»   » ಇದು ಪ್ರೇಮಾ, ಭಾವನಾ ಕುರಿತ ‘ಗಾಂಧಿ’ ವಾದ !

ಇದು ಪ್ರೇಮಾ, ಭಾವನಾ ಕುರಿತ ‘ಗಾಂಧಿ’ ವಾದ !

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ಚೆಲ್ವಿ’ ಚಿತ್ರ ತೋಪಾದರೂ ತಾವು ಮಾತ್ರ ಖಾಲಿ ಕೂತಿಲ್ಲ ಅಂತ ಪದೇಪದೇ ನೆನಪಿಸುತ್ತಲೇ ಮಾತಾಡುವ ದಿನೇಶ್‌ ಗಾಂಧಿಯನ್ನು ನಿದ್ದೆಯಿಂದ ಎಬ್ಬಿಸಬೇಕಾದರೆ ಪ್ರೇಮಾ ಮತ್ತು ಭಾವನಾ ಹೆಸರು ಹೇಳಿ !

ಇಂಥಾದೊಂದು ಜೋಕು ಹುಟ್ಟಲು ಕಾರಣವೇ ದಿನೇಶ್‌‘ಗಾಂಧಿ ವಾದ’. ಸುನಿಲ್‌ ಕುಮಾರ್‌ ದೇಸಾಯಿ ಹೇಳಿದ್ದನ್ನ ಕಣ್ಣಿಗೊತ್ತಿಕೊಳ್ಳುವ ಪ್ರೇಮಾ ತಾವು ಹೇಳೋ ಮಾತನ್ನು ಸುತಾರಾಂ ಕೇಳೋದಿಲ್ಲ ಅನ್ನೋದು ಗಾಂಧಿ ಆರೋಪ. ಈ ಆರೋಪಕ್ಕೆ ಕಾರಣ ಚೆಲ್ವಿ ಚಿತ್ರದ ಕಹಿ ಅನುಭವ.

‘ಕಂಬಾಲ ಹಳ್ಳಿ’ ಸಿನಿಮಾದಲ್ಲಿ ಮೈಚಳಿ ಬಿಟ್ಟು ಮಳೆಯಲ್ಲಿ ಮಿಂದಿರುವ ಪ್ರೇಮಾ ಗಾಂಧಿ ಪಾಠಕ್ಕೆ ಮಾತ್ರ ಯಾಕೋ ಕಿವಿಕೊಡಲಿಲ್ಲವಂತೆ. ನಾಯಕನ ಕೈಹಿಡಿಯೋಕೂ ಒಲ್ಲೆ ಅಂದರಂತೆ. ತಾವು ಹೀಗೆ ನಿಂತ್ಕೊಳಮ್ಮಾ ಅಂದರೆ, ಆಗಲ್ಲ ಅಂತ ಹುಬ್ಬು ಗಂಟಿಕ್ಕುತ್ತಿದ್ದರಂತೆ.

ಪ್ರೇಮಾ ನಂತರ ಗಾಂಧಿ ದೂರಿನ ಸರದಿ ಭಾವನಾರದ್ದು. 2.5 ಲಕ್ಷ ರುಪಾಯಿ ಖರ್ಚು ಮಾಡಿ ಮದುವೆ ಸೆಟ್‌ ಹಾಕಿಸಿ, ಜೂನಿಯರ್‌ ನಟ- ನಟಿಯರೊಂದಿಗೆ ಗಾಂಧಿ, ಭಾವನಾ ಬರುವಿಕೆಗೆ ಕಾಯುತ್ತಾ ಕೂತಿದ್ದರು. ಭಾವನಾ ಬರಲಿಲ್ಲ ; ಅವರ ಫೋನ್‌ ಕರೆ ಬಂತು. ಈಗ ಬರೋಕಾಗಲ್ಲ ಅಂದರು. ಬರದಿದ್ದರೆ ನಷ್ಟವಾಗುತ್ತೆ ಅಂತ ಗಾಂಧಿ ಅಲವತ್ತುಕೊಂಡರು. ಇವರು ಗೋಗರೆಯುವುದನ್ನು ಮುಂದುವರೆಸಿದ್ದರೂ ಭಾವನಾ ಫೋನ್‌ ಕಟ್‌ ಮಾಡಿಟ್ಟರು.

ಇಷ್ಟೆಲ್ಲಾ ಪಡುಪಾಟಲುಗಳ ನಂತರ ತೆರೆಕಂಡ ‘ಚೆಲ್ವಿ’ ಬಕ್ಕಾ ಬೋರಲಾಯಿತು.

ಪ್ರೇಮಾ ಹಾಗೂ ಭಾವನಾ ತಕರಾರುಗಳಿಂದ ರೋಸಿಹೋಗಿರುವ ಕಾರಣ ತಲೆ ಮೇಲೆ ತಲೆ ಬಿದ್ದರೂ ಇನ್ನು ಮುಂದೆ ಕನ್ನಡತಿಯರನ್ನು ಹಾಕಿಕೊಂಡು ಸಿನಿಮಾ ಮಾಡೋಲ್ಲ ಅಂತ ಗಾಂಧಿ ಈಗ ಸಂಕಲ್ಪ ಮಾಡಿದ್ದಾರೆ. ಅಷ್ಟೇ ಅಲ್ಲ, ಖದ್ದು ತಾವೇ ನಾಯಕರಾಗಿ ತಮ್ಮದೇ (ಗಾಂಧಿ) ಚಿತ್ರವನ್ನು ನಿರ್ದೇಶಿಸುವ ಗೊಡವೆಗೂ ಹೋಗಿದ್ದಾರೆ. ದೇವರು ಅವರನ್ನು ಕಾಪಾಡಲಿ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada