»   » ‘ನನ್ನನ್ನು ಹೊರಗೆ ಹಾಕೋಕೆ ಕೋಡ್ಲು ಮಣಿರತ್ನಂ ಅಲ್ಲ’

‘ನನ್ನನ್ನು ಹೊರಗೆ ಹಾಕೋಕೆ ಕೋಡ್ಲು ಮಣಿರತ್ನಂ ಅಲ್ಲ’

Subscribe to Filmibeat Kannada

ಅಪ್ಪನ ಹುಟ್ಟುಹಬ್ಬದ ದಿನ, ಏಪ್ರಿಲ್‌ 24ರಂದು ತನ್ನ ಹೊಸ ರೆಕಾರ್ಡಿಂಗ್‌ ಸ್ಟುಡಿಯೋ ಪ್ರಾರಂಭಿಸಲಿರುವ ಶಿವರಾಜ್‌ ಕುಮಾರ್‌ ಮಾತು ಥೇಟ್‌ ಆ್ಯಂಗ್ರಿ ಯಂಗ್‌ ಮ್ಯಾನ್‌ ಧಾಟಿಯಲ್ಲಿತ್ತು. ಭಾವುಕತೆ ಪರಾಕಾಷ್ಠೆ ಗೆ ಹೋದಾಗ ಉಪೇಂದ್ರ ಮಾತಿನ ಖದರೂ ಇತ್ತು.

‘ನಾನು ಈಗ ಫ್ಲಾಪ್‌ ನಾಯಕನೇ ಇರಬಹುದು. ಕಚಡಾ ಇರಬಹುದು. ಆದರೆ ಕೋಡ್ಲು ರಾಮಕೃಷ್ಣ ನನ್ನ ಹಣೆಬರೆಹ ಬದಲಾಯಿಸೋಕೆ ಸಾಧ್ಯವೇ? ನನ್ನ ಡೇಟ್ಸ್‌ ಕೇಳಿದಾಗ ನನ್ನ ಮಾರ್ಕೆಟ್‌ ವ್ಯಾಲ್ಯೂ ಏನು ಅಂತ ಅವರಿಗೆ ಗೊತ್ತಿರಲಿಲ್ಲವೇ? ಜುಗಾರಿ ಕ್ರಾಸ್‌ಗೆ ನಮಸ್ಕಾರ. ಅದರ ಸಹವಾಸವೇ ಬೇಡ’.

ಶಿವರಾಜ್‌ ಆಡಿದ ಈ ಮಾತುಗಳಲ್ಲಿ ಭಾವಾವೇಶ ಅಷ್ಟೇ ಅಲ್ಲ, ಅಳಲೂ ಇತ್ತು. ಅವರ ಮುಖಭಾವ ಅದನ್ನು ರುಜುವಾತು ಮಾಡುವಂತಿತ್ತು. ಮೊನ್ನೆ ಪೂರ್ಣಚಂದ್ರ ತೇಜಸ್ವಿ ಬೆಂಗಳೂರಿಗೆ ಬಂದು ಹೋದರೂ, ಜುಗಾರಿ ಕ್ರಾಸ್‌ ಸಿನಿಮಾ ಕುರಿತು ಅವರೆಲ್ಲೂ ತುಟಿ ಪಿಟಿಕ್‌ ಎನ್ನಲಿಲ್ಲ. ಅದರ ಬಗ್ಗೆ ಉತ್ಸಾಹ ಇದ್ದಂತೆಯೂ ಕಾಣಲಿಲ್ಲ. ಪ್ರಾಯಶಃ ಹಕ್ಕು ಖರೀದಿಗೆ ಸಂದಾಯವಾಗಬೇಕಾದ ಸಂಭಾವನೆ ಸಂದಿರಬಹುದು. ಅದಕ್ಕೇ ಸುಮ್ಮನಾಗಿದ್ದಾರೆ ಎಂದು ಕೆಲವರು ಪಿಸುಗುಟ್ಟಿದ್ದೂ ಉಂಟು. ಆದರೆ, ಕೋಡ್ಲು ಹಾಗೂ ಶಿವರಾಜ್‌ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಗಿದ್ದು, ಜುಗಾರಿ ಕ್ರಾಸ್‌ ಸಿನಿಮಾ ಆಗುವ ದಿನ ದೂರ ಬಲು ದೂರ!

ಕೋಡ್ಲು ಊಸರವಳ್ಳಿ ಎಂಬುದನ್ನು ಶಿವರಾಜ್‌ ಹೇಳಿದ ಪರಿ ಇದು....
ನಾಯಕಿ ಆಯ್ಕೆಯಲ್ಲಿ ನನ್ನ ಹೆಂಡತಿ ಗೀತಾ ಮೂಗು ತೂರಿಸುತ್ತಾಳೆ ಅಂತ ಕೋಡ್ಲು ಮೊದಲು ಹೇಳಿದರು. ಆಮೇಲೆ ನಾನು ನಾಯಕಿ ಇಂಥವಳೇ ಬೇಕು ಅಂತಿದೀನಿ ಅಂದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೊರನಾಡಿನ ನಾಯಕಿಯರ ಜೊತೆಯಲ್ಲಿ ಮಾತ್ರ ನಾನು ನಟಿಸುವುದು ಅಂತ ಹಟ ಹಿಡಿದಿದೀನಿ ಅಂದರು. ಮಾತಿನ ವರಸೆ ಬದಲಾಯಿಸಿದ ಅವರು ಸರಿಯೋ, ನಾನೋ ಅನ್ನೋದನ್ನ ಜನರೇ ಹೇಳುತ್ತಾರೆ.

ಜುಗಾರಿ ಕ್ರಾಸ್‌ ಒಂದು ಒಳ್ಳೆ ಸಿನಿಮಾ ಆಗಬೇಕು ಅನ್ನುವುದು ನನ್ನ ಕನಸಾಗಿತ್ತು. ಕೋಡ್ಲು ರೆಡಿ ಮಾಡಿದ ಸ್ಕಿೃಪ್ಟ್‌ ಓದಿದೆ. ನನಗೆ ಹಿಡಿಸಲಿಲ್ಲ. ಬೇರೆ ಸ್ಕಿೃಪ್ಟ್‌ ಮಾಡಿ ಅಂತ ಕೇಳಿದೆ. ದುಡ್ಡು ಹಾಕೋದು ನಿರ್ಮಾಪಕರು. ಕೋಡ್ಲು ಕೆಲಸ ನಿರ್ದೇಶನ ಮಾತ್ರ. ನನ್ನನ್ನು ಸಿನಿಮಾದಿಂದ ಹೊರಗೆ ಕಳಿಸಿದೆ ಅಂತ ಈಗ ಅವರು ಹೇಳಿಕೊಂಡು ಓಡಾಡ್ತಿದಾರೆ. ಹಾಗೆ ಮಾಡೋಕೆ ಅವರೇನು ಮಣಿರತ್ನಂಮ್ಮಾ?

ಶಿವರಾಜ್‌ ಈಗ ಸ್ಮೈಲ್‌ ಚಿತ್ರದಲ್ಲಿ ಬ್ಯುಸಿ. ಅದರ ವಿಷಯ ಬಂದಾಗ, ಅವರ ಮುಖದಲ್ಲಿ ವಿಶ್ವಾಸದ ಸ್ಮೈಲ್‌. ಕೊನೆಗೆ ಕೋಡ್ಲು ವಿಷಯ ಬಿಟ್ಟಾಕೋಣ ಅಂತ ತಮ್ಮ ಹೊಸ ರೆಕಾರ್ಡಿಂಗ್‌ ಸ್ಟುಡಿಯೋ ಬಗ್ಗೆ ಹೇಳಿದರು. ತಾಂತ್ರಿಕವಾಗಿ ಸುಸಜ್ಜಿತವಾದ ಈ ಸ್ಟುಡಿಯೋದಲ್ಲಿ ಡಿಟಿಎಸ್‌ ರೆಕಾರ್ಡಿಂಗ್‌ ಸೌಲಭ್ಯವಿದೆ. ಮೂರಂತಸ್ತಿನ ಸುಸಜ್ಜಿತ ಕಟ್ಟಡ. ಕೆಳಗಡೆ ಪಾರ್ಕಿಂಗ್‌ ವ್ಯವಸ್ಥೆ. ಅಪ್ಪಾಜಿ ಹುಟ್ಟುಹಬ್ಬದ ದಿನ ಸ್ಟುಡಿಯೋ ಕೆಲಸ ಮಾಡಲಿದೆ ಅಂತ ಶಿವಣ್ಣ ಹೇಳಿದಾಗ, ಕನಸು ನನಸಾದ ನಗುವಿತ್ತು. ಅಂದಹಾಗೆ, ಹೊಸ ಸ್ಟುಡಿಯೋದ ಹೆಸರು ‘ಮುತ್ತು ಥಿಯೇಟರ್ಸ್‌’.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada