿದ್ದವು.

ಮಧ್ಯಾಹ್ನದ ಹೊತ್ತಿಗೆ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಮಧ್ಯೆ ಪ್ರವೇಶಿಸಿದರು. ಗಾಂಧಿನಗರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಪ್ರದರ್ಶಕರು, ಚಿತ್ರಮಂದಿರಗಳ ಮಾಲೀಕರು ಮತ್ತು ಸಿನಿಮಾದ ದಿಗ್ಗಜರನ್ನು ಮಾತಿಗೆ ಕೂರಿಸಿದರು. 2 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು.

ಪಾರ್ವತಮ್ಮ ರಾಜ್‌ಕುಮಾರ್‌, ರಾಜೇಂದ್ರ ಸಿಂಗ್‌ ಬಾಬು, ಜಯಮಾಲ, ರವಿಚಂದ್ರನ್‌, ಬಸಂತ್‌ಕುಮಾರ್‌ ಪಾಟೀಲ್‌, ರಾಘವೇಂದ್ರ ರಾಜ್‌ಕುಮಾರ್‌ ಚರ್ಚೆಯಲ್ಲಿ ಬೇಡಿಕೆಗಳನ್ನು ಮುಂದಿಟ್ಟರು. ಆ ಬೇಡಿಕೆಗಳ ಪಟ್ಟಿ ಹೀಗಿದೆ...

  • ಆಗಸ್ಟ್‌ ತಿಂಗಳಿಂದ ನರ್ತಕಿ, ಸಂತೋಷ್‌, ತ್ರಿವೇಣಿ ಮತ್ತು ಅಪರ್ಣ ಚಿತ್ರಮಂದಿರಗಳ ಬಾಡಿಗೆಯನ್ನು ಪ್ರತಿಶತ 10ರಷ್ಟು ಇಳಿಸಬೇಕು.
  • ಕನ್ನಡೇತರ ಚಿತ್ರಗಳನ್ನು ಆಯಾ ರಾಜ್ಯಗಳಲ್ಲಿ ಬಿಡುಗಡೆಯಾದ ಏಳು ವಾರಗಳ ನಂತರವೇ ಬೆಂಗಳೂರಲ್ಲಿ ಬಿಡುಗಡೆ ಮಾಡಬೇಕು.
  • ಚಿತ್ರಮಂದಿರಗಳಲ್ಲಿ ಮಾರುವ ತಿಂಡಿ- ತಿನಿಸುಗಳ ಬೆಲೆಯನ್ನು ಇಳಿಸಬೇಕು.
  • ಈ ಬೇಡಿಕೆಗಳನ್ನು ಈಡೇರಿಸುವವರೆಗೆ ಚಿತ್ರೋದ್ಯಮದ ಚಟುವಟಿಕೆ ಪೂರಾ ಬಂದ್‌.
ಚಿತ್ರಮಂದಿರಗಳ ಮಾಲೀಕರು ಮತ್ತು ಪ್ರದರ್ಶಕರು ಶೇ.7ರಷ್ಟು ಬಾಡಿಗೆ ಇಳಿಸಲು ಒಪ್ಪಿದರು. ‘ವಿದ್ಯುತ್‌, ನೀರು ಎಲ್ಲಾ ದರಗಳು ಏರಿವೆ. ಶೇ. 7ರಷ್ಟು ಬಾಡಿಗೆ ಕಡಿಮೆ ಮಾಡಿದರೂ ಲುಕಸಾನು, 10ರಷ್ಟು ಇಳಿಸುವುದು ಸುತಾರಾಂ ಆಗದು’ ಎಂದರು. ಸಿನಿಮಾ ನಿರ್ಮಾಪಕ- ತಾರಾ ಬಳಗ ಇದಕ್ಕೆ ಒಪ್ಪಲಿಲ್ಲ. ಪಟ್ಟು ಸಡಿಲಿಸಲಿಲ್ಲ. ಈ ಮಧ್ಯೆ ಕಾಗೋಡು ಮಾತಿಗಿಳಿದರು. ‘ಪ್ರತಿಭಟನೆ ನಿಲ್ಲಿಸಿ. ತಣ್ಣಗೆ ಕೂತು ಮಾತಾಡಿ, ಒಂದು ನಿರ್ಧಾರಕ್ಕೆ ಬನ್ನಿ. ಸಮಸ್ಯೆಯನ್ನು ಸಲೀಸಾಗಿ ಬಗೆಹರಿಸಿಕೊಳ್ಳಿ’ ಎಂಬ ಸಲಹೆಯಿತ್ತರು. ಆ ಮೂಲಕ ಚರ್ಚೆಗೆ ಪರದೆ ಬಿತ್ತು. ನಗರ ಪೊಲೀಸ್‌ ಕಮಿಷನರ್‌ ಸಾಂಗ್ಲಿಯಾನ ಕೂಡ ಸಭೆಯಲ್ಲಿದ್ದರು.

ಈ ಚರ್ಚೆಯಲ್ಲಿ ನಿರ್ಮಾಪಕರ ಮತ್ತು ತಾರಾ ಬಳಗದ ಬಿಗಿ ಬೇಡಿಕೆಗೆ ಪ್ರದರ್ಶಕರು, ವಿತರಕರು ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಸೂಚಿಸಿಲ್ಲ. ಒಪ್ಪದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ನಿರ್ಮಾಪಕರು ಎಚ್ಚರಿಸಿದ್ದಾರೆ.

ಮಧ್ಯಾಹ್ನ 2 ಗಂಟೆಯ ನಂತರ ಸುಸ್ತಾದ ತಾರಾ ಬಳಗ ಪ್ರತಿಭಟನೆ ನಿಲ್ಲಿಸಿ, ಗಾಂಧೀನಗರದಿಂದ ಮಾಯವಾಯಿತು. ಪ್ರದರ್ಶಕರು ಮತ್ತು ಚಿತ್ರಮಂದಿರಗಳ ಮಾಲೀಕರು ಜಗ್ಗದಿದ್ದಲ್ಲಿ ಬುಧವಾರವೂ ತಾರೆಗಳ ದಂಡು ರಸ್ತೆಗಿಳಿಯಲಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X