»   » ಗುರುವಾಯೂರಪ್ಪನೇ ಕಾಯೋ...ಜೇಸುದಾಸ್‌ ಎಂಬ ಕನಕದಾಸನಿಗೆ ಕೃಷ್ಣನ ಕಾಣೋ ತವಕ! ಆದರೆ?

ಗುರುವಾಯೂರಪ್ಪನೇ ಕಾಯೋ...ಜೇಸುದಾಸ್‌ ಎಂಬ ಕನಕದಾಸನಿಗೆ ಕೃಷ್ಣನ ಕಾಣೋ ತವಕ! ಆದರೆ?

Subscribe to Filmibeat Kannada


ಕೇರಳದಲ್ಲಿ ಒಂದಲ್ಲ ಒಂದು ವಿವಾದ ಇದ್ದದ್ದೇ. ನಟಿ ಜಯಮಾಲಾ, ಅಯ್ಯಪ್ಪನ ಪಾದಸ್ಪರ್ಶ ಮಾಡಿದರೆಂಬ ವಿವಾದದ ಬಿಸಿತಗ್ಗುವ ಮುನ್ನವೇ, ಯೇಸುದಾಸ್‌ರ ಕೃಷ್ಣ ದರ್ಶನ ವಿವಾದ ಹುಟ್ಟಿಕೊಂಡಿದೆ!

ಗುರುವಾಯೂರಿನ ಶ್ರೀ ಕೃಷ್ಣ ದೇಗುಲ ಪ್ರವೇಶಿಸುವುದು ಖ್ಯಾತ ಹಿನ್ನೆಲೆ ಗಾಯಕ ಜೇಸುದಾಸ್‌ರ ಬಯಕೆ. ಅಲ್ಲಿ ಗಾನಸುಧೆ ಹರಿಸಿ, ಕೃಷ್ಣನ ಆರಾಧಿಸುವುದು ಅವರ ಉದ್ದೇಶ. ಆದರೆ ಅವರು ಕ್ರೆೃಸ್ತ ಧರ್ಮಕ್ಕೆ ಸೇರಿದ್ದಾರೆಂದು, ದೇಗುಲ ಪ್ರವೇಶಕ್ಕೆ ಅಡ್ಡಿ ಆತಂಕಗಳು ನೂರಾರು.

ಜೇಸುದಾಸ್‌ ದೇಗುಲ ಪ್ರವೇಶ ಈಗ ಹೊಸ ವಿವಾದವಾಗಿ, ದೇಶದೆಲ್ಲೆಡೆ ಪ್ರತಿಧ್ವನಿಸಿದೆ. ಜೇಸುದಾಸ್‌ಗೆ ಗುರುವಾಯೂರಪ್ಪನ ಬಗ್ಗೆ ಭಕ್ತಿ ಇದೆ. ಹೀಗೆಂದು ಹಿಂದೂ ದೇಗುಲಕ್ಕೆ ಅನ್ಯಧರ್ಮದವರ ಸೇರಿಸುವುದು ಬೇಡ ಎನ್ನುವುದು ಕೆಲವರ ಅಭಿಪ್ರಾಯ. ಜೇಸುದಾಸ್‌ಗೆ ಪ್ರವೇಶ ನೀಡಬೇಕು ಎಂಬುದು ಇನ್ನೊಂದು ಬಣದ ವಾದ.

‘ಕೃಷ್ಣನ ಪರಮ ಭಕ್ತರಾಗಿರುವ ಜೇಸುದಾಸ್‌ಗೆ ದೇಗುಲ ಪ್ರವೇಶಿಸಲು ಅವಕಾಶ ನೀಡಿ’ ಎಂದು ಕೇರಳ ದೇವಸ್ವಂ ಸಚಿವ ಜಿ.ಸುಧಾಕರನ್‌, ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೇರಳದ ಹಿಂದೂ ಸಂಘಟನೆಯಾಂದು ಕಿಡಿಕಾರಿದೆ. ಆಡಳಿತ ಮಂಡಳಿ ಮೇಲೆ ಒತ್ತಡ ಹಾಕುವ ಸಚಿವರ ವರ್ತನೆ ಖಂಡನೀಯ. ಅಲ್ಲದೇ ಒಬ್ಬ ವ್ಯಕ್ತಿಗಾಗಿ ದೇವಸ್ಥಾನದ ನೀತಿ ನಿಯಮಗಳನ್ನ ಗಾಳಿಗೆ ತೂರಬೇಕೇ ಎಂದು ಸಂಘಟನೆ ಪ್ರಶ್ನಿಸಿದೆ.

ಕಳೆದ ಮೂರು ವರ್ಷಗಳ ಹಿಂದೆ ಗುರುವಾಯೂರು ದೇವಸ್ಥಾನ ಪ್ರವೇಶಿಸದಂತೆ ಜೇಸುದಾಸ್‌ರನ್ನು ತಡೆಯಲಾಗಿತ್ತು. ಹಿಂದೂ ದೇವರುಗಳ ಮೇಲೆ ಜೇಸುದಾಸ್‌ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳುವಾಗ ಬಾರದ ಮಡಿ, ಅವರ ಪ್ರವೇಶದ ವಿಚಾರ ಬಂದಾಗ ಅಡ್ಡ ಬರುವುದೇ ಎಂಬುದು ಕೆಲವರ ಪ್ರಶ್ನೆ. ಈ ಬಗ್ಗೆ ನೀವೇನಂತೀರಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada