ಐಶ್ವರ್ಯ ರೈ ವಿರುದ್ಧ ಲೀಗಲ್ ನೋಟೀಸು
ಬಾಲಿವುಡ್ ತಾರೆ ಐಶ್ವರ್ಯ ರೈ ಬೆಳ್ಳಿಪರದೆ ಮೇಲೆ ಸಿಗರೇಟು ಸೇದಿದ್ದೇ ತಪ್ಪಾಗಿ ಹೋಯ್ತಾ? ಹೌದು ಆಕೆ ಅಭಿಯನದ ಹೊಚ್ಚ ಹೊಸ 'ಗುಜಾರೀಶ್' ಚಿತ್ರದಲ್ಲಿ ಆಕೆ ಧಂ ಎಳೆದು ಸರ್ಕಾರೇತರ ಸಂಸ್ಥೆಯೊಂದರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೃತಿಕ್ ರೋಷನ್ ಜೊತೆ ಈ ಚಿತ್ರದಲ್ಲಿ ಐಶು ಸಿಗರೇಟು ಹಿಡಿದು ಕಾಣಿಸಿರುವುದು ಮಹಾಪರಾಧವಾಗಿ ಹೋಗಿದೆ.
ಹೃತಿಕ್ ರೋಷನ್ ಜೊತೆ ಐಶು ಸಿಗರೇಟು ಸೇದುತ್ತಿರುವ 'ಗುಜಾರೀಶ್' ಚಿತ್ರದ ಭಿತ್ತಿಚಿತ್ರಗಳು ಮುಂಬೈನ ಗೋಡೆಗಳನ್ನು ಅಲಂಕರಿಸಿವೆ. ಈ ಸಂಬಂಧ ರಾಷ್ಟ್ರೀಯ ತಂಬಾಕು ನಿಷೇಧ ಸಂಸ್ಥೆ (ನೋಟ್) ಎಂಬ ಸರ್ಕಾರೇತರ ಸಂಸ್ಥೆ ಐಶ್ವರ್ಯ ರೈ ಹಾಗೂ ಚಿತ್ರದ ನಿರ್ದೇಶಕ, ನಿರ್ಮಾಪಕರಿಗೆ ನೋಟೀಸ್ ಜಾರಿ ಮಾಡುವುದಾಗಿ ಎಚ್ಚರಿಸಿದೆ.
ಐಶ್ವರ್ಯ ರೈ ಸಿಗರೇಟು ಸೇದುತ್ತಿರುವ 'ಗುಜಾರೀಶ್' ಚಿತ್ರದ ಅಸಂಖ್ಯಾತ ಪೋಸ್ಟರ್ ಮತ್ತು ಬ್ಯಾನರ್‌ಗಳು ಮುಂಬೈನಲ್ಲಿ ಅಂಟಿಸಲಾಗಿದೆ. ಚಿತ್ರದ ಕಥಾ ಎಳೆಯನ್ನು ಹೇಳಲು ಚಿತ್ರದ ನಿರ್ಮಾಪಕರಿಗೆ ಬೇರೆ ಪೋಸ್ಟರ್‌ಗಳೇ ಸಿಗಲಿಲ್ಲವೇ? ಇದೇ ಪೋಸ್ಟರ್‌ಗಳೇ ಆಗಬೇಕಾಗಿತ್ತಾ. ಸಮಾಜದ ಮೇಲೆ ಇವು ಕೆಟ್ಟ ಪರಿಣಾಮ ಬೀರಲಿದೆ ಎಂದು ಪ್ರಶ್ನಿಸಿದ್ದಾರೆ ನೋಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೇಖರ್ ಸಾಲ್ಕರ್.
ಚಿತ್ರದ ವಿವಾದಾತ್ಮಕ ಪೋಸ್ಟರ್‌ಗಳನ್ನು ಕೂಡಲೆ ಹಿಂಪಡೆಯಬೇಕು . ಇಲ್ಲದಿದ್ದ ಪಕ್ಷದಲ್ಲಿ ಚಿತ್ರದ ಪ್ರಚಾರಕಾರ್ಯದಲ್ಲಿ ಪಾಲ್ಗೊಂಡಿರುವ ಅಮಿತಾಬ್ ಬಚ್ಚನ್ ಹಾಗೂ ಚಿತ್ರದ ನಿರ್ಮಾಪಕ ಭನ್ಸಾಲಿ ಅವರನ್ನು ನ್ಯಾಯಾಲದ ಕಟಕಟೆಗೆ ಎಳೆಯುತ್ತೇನೆ ಎಂದು ಶೇಖರ್ ಎಚ್ಚರಿಸಿದ್ದಾರೆ. ಅಂದಹಾಗೆ 'ಗುಜಾರೀಶ್' ಚಿತ್ರ ನವೆಂಬರ್ 19ರಂದು ದೇಶದಾದ್ಯಂತ ತೆರೆಕಾಣುತ್ತಿದೆ.


Click it and Unblock the Notifications











