»   » ಪರಭಾಷಾ ಚಿತ್ರಗಳ ಏಳು ವಾರದ ನಿರ್ಬಂಧಕ್ಕೆ ಸುಪ್ರಿಂಕೋರ್ಟ್‌ ತಡೆ

ಪರಭಾಷಾ ಚಿತ್ರಗಳ ಏಳು ವಾರದ ನಿರ್ಬಂಧಕ್ಕೆ ಸುಪ್ರಿಂಕೋರ್ಟ್‌ ತಡೆ

Posted By:
Subscribe to Filmibeat Kannada

ನವದೆಹಲಿ : ರಾಜ್ಯದಲ್ಲಿ ಕನ್ನಡೇತರ ಚಿತ್ರಗಳ ಪ್ರದರ್ಶನಕ್ಕೆ ಹೇರಲಾಗಿರುವ ಏಳು ವಾರಗಳ ನಿಷೇಧಕ್ಕೆ ಸುಪ್ರಿಂಕೋರ್ಟ್‌ ತಡೆಯಾಜ್ಞೆ ನೀಡಿದೆ.

ಪರಭಾಷಾ ಚಿತ್ರಗಳ ಬಗ್ಗೆ ಕರ್ನಾಟಕದಲ್ಲಿ ಅನುಸರಿಸಲಾಗುತ್ತಿರುವ ನಿಷೇಧ ನೀತಿಯ ಕುರಿತು ಚೆನ್ನೈನ ಜೆಮಿನಿ ಫಿಲಂಸ್‌ ಸಲ್ಲಿಸಿದ್ದ ಅರ್ಜಿಯನ್ನು ಅ.15ರ ಶುಕ್ರವಾರ ವಿಚಾರಣೆಗೆ ಸ್ವೀಕರಿಸಿದ ನ್ಯಾಯಪೀಠ, ಕನ್ನಡ ಚಿತ್ರೋದ್ಯಮದ ನಿಷೇಧನೀತಿಗೆ ತಡೆಯಾಜ್ಞೆ ನೀಡಿತು. ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಮತ್ತು ನ್ಯಾಯಮೂರ್ತಿ ಎಸ್‌.ಬಿ. ಸಿನ್ಹಾ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿತು.

ಪ್ರಕರಣದ ಸಂಬಂಧ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಸರ್ಕಾರಗಳಿಗೆ ಸುಪ್ರಿಂಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಚಿತ್ರ ನಿರ್ಮಿಸುವ ಮೂಲಭೂತ ಹಕ್ಕುಗಳನ್ನು ಈ ನಿಷೇಧ ಉಲ್ಲಂಘಿಸುತ್ತದೆ. ಸಮಾನತೆ, ಬದುಕುವ ಹಕ್ಕುಗಳನ್ನು ಈ ನೀತಿ ಮೊಟಕುಗೊಳಿಸುತ್ತದೆ. ಕರ್ನಾಟಕದ ಕ್ರಮಕ್ಕೆ ಪ್ರತೀಕಾರವಾಗಿ ಇತರ ರಾಜ್ಯಗಳಲ್ಲೂ ಇದೇ ರೀತಿಯ ನಿಷೇಧ ಜಾರಿಗೊಳ್ಳಬಹುದು ಎಂದು ಅರ್ಜಿದಾರರ ಪರವಾಗಿ ವಾದಿಸಿದ ವಕೀಲರು ಆತಂಕ ವ್ಯಕ್ತಪಡಿಸಿದರು.

ಕಾನೂನು ಸಲಹೆ : ಸುಪ್ರಿಂಕೋರ್ಟ್‌ನ ತಡೆಯಾಜ್ಞೆ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು- ಈ ಕುರಿತು ಕಾನೂನುತಜ್ಞರ ಸಲಹೆ ಪಡೆಯುವುದಾಗಿ ಹೇಳಿದ್ದಾರೆ.

ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು. ಹೋರಾಟವನ್ನು ಕಾನೂನುಬದ್ಧವಾಗಿಯೇ ನಡೆಸಲಾಗುವುದು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತಕುಮಾರ್‌ ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ. ಸುಪ್ರಿಂಕೋರ್ಟ್‌ನ ತಡೆಯಾಜ್ಞೆಯ ನಡುವೆಯೂ, ಅ.18ರ ಸಂಧಾನಸಭೆಯವರೆಗೂ ಕನ್ನಡೇತರ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಪ್ರದರ್ಶಕರ ಮಹಾಮಂಡಳದ ಮುಖಂಡ ಓದುಗೌಡರ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada