twitter
    For Quick Alerts
    ALLOW NOTIFICATIONS  
    For Daily Alerts

    ಕೊಟ್ಟ ಮಾತಿಗೆ ತಪ್ಪಿದ ನಾಗತಿಹಳ್ಳಿ ಚಂದ್ರಶೇಖರ್

    By * ವರದಿಗಾರ
    |

    Nagathi again rakes up Aindrita issue
    ಬೆಂಗಳೂರು, ಡಿ. 17 : ಕನ್ನಡ ಚಿತ್ರರಂಗದಲ್ಲಿ ಕೊಟ್ಟ ಮಾತಿಗೆ, ಸ್ವೀಕರಿಸಿದ ವಚನಗಳಿಗೆ ಕಿಮ್ಮತ್ತಿಲ್ಲ ಎನ್ನುವುದು ಇಂದು ಮತ್ತೊಮ್ಮೆ ಸಾಬೀತಾಯಿತು. ನೂರು ಜನ್ಮಕು ಚಿತ್ರೀಕರಣದ ಹಾಂಗ್ ಕಾಂಗ್ ಹಗರಣವನ್ನು ಇಲ್ಲಿಗೆ ಮುಕ್ತಾಯ ಗೊಳಿಸಲಾಗಿದೆ, ಇದರ ಬಗ್ಗೆ ನಾಗತಿಯವರಾಗಲೀ ಅಥವಾ ಐಂದ್ರಿತಾ ಆಗಲೀ ಬಹಿರಂಗವಾಗಿ ಮಾತನಾಡಕೂಡದು ಎಂದು ವಾಣಿಜ್ಯ ಮಂಡಳಿ ಹೊರಡಿಸಿದ್ದ ಅಲಿಖಿತ ಫರ್ಮಾನನ್ನು ನಿರ್ದೇಶಕ ನಾಗತಿ ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮುರಿದರು.

    ಹಾಂಗ್ ಕಾಂಗ್ ನಲ್ಲಿ ನಡೆದ ನೂರು ಜನ್ಮಕು ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾಗತಿ ಮತ್ತು ನಾಯಕಿ ಐಂದ್ರಿತಾ ಅವರ ನಡುವೆ ತಿಕ್ಕಾಟಗಳು ನಡೆದಿದ್ದವು. ಇಬ್ಬರೂ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಆದರೆ, ಇವೆಲ್ಲ ನಮ್ಮ ಚಿತ್ರರಂಗಕ್ಕೆ ಶೋಭೆ ತರುವ ಸಂಗತಿಗಳಲ್ಲ ಎಂದು ತೀರ್ಮಾನಿಸಿದ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಾಲಾ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಸೇರಿ ಪ್ರಕರಣಕ್ಕೆ ಮಂಗಳ ಹಾಡಿದ್ದರು. ಜತೆಗೆ, ಘಟನೆಯ ಬಗ್ಗೆ ಮತ್ತೆ ಸಾರ್ವಜನಿಕವಾಗಿ ಹೇಳಿಕೆಗಳನ್ನು ಕೊಡಬಾರದು ಎಂದೂ ತಾಕೀತು ಮಾಡಿದ್ದರು.

    ನಾಕು ಜನರ ಸಮ್ಮುಖದಲ್ಲಿ ನಡೆದಿದ್ದ ಆ ಪಂಚಾಯ್ತಿಯ ನಿರ್ಣಯವನ್ನು ನಾಗತಿ ಗುರುವಾರ ಬೆಳಗ್ಗೆ ಬೆಲ್ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗಾಳಿಗೆ ತೂರಿದರು. ಘಟನೆಯ ಬಗೆಗೆ ಕೆಲವೊಮ್ಮೆ ಸುತ್ತಿ ಬಳಸಿ, ಹಲವೊಮ್ಮೆ ನೇರವಾಗಿ ಮಾತನಾಡಿದರು. ತಾವು ಈ ಗೋಷ್ಠಿಯನ್ನು ವೈಯಕ್ತಿಕವಾಗಿ ಕರೆದಿರುವುದಾಗಿಯೂ, ಪತ್ರಕರ್ತ ಮಿತ್ರರೊಂದಿಗೆ ಸೌಹಾರ್ದ ಸಂಬಂಧಗಳನ್ನು ಎಂದಿನಂತೆ ಮೀಟುವ ಉದ್ದೇಶವೆಂತಲೂ ಹೇಳಿದರು. ತಮ್ಮ ಅನಿಸಿಕೆಗಳನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಳ್ಳುವ ಮೂರು ಪುಟಗಳ ಮುದ್ರಿತ ಭಾಷಣದ ಪ್ರತಿಗಳನ್ನು ವರದಿಗಾರರಿಗೆ ಹಂಚಿದರು.

    ಗೋಷ್ಠಿಯಲ್ಲಿ ಚಿತ್ರದಲ್ಲಿ ಮೊದಲಬಾರಿಗೆ ನಟಿಸುತ್ತಿರುವ ನಾಯಕ ಸಂತೋಷ್, ಕಲಾ ನಿರ್ದೇಶಕ ಶಶಿಧರ ಅಡಪ ಇದ್ದರು. ನಿರ್ಮಾಪಕ ವಿನಯ್ ಲಾಡ್ ಬಂದಿರಲಿಲ್ಲ. ಐಂದ್ರಿತಾ ಯಾಕೆ ಬಂದಿಲ್ಲ ಎಂದು ಯಾರೋ ಒಬ್ಬರು ಕೇಳಿದರು. ಅವರನ್ನು ಆಹ್ವಾನಿಸಲಾಗಿದೆ ಆದರೆ ಅವರು ಬಂದಿಲ್ಲ ಎಂದು ನಾಗತಿ ಉತ್ತರಿಸಿದರು. ನಂತರ ಐಂದ್ರಿತಾ ಅವರನ್ನು ನಮ್ಮ ವರದಿಗಾರರು ಸಂಪರ್ಕಿಸಿದರು :

    Reporter : 'Are you invited for the Thursday press meet of 'Nooru Janmaku'? If not Why?

    Aindrita Ray : "No one has invited me,,, I am really surprised that they are having a press meet when the movie is not yet completed".

    ಇದೇ ವೇಳೆ, ನೀವು ಮುದ್ರಣ ಮಾಧ್ಯಮದವರ ಸಂಪರ್ಕಕ್ಕೇ ಸಿಗಲಿಲ್ಲ ಯಾಕೆ ಎಂಬ ಪ್ರಶ್ನೆಗೆ, ನಾಗತಿ ಮುಗ್ಧರಾದರು. ಹಾಗೆಯೇ ತಮ್ಮ ಸಿನಿಮಾ ವೃತ್ತಿಯ ಒಲವು ನಿಲವುಗಳನ್ನು ಬಲವಾಗಿ ಸಮರ್ಥಿಸಿಕೊಂಡು ಮಾತನಾಡಿದ ಅವರು ಕನ್ನಡ ಚಿತ್ರರಂಗ ಬಿಕ್ಕಟ್ಟಿನಲ್ಲಿದೆ ಎಂದು ಅನುಕಂಪ ಸುರಿಸಿದರು. ಸಿನಿಮಾದಲ್ಲಿ ಮೂಡುವ ಐದು ವಾಕ್ಯಗಳ ಡೈಲಾಗ್ ಕೇಳಲು ಈ ದಿನಗಳಲ್ಲಿ ಯಾರಿಗೆ ಪುರುಸೊತ್ತಿದೆ ಎಂದೂ ಪ್ರಶ್ನಿಸಿದ ನಾಗತಿ, 'ತಮಗೆ ಸಿನಿಮಾ ಎಲ್ಲವೂ ಅಲ್ಲ, ಸಾಹಿತ್ಯ ಸೃಷ್ಟಿಸುವುದು ಮತ್ತು ಪಾಠ ಮಾಡುವ ವೃತ್ತಿ ಸದಾ ಇದ್ದೇ ಇರುತ್ತದೆ' ಎಂದು ಸಮಾಧಾನಿಸಿಕೊಂಡರು.

    ಮೊನ್ನೆ ತಾನೆ 'ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ' ಎಂದು ಹೇಳಿದ್ದ ಸಂತೋಷ್, ಐಂದ್ರಿತಾ ಅವರ ಕೆನ್ನೆಗೆ ನಾಗತಿ ಹೊಡೆದದ್ದು ನಿಜ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅಲ್ಲದೆ, ತಮಗೂ ಅವರು ಹೊಡೆದಿದ್ದರು ಎಂದು ನಾಗತಿಗೆ ಇರುಸುಮುರುಸು ಉಂಟುಮಾಡಿದರು. ಆದರೆ, ಎಷ್ಟೇ ಆಗಲಿ ಅವರು ಗುರುಗಳಲ್ಲವೇ ಎಂದು ಮಾತು ಮುಗಿಸಿದರು ಸಂತೋಷ್.

    ಕೊಟ್ಟ ಮಾತನ್ನು ಮೀರಿ ನಡೆದ ನಾಗತಿ ಅವರ ಇಂದಿನ ನಡೆಯನ್ನು ವಾಣಿಜ್ಯಮಂಡಳಿಯ ಪದಾಧಿಕಾರಿಗಳು ಮತ್ತು ಕಲಾವಿದರ ಸಂಘದ ಪರಾಧಿಕಾರಿಗಳು ಹೇಗೇ ಪರಿಗಣಿಸುತ್ತಾರೆ ಎನ್ನುವುದನ್ನು ಕಾದನೋಡಬೇಕಾಗಿದೆ. ಓವರ್ ಟು ಜಯಮಾಲಾ ಅಂಡ್ ಅಂಬರೀಷ್.

    Thursday, December 17, 2009, 17:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X