»   » ‘ಕಿಚ್ಚಿ’ಗರಿಂದ ಪೆಟ್ಟುತಿಂದ ಇಂದ್ರಜಿತ್‌ ಸಹವರ್ತಿ

‘ಕಿಚ್ಚಿ’ಗರಿಂದ ಪೆಟ್ಟುತಿಂದ ಇಂದ್ರಜಿತ್‌ ಸಹವರ್ತಿ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಒಂದು ಕಾಲದಲ್ಲಿ ಬ್ಯಾಡ್ಮಿಂಟನ್‌ ಸ್ನೇಹಿತರಾಗಿದ್ದ ಲಂಕೇಶ್‌ ಪುತ್ರ ಇಂದ್ರಜಿತ್‌ ಹಾಗೂ ನಟ ಸುದೀಪ್‌ ಇವತ್ತು ಎಣ್ಣೆ ಸೀಗೇಕಾಯಿ ಆಗಿದ್ದಾರೆ. ಇತ್ತೀಚೆಗೆ ಬಹಿರಂಗ ಸಭೆಯಲ್ಲಿ ಇಂದ್ರಜಿತ್‌ ಮೇಲೆ ಮಾತಿನ ಕತ್ತಿ ಝಳಪಿಸಿದ್ದ ಸುದೀಪ್‌, ಈಗ ಅಭಿಮಾನಿಗಳನ್ನು ಛೂ ಬಿಟ್ಟು ನೇರವಾಗಿ ಹೊಡೆಸಲು ಯತ್ನಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಆಗಿದ್ದೇನಪ್ಪಾ ಅಂದರೆ,
ಟಿ.ಮೂಡಲ ಗಿರಿಯಪ್ಪ ಎಂಬಾತ ಇಂದ್ರಜಿತ್‌ ಅಸೋಸಿಯೇಟ್‌. ಈತ ಲಂಕೇಶ್‌ಪತ್ರಿಕೆ ನೌಕರನೂ ಹೌದು. ಮಂಗಳವಾರ (ಏ.15) ರಾತ್ರಿ ಕೆಲಸ ಮುಗಿಸಿಕೊಂಡು ಕಾರಲ್ಲಿ ಮನೆಗೆ ಮರಳುತ್ತಿರುವಾಗ ಬ್ಯಾಂಕ್‌ ಕಾಲೋನಿಯ ನಾಗೇಂದ್ರ ಬ್ಲಾಕ್‌ ಬಳಿ ಅಪರಿಚಿತರು ಅಡ್ಡಗಟ್ಟಿದರು. ಕಾರಿನಿಂದ ಇಳಿಸಿ ಬಾರ್‌ಗೆ ಕೊಂಡೊಯ್ದು ಬಲವಂತವಾಗಿ ವಿಸ್ಕಿ ಕುಡಿಸಿದರು. ಸುದೀಪ್‌ ಅಭಿಮಾನಿ ಎಂದು ಹೇಳಿಕೊಂಡು, ‘ನಮ್ಮ ಗುರೂ ಮೇಲೆ ಬರೆಯೋಕೆ ಇಂದ್ರಜಿತ್‌ಗೆ ಎಷ್ಟು ಧೈರ್ಯ’ ಅಂತ ಪ್ರಶ್ನಿಸಿ ಒದೆಗಳನ್ನು ಕೊಟ್ಟರು. ಹೇಗೋ ಅವರಿಂದ ತಪ್ಪಿಸಿಕೊಂಡ ಮೂಡಲ ಗಿರಿಯಪ್ಪ ಗಿರಿನಗರ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಟ್ಟರು. ಆರೋಪ ಪಟ್ಟಿಯಲ್ಲಿ ಸುದೀಪ್‌ ಅಭಿಮಾನಿಗಳಿಂದ ಹಲ್ಲೆಯಾಗಿದೆ ಅಂತ ನಮೂದಾಗಿದೆ.

ಇತ್ತೀಚೆಗಷ್ಟೆ ‘ಮೀಸೆ ಚಿಗುರಿದಾಗ’ ಸಿನಿಮಾ ಗೀತೆಗಳ ಕೆಸೆಟ್‌ ಬಿಡುಗಡೆ ಸಮಾರಂಭದಲ್ಲಿ ಇಂದ್ರಜಿತ್‌ ಮೇಲೆ ಸುದೀಪ್‌ ಹರಿಹಾಯ್ದಿದ್ದರು. ತಮ್ಮ ಇಮೇಜ್‌ ಹಾಳು ಮಾಡಲು ಇಲ್ಲಸಲ್ಲದ್ದನ್ನು ಇಂದ್ರಜಿತ್‌ ಬರೆಯುತ್ತಿದ್ದಾರೆ ಎಂದು ಅಭಿಮಾನಿಗಳ ಸಮ್ಮುಖದಲ್ಲೇ ಘಂಟಾ ಘೋಷವಾಗಿ ಸಾರಿದ್ದರು. ಈ ಘಟನೆಯಾದ ಕೆಲವೇ ದಿನಗಳ ನಂತರ ಇಂದ್ರಜಿತ್‌ ಸಹವರ್ತಿ ಮೇಲೆ ಹಲ್ಲೆಯಾಗಿರುವುದು ಗಾಂಧಿನಗರದಲ್ಲಿ ಕುತೂಹಲ ಕೆರಳಿಸಿದೆ. ವೈಯಕ್ತಿಕ ಜಿದ್ದಾಜಿದ್ದಿ ಈ ಮಟ್ಟಕ್ಕೆ ಇಳಿಯುತ್ತದಾ ಎಂದು ಗುಸುಗುಸು ಶುರುವಾಗಿದೆ.

ನನ್ನ ಅಭಿಮಾನಿಗಳ ಸಂಘವೇ ಇಲ್ಲ : ಇದಕ್ಕೆ ಸುದೀಪ್‌ ಕೊಡುವ ಪ್ರತಿಕ್ರಿಯೆಯೇ ಬೇರೆ. ಈಗ ನನ್ನ ಮೇಲೆ ಮತ್ತೊಂದು ಗೂಬೆ ಕೂರಿಸಿದ್ದಾರೆ. ನನ್ನ ಅಭಿಮಾನಿಗಳ ಸಂಘ ಅಂತಲೇ ಇಲ್ಲ. ಯಾರೂ ನನ್ನ ಹತ್ತಿರ ಬಂದು, ನಾವು ನಿಮ್ಮ ಅಭಿಮಾನಿಗಳು. ಸಂಘ ಕಟ್ಟಿದ್ದೇವೆ ಅಂತ ಇದುವರೆಗೆ ಹೇಳಿಲ್ಲ. ನನ್ನ ಅಭಿಮಾನಿಗಳ ಸಂಘವೇ ಇಲ್ಲ ಅಂದಮೇಲೆ ಅವರು ಯಾರದೋ ಮೇಲೆ ದಾಳಿ ನಡೆಸುವ ಪ್ರಶ್ನೆಯೇ ಇಲ್ಲ. ನಾನು ಇಂದ್ರಜಿತ್‌ ವಿರುದ್ಧ ನೇರವಾಗಿ ಬಹಿರಂಗ ಸಭೆಯಲ್ಲಿ ಮಾತಾಡಿದ್ದೆ. ಇನ್ನು ಮುಂದೆ ಆ ಬಗ್ಗೆ ಮಾತಾಡೋದಿಲ್ಲ ಅಂತಲೂ ಹೇಳಿದ್ದೆ. ಹಾಗೇನಾದರೂ ಯಾರನ್ನಾದರೂ ಹೊಡೆಸೋದಿದ್ರೆ ನನ್ನ ವಿರುದ್ಧ ಬರೆದ ಮಾರನೆಯ ದಿನವೇ ಆ ಕೆಲಸ ನಡೆದಿರುತ್ತಿತ್ತು. ನಾನು ಯಾವುದೋ poor chap ಮೇಲೆ ಯಾಕೆ ಹಲ್ಲೆ ಮಾಡಲಿ ಹೇಳಿ. ನನ್ನ ಮಾನಸಿಕ ಸ್ಥೈರ್ಯ ಹಾಳುಮಾಡಲು ಇಂಥಾ ಸಂಚುಗಳನ್ನು ಹೂಡುತ್ತಿದ್ದಾರೆ. ಕಾಲವೇ ಎಲ್ಲಕ್ಕೂ ಉತ್ತರ ಕೊಡುತ್ತೆ. ಸತ್ಯ ಹೊರಗೆ ಬಂದ ಮೇಲೆ ಯಾರು ಏನು ಅಂತ ಗೊತ್ತಾಗುತ್ತೆ ಎಂದು ಕಿಚ್ಚನ ಸ್ಟೈಲಲ್ಲಿ ಸುದೀಪ್‌ ಪ್ರತಿಕ್ರಿಯಿಸಿದರು.

ನಿಮಗಿದು ಗೊತ್ತಿರಲಿ- ಅಭಿಮಾನಿಗಳ ಸಂಘ ಇಲ್ಲ ಅಂತ ಖುದ್ದು ಸುದೀಪ್‌ ಘೋಷಿಸಿದ್ದಾರೆ. ಆದರೆ ಹುಚ್ಚ ಸಿನಿಮಾ ನೂರು ದಿನ ಓಡಿದಾಗ, ಗೋಡೆಗಳ ಮೇಲೆ ಸುದೀಪ್‌ ಅಭಿಮಾನಿಗಳ ಸಂಘದ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಸುದೀಪ್‌ ಹೊಸ ಚಿತ್ರ ಬಿಡುಗಡೆಯಾದಾಗ ಒಂದು ಹಿಡಿ ಅಭಿಮಾನಿಗಳು ಸುದೀಪ್‌ ಕಟೌಟ್‌ಗೆ ಹಾರ ಹಾಕಿ ಕುಣಿದಾಡುವುದನ್ನು ಖುದ್ದು ಸುದೀಪ್‌ ನೋಡಿಲ್ಲದೆ ಇಲ್ಲ. ಹುಚ್ಚ ಚಿತ್ರವೊಂದರಿಂದಲೇ ಉತ್ತುಂಗಕ್ಕೇರಿ ಅಭಿಮಾನಿಗಳ ಗಿಟ್ಟಿಸಿಕೊಂಡ ಅದೃಷ್ಟವಂತ ಸುದೀಪ್‌ ತಮಗೆ ಅಭಿಮಾನಿಗಳೇ ಇಲ್ಲ ಅಂತ ಹೇಳಿದರೆ ನಂಬೋದು ಹೇಗೆ ಹೇಳಿ ?!

Post your views

ಕಿರಿಕ್ಕೋ ಕಿರಿಕ್ಕು
ಸುದೀಪನಿಗೆ ಯಾಕೆ ಸಿಟ್ಟು ಬರುತ್ತದೆ ?
‘ಲಂಕೇಶ್‌ ಪತ್ರಿಕೆ’ ವಿರುದ್ಧ ‘ಕಿಚ್ಚ’ನಾದ ಸುದೀಪ್‌

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada