»   » ನಿರ್ಮಾಪಕ ರಾಮು ಮೇಲೆ ಪತ್ರಕರ್ತರ ಕೂರಂಬು

ನಿರ್ಮಾಪಕ ರಾಮು ಮೇಲೆ ಪತ್ರಕರ್ತರ ಕೂರಂಬು

Posted By:
Subscribe to Filmibeat Kannada

* ದಟ್ಸ್‌ಕನ್ನಡ ಬ್ಯೂರೋ

ಕನ್ನಡ ಚಿತ್ರ ನಿರ್ಮಾಪಕ ರಾಮು ಅವರ ದಬ್ಬಾಳಿಕೆ ಹಾಗೂ ಅನುಚಿತ ವರ್ತನೆ ಅತಿಯಾಗುತ್ತಿದೆ. ಇದು ಪತ್ರಕರ್ತರಿಗೆ ಸಾಕಷ್ಟು ಕಿರಿಕಿರಿ ಮಾಡುತ್ತಿದೆ ಎಂಬ ಧಾಟಿಯ ಪತ್ರವನ್ನು ಕರ್ನಾಟಕ ಚಲನಚಿತ್ರ ಪತ್ರಕರ್ತರ ಪರಿಷತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ಕುಮಾರ್‌ ಪಾಟೀಲ್‌ ಟೇಬಲ್ಲಿಗೆ ಇವತ್ತು (ಮೇ.17) ಮುಟ್ಟಿಸಿದೆ.ವಿಷಯ ಇಷ್ಟು-ಹಾಯ್‌ ಬೆಂಗಳೂರ್‌ ಪತ್ರಿಕೆಯ ಕಳೆದ ವಾರದ ಸಂಚಿಕೆಯಲ್ಲಿ ‘ರಾಮು ನಾಪತ್ತೆ ಮಾಲಾಶ್ರೀ ಗತಿ ಏನಂತೆ ?’ ಎಂಬ ಶೀರ್ಷಿಕೆಯ ಮುಖಪುಟ ಲೇಖನ ಪ್ರಕಟವಾಯಿತು. ಈಚೆಗೆ ತಮ್ಮ ನಿರ್ಮಾಣದ ಸಾಕಷ್ಟು ಚಿತ್ರಗಳು ಸೋತ ಕಾರಣ ರಾಮು ಭಾರೀ ಲುಕಸಾನು ಅನುಭವಿಸಿ ಚೆನ್ನೈಗೆ ಹಾರಿದ್ದಾರೆ, ಮಾಲಾಶ್ರೀ- ರಾಮು ಸಂಬಂಧ ತೀರಾ ಚೆನ್ನಾಗೇನೂ ಇಲ್ಲ, ತಂತ್ರಜ್ಞರನ್ನು ಗೋಳುಗುಟ್ಟಿಸುವ ರಾಮು ನಟ- ನಟಿಯರಿಗೆ ಸದಾ ಸೊಪ್ಪು ಹಾಕಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬಿತ್ಯಾದಿ ಹೂರಣದ ಬರಹ ಅದಾಗಿತ್ತು. ಆದರೆ, ಅದು ವಾಸ್ತವಕ್ಕೆ ದೂರಾದದ್ದು. ನಾನು, ನನ್ನ ಹೆಂಡತಿ ಮಾಲಾಶ್ರೀ ಹಾಗೂ ಮಗು ಚೆನ್ನಾಗೇ ಇದ್ದೇವೆ ಎಂದು ರಾಮು ಕುಟುಂಬ ಸುದ್ದಿಗೋಷ್ಠಿ ನಡೆಸಿ ಹೇಳಿತು.

ಬಸಂತಕುಮಾರ್‌ ಪಾಟೀಲ್‌, ಮುನಿರತ್ನ ಮತ್ತಿತರ ನಿರ್ಮಾಪಕರು ರವಿ ಬೆಳಗೆರೆಗೆ ಪಾಠ ಕಲಿಸಲು ಆತನ ಪತ್ರಿಕಾ ಕಚೇರಿ ಮುಂದೆ ಧರಣಿ ಕೂಡಲು ಕೂಡ ತೀರ್ಮಾನಿಸಿದರು. ಮಾಲಾಶ್ರೀಯಂತೂ ಅಕ್ಷರಶಃ ಚಾಮುಂಡಿಯಾಗಿದ್ದರು. ದುಡ್ಡಿಗಾಗಿ ರವಿ ಬೆಳಗೆರೆಯಂಥವರು ಏನೆಲ್ಲಾ ಮಾಡುತ್ತಾರೆ ಅಂತ ಕೆಂಡ ಕಾರಿದ್ದರು. ಈ ಘಟನೆ ಹತ್ತಿ ಉರಿಯುವ ಮಟ್ಟಕ್ಕೆ ಹೋದೀತೇನೋ ಎಂಬ ಆತಂಕದ ನಡುವೆ ಪ್ರವೇಶಿಸಿ, ಪರಿಸ್ಥಿತಿಯನ್ನು ತಣ್ಣಗೆ ಮಾಡಿದ್ದು ರಾಕ್‌ಲೈನ್‌ ವೆಂಕಟೇಶ್‌. ಪತ್ರಕರ್ತ-ನಿರ್ಮಾಪಕರ ಸಂಬಂಧ ಹಳಸಿ ಹೋಗದಂತೆ ಅವರು ನೋಡಿಕೊಂಡರು. ರಾಮು ಹಾಗೂ ತಂಡದ ಸಮೇತ ರವಿ ಬೆಳಗೆರೆ ಕಚೇರಿಗೆ ಹೋಗಿ ಮಾತಾಡಿ, ಚೆನ್ನಾಗಿರೋಣ ಎಂಬ ತೀರ್ಮಾನಕ್ಕೆ ಬಂದರು. ಘಾಸಿಗೊಂಡಿದ್ದ ರಾಮು ಸಿನಿಮಾ ವ್ಯವಹಾರ ಅಂದಮೇಲೆ ಸೋಲು- ಗೆಲುವು ಇದ್ದದ್ದೇ. ಆದರೆ, ಹೀಗೆಲ್ಲಾ ಬರೆದು ಮನಸ್ಸಿಗೆ ನೋವು ಕೊಡಬೇಡಿ ಎಂದು ಗೋಳಿಟ್ಟರು. ರವಿ ಕೂಡ ಸರಿ ಎಂದರು.

ಇನ್ನು ಮುಂದೆ ಸಿನಿಮಾ ನಿರ್ಮಾಪಕರು, ನಟ- ನಟಿಯರು ಯಾರೊಬ್ಬರ ಮೇಲೂ ಏನೂ ಬರೆಯೋದಿಲ್ಲ ಅಂತ ಬರೆದುಕೊಡಿ ಎಂಬ ರಾಮು ಒತ್ತಾಯಕ್ಕೆ ರವಿ ಸುತಾರಾಂ ಮಣಿಯಲಿಲ್ಲ. ನಡುವೆ ರಾಕ್‌ಲೈನ್‌ ಬಾಯಿ ಹಾಕಿದ್ದರಿಂದ ಇದು ದೊಡ್ಡ ಇಶ್ಯೂ ಆಗಲಿಲ್ಲ.

ಸರಿ, ಸುಖಾಂತ್ಯವಾಯಿತು ಅಂದುಕೊಳ್ಳುವಷ್ಟರಲ್ಲಿ ಪತ್ರಕರ್ತರ ಮೇಲೆ ರಾಮು ಹರಿಹಾಯುವುದು ಮಾಮೂಲಾಯಿತು ಅನ್ನುವುದು ಕರ್ನಾಟಕ ಚಲನಚಿತ್ರ ಪತ್ರಕರ್ತ ಪರಿಷತ್‌ನ ದೂರು. ಇದ್ದಕ್ಕಿದ್ದ ಹಾಗೆ ಪತ್ರಿಕಾ ಕಚೇರಿಗಳಿಗೆ ಫೋನ್‌ ಮಾಡಿ ಆ ಹೆಡ್‌ಲೈನ್‌ ಸರಿಯಾಗಿಲ್ಲ, ಅಂಥಾ ಫೋಟೋ ಯಾಕ್ರೀ ಹಾಕಿದ್ರಿ... ಮೊದಲಾದ ತಗಾದೆ ತೆಗೆಯಲು ರಾಮು ಶುರು ಮಾಡಿದರು ಅಂತ ಪರಿಷತ್ತು ಬಸಂತ್‌ಕುಮಾರ್‌ ಪಾಟೀಲರಿಗೆ ಕಳಿಸಿರುವ ಪತ್ರದಲ್ಲಿ ಬರೆದಿದೆ.

ಅಂದಹಾಗೆ, ಕರ್ನಾಟಕ ಚಲನಚಿತ್ರ ಪತ್ರಕರ್ತರ ಪರಿಷತ್‌ನ ಅಧ್ಯಕ್ಷ ಪ್ರಜಾವಾಣಿಯ ಗಂಗಾಧರ ಮೊದಲಿಯಾರ್‌. ಉಪಾಧ್ಯಕ್ಷ- ಲಂಕೇಶ್‌ ಪತ್ರಿಕೆಯ ಸದಾಶಿವ ಶೆಣೈ. ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕದ ಗಣೇಶ ಕಾಸರಗೋಡ್‌ ಕೆಲಸ ಮಾಡುತ್ತಿದ್ದರೆ, ಕನ್ನಡ ಪ್ರಭದ ಉದಯ ಮರಕಿಣಿ ಖಜಾಂಚಿಯಾಗಿದ್ದಾರೆ. ಸಿನಿಮಾ ವರದಿಗಳನ್ನು ಬರೆಯುವ ಇವರೆಲ್ಲ ರಾಮು ವರ್ತನೆಯಿಂದ ಬೇಸತ್ತಿರುವುದಂತೂ ದಿಟ. ರವಿ ಬೆಳಗೆರೆ ಬರಹದಿಂದ ರಾಮು ಘಾಸಿಯಾಗಿದ್ದಾಗ ಅವರ ಜತೆಗೆ ನಿಂತಿದ್ದ ಬಸಂತ್‌ಕುಮಾರ್‌ ಪಾಟೀಲ್‌ ಪತ್ರಕರ್ತರ ಮೊರೆಗೆ ಏನು ಮಾಡುವರೋ ನೋಡಬೇಕು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada