»   » ವಿಷ್ಣು-ಸುಹಾಸಿನಿ ಚಿತ್ರದ ಚಿತ್ರೀಕರಣಕ್ಕೆ ತಮಿಳರ ಅಡ್ಡಿ!

ವಿಷ್ಣು-ಸುಹಾಸಿನಿ ಚಿತ್ರದ ಚಿತ್ರೀಕರಣಕ್ಕೆ ತಮಿಳರ ಅಡ್ಡಿ!

Subscribe to Filmibeat Kannada


ಬೆಂಗಳೂರು : ನಟ ವಿಷ್ಣುವರ್ಧನ್‌ ಮತ್ತು ಸುಹಾಸಿನಿ ಅಭಿನಯದ ಕನ್ನಡ ಸಿನಿಮಾ ಚಿತ್ರೀಕರಣಕ್ಕೆ, ತಮಿಳರು ಅಡ್ಡಿ ಪಡಿಸಿದ ಘಟನೆ ನಡೆದಿದೆ. ನಂತರ ತಮಿಳು ನಟರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ವಿಷ್ಣುವರ್ಧನ್‌, ಕರ್ನಾಟಕದ ಪರವಾಗಿ ಹೋರಾಟ ನಡೆಸಿದ್ದು ತಮಿಳರನ್ನು ಕೆರಳಿಸಿದೆ. ಊಟಿಯ ಉದಕಮಂಡಲದ ಬಟಾನಿಕಲ್‌ ಗಾರ್ಡನ್‌ನಲ್ಲಿ ನಡೆಯುತ್ತಿದ್ದ ‘ಮಾತಾಡ್‌ ಮಾತಾಡ್‌ ಮಲ್ಲಿಗೆ’ ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಆಗಮಿಸಿದ ಡಿಎಂಕೆ ಮತ್ತು ತಮಿಳು ಪರ ಸಂಘಟನೆಗಳು, ಚಿತ್ರೀಕರಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ತಮಿಳು ಪರ ಘೋಷಣೆಗಳನ್ನು ಕೂಗಿದರು.

ವಿಷ್ಣುವರ್ಧನ್‌ ಮತ್ತು ಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮನವಿಗೆ, ಸಂಘಟನೆಗಳು ಸೊಪ್ಪು ಹಾಕಲಿಲ್ಲ. ಈ ವಿಚಾರವನ್ನು ವಿಷ್ಣುರಿಂದ ದೂರವಾಣಿ ಮೂಲಕ ತಿಳಿದ ತಮಿಳು ನಟರಾದ ಪ್ರಭು, ವಿಜಯಕಾಂತ್‌, ಶರತ್‌ ಕುಮಾರ್‌ ಸ್ಥಳಕ್ಕೆ ಆಗಮಿಸಿ, ತಮಿಳು ಸಂಘಟನೆಗಳ ಮನವೊಲಿಸಿದರು.

ನೈಜ ಕಾರಣ : ಉದಕಮಂಡಲದಲ್ಲಿ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಕನ್ನಡ ಪತ್ರಕರ್ತರ ಜೊತೆ ತಮಿಳು ಪತ್ರಕರ್ತರೂ ಇದ್ದರು. ಕಾವೇರಿ ವಿವಾದದ ಬಗ್ಗೆ ವಿಷ್ಣುವರ್ಧನ್‌ಗೆ ಪದೇಪದೇ ಪ್ರಶ್ನೆ ಕೇಳಿದರು.

‘ಆ ವಿಚಾರ ಇಲ್ಲಿ ಅಪ್ರಸ್ತುತ. ಒಬ್ಬ ಕನ್ನಡಿಗನಾಗಿ ನಾನು ಹೇಗೆ ನಡೆದುಕೊಳ್ಳಬೇಕೋ ಅದೇ ರೀತಿ ನಡೆದುಕೊಂಡಿದ್ದೇನೆ’ ಎಂಬ ವಿಷ್ಣು ಉತ್ತರ, ಪತ್ರಕರ್ತರಿಗೆ ಸಮಾಧಾನ ತರಲಿಲ್ಲ. ಮತ್ತೆ ಈ ವಿಚಾರವನ್ನು ಕೆದಕಲು ಯತ್ನಿಸಿದ ಪತ್ರಕರ್ತರನ್ನು ಸುಹಾಸಿನಿ ತರಾಟೆಗೆ ತೆಗೆದುಕೊಂಡು, ‘ತರಲೆ ಪ್ರಶ್ನೆಗಳ ನಿಲ್ಲಿಸಿ’ ಎಂದು ಸಿಡಿಮಿಡಿಗೊಂಡಿದ್ದರು.

ಮರುದಿನ ‘ಸುಹಾಸಿನಿ ಕನ್ನಡ ಪರ’ ಎಂಬ ವರದಿಗಳು ತಮಿಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಈ ನಿಟ್ಟಿನಲ್ಲಿ ಚಿತ್ರೀಕರಣ ವಿರೋಧಿಸಲು ಡಿಎಂಕೆ ಮತ್ತು ತಮಿಳು ಪರ ಸಂಘಟನೆಗಳು ಚಿತ್ರೀಕರಣದ ಸ್ಥಳಕ್ಕೆ ಆಗಮಿಸಿದ್ದವು.

ಈ ಹಿಂದೆ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರಕ್ಕೂ ತಮಿಳರು ಅಡ್ಡಿಪಡಿಸಿದ್ದರು.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada