»   » ವೀರ್‌ಝಾರಾ ಮುನ್ನಡೆ ; ಆತ್ಮಾಹುತಿಗೆ ರಕ್ಷಣಾವೇದಿಕೆ ಸದಸ್ಯರ ಯತ್ನ

ವೀರ್‌ಝಾರಾ ಮುನ್ನಡೆ ; ಆತ್ಮಾಹುತಿಗೆ ರಕ್ಷಣಾವೇದಿಕೆ ಸದಸ್ಯರ ಯತ್ನ

Subscribe to Filmibeat Kannada

ಬೆಂಗಳೂರು: ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನ ಯಶಸ್ವಿಯಾಗಿ ಮುಂದುವರೆದಿದೆ. ನಗರದ ಕಾವೇರಿ ಚಿತ್ರಮಂದಿರದ ಜೊತೆಗೆ ವೈಭವ್‌, ಸ್ವಾಗತ್‌ ಚಿತ್ರಮಂದಿರಗಳಲ್ಲಿ ಮಂಗಳವಾರ ವೀರ್‌ಝಾರಾ ಹಿಂದಿ ಚಿತ್ರ ಪೋಲೀಸರ ಬೆಂಗಾವಲಿನಲ್ಲಿ ಪ್ರದರ್ಶನ ಕಂಡಿದೆ. ಚಿತ್ರಮಂದಿರದ ಮುಂದೆ ಹಿಂದಿ ಸಿನಿಮಾ ಪ್ರದರ್ಶನ ವಿರೋಧಿಸಿ, ಆತ್ಮಾಹುತಿಗೆ ಪ್ರಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದ್ದಾರೆ. ಬಳ್ಳಾರಿಯಲ್ಲಿ ಸಹಾ ಹೊಸ ಪರಭಾಷಾ ಚಿತ್ರಗಳ ಪ್ರದರ್ಶನದ ಮೂಲಕ, ಚಿತ್ರಮಂದಿರದ ಮಾಲೀಕರು ಮೂರು ವಾರಗಳ ಜಂಟಲ್‌ಮನ್‌ ಒಪ್ಪಂದವನ್ನು ಗಾಳಿಗೆ ತೂರಿದ್ದಾರೆ.

ಭೇಟಿ: ಚಿತ್ರೋದ್ಯಮದ ಬಿಕ್ಕಟ್ಟಿಗೆ ಪರಿಹಾರ ಹುಡುಕಲು ರಾಜ್‌ಕುಮಾರ್‌ ಮನೆಯಲ್ಲಿ ಚಿತ್ರೋದ್ಯಮದ ಪ್ರಮುಖರು ಸಭೆ ನಡೆಸಿದರು. ಮುಖ್ಯಮಂತ್ರಿಧರ್ಮಸಿಂಗ್‌ರನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌, ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ಜಗ್ಗೇಶ್‌ ಮತ್ತಿತರರು ಮಂಗಳವಾರ(ನ.16)ಭೇಟಿ ಮಾಡಿದರು. ಬಿಕ್ಕಟ್ಟಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಬುಧವಾರ(ನ.17) ಕೆ.ಪಿ.ಪಾಂಡೆ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಬಲಿಪಶು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ದೂರಸರಿದು, ಪರಭಾಷಾ ಫಿಲಂ ಛೇಂಬರ್‌ ಜೊತೆ ಕೈಜೋಡಿಸಲು ನಗರದ ಪ್ರದರ್ಶಕರು ಮುಂದಾಗಿದ್ದಾರೆ. ಕನ್ನಡ ಚಿತ್ರೋದ್ಯಮ ಮತ್ತು ಪ್ರದರ್ಶಕರ ನಡುವಿನ ಹಗ್ಗ ಜಗ್ಗಾಟದಲ್ಲಿ ಮಂಡಳಿ ಬಲಿಯಾಗುವ ಸಾಧ್ಯತೆಗಳಿವೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada