ಕನ್ನಡಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧ : ಚಿತ್ರವಿವಾದಕ್ಕೆ ಸಮರದ ರೂಪ
ಬೆಂಗಳೂರು : ಪರಭಾಷಾ ಚಿತ್ರಗಳ ಪ್ರದರ್ಶನದ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ನ.18ರ ಗುರುವಾರದಿಂದ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು , ಕನ್ನಡಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧ ಎಂದು ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಗುರುವಾರದೊಳಗೆ ಹೊಸ ಪರಭಾಷಾ ಚಿತ್ರಗಳ ಪ್ರದರ್ಶನ ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ನ.19ರಂದು ರಾಜ್ಯದ ನಾನಾ ಮೂಲೆಗಳಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ಬರಲಿದ್ದು , ಅಂದು ಪರಭಾಷಾ ಚಿತ್ರಗಳ ಪ್ರದರ್ಶನವನ್ನು ಶತಾಯಗತಾಯ ನಿಲ್ಲಿಸಲಾಗುವುದು. ಕನ್ನಡದ ವಿಷಯದಲ್ಲಿ ಯಾವುದೇ ರಾಜಿಗೆ ನಾವು ಸಿದ್ಧವಿಲ್ಲ . ಪ್ರಾಣಾರ್ಪಣೆಗೂ ಸಿದ್ಧರಿದ್ದೇವೆ ಎಂದು ಬುಧವಾರ ಸುದ್ದಿಗಾರರಿಗೆ ನಾರಾಯಣ ಗೌಡ ತಿಳಿಸಿದರು.
ಸೇನಾ ಸಮರ : ಪರಭಾಷಾ ಚಿತ್ರಗಳ ವಿರುದ್ಧದ ಹೋರಾಟಕ್ಕೆ ಕರುನಾಡ ಸೇನೆ ಕೂಡ ಧುಮುಕಿದ್ದು- ಗುರುವಾರ ಕಾವೇರಿ ಚಿತ್ರಮಂದಿರದ ಎದುರು ಭಾರೀ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸಾಹಿತಿಗಳಾದ ಮರುಳಸಿದ್ಧಪ್ಪ , ಶೂದ್ರ ಶ್ರೀನಿವಾಸ್, ನಾಗತಿಹಳ್ಳಿ ಚಂದ್ರು, ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್, ಪುಟ್ಟಣ್ಣಯ್ಯ ಸೇರಿದಂತೆ ಸುಮಾರು 2000 ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ಸೇನೆ ತಿಳಿಸಿದೆ.
ಈ ನಡುವೆ ಯಶ್ ಚೋಪ್ರಾರ ವೀರ್ ಝಾರಾ ಚಿತ್ರ ಬುಧವಾರ ಬೆಂಗಳೂರಿನ ಇನ್ನೂ ನಾಲ್ಕು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಇದರೊಂದಿಗೆ ಪರಭಾಷಾ ಚಿತ್ರಗಳ ಪ್ರದರ್ಶನ ಕುರಿತ ಒಪ್ಪಂದವನ್ನು ಪ್ರದರ್ಶಕರು ಹಂತಹಂತವಾಗಿ ಉಲ್ಲಂಘಿಸಿದಂತಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications