»   » ಸೈನೈಡ್‌ನ ಉದ್ದೇಶ-ಸಂದೇಶಗಳೇನು?

ಸೈನೈಡ್‌ನ ಉದ್ದೇಶ-ಸಂದೇಶಗಳೇನು?

Subscribe to Filmibeat Kannada

;?
‘ಸೈನೈಡ್‌’ ಸಿನಿಮಾವನ್ನು ಒಪ್ಪುವ ಭರದಲ್ಲಿ , ಪ್ರಮುಖ ಸಂಗತಿಯನ್ನು ನಾವು ಮರೆತಿದ್ದೇವೆ! ನಮ್ಮ ಬುದ್ಧಿಜೀವಿಗಳು ಸಹಾ ಮರೆತಿದ್ದಾರೆ! ಚಿತ್ರದಲ್ಲಿನ ಉಗ್ರವಾದವನ್ನು ವಿರೋಧಿಸುವ ಒಂದೇ ಒಂದು ಮಾತು, ಕೇಳಿಬರುತ್ತಿಲ್ಲ. ತಾತ್ವಿಕ ಆಧಾರವಿಲ್ಲದೆ ಈ ಸಿನಿಮಾ ಎಲ್‌ಟಿಟಿಇ ಅನುಕಂಪದೊಂದಿಗೆ ಅಂತ್ಯಗೊಳ್ಳುವುದು ಒಂದು ವಿಪರ್ಯಾಸ. ಚಿತ್ರದ ನಿರ್ದೇಶಕರು ಈ ಬಗ್ಗೆ ಏನಂತಾರೋ?

ಆವತ್ತು ಶನಿವಾರ ರಾತ್ರಿ ನಾವು ಸ್ನೇಹಿತರೆಲ್ಲ ತಮಿಳು ಚಿತ್ರಗಳನ್ನೇ ಪ್ರದರ್ಶಿಸುವ ಬೆಂಗಳೂರಿನ ನಟರಾಜ್‌ ಥಿಯೇಟರ್‌ ಎದುರಿನ ಸಾಮ್ರಾಟ್‌ ಹೋಟೆಲ್ಲಿಗೆ ಡಿನ್ನರ್‌ಗೆ ಹೋಗಿದ್ದೆವು. ಒಂಬತ್ತೂವರೆ ಸುಮಾರಿಗೆ ಒಬ್ಬ ಗೆಳಯನಿಗೆ ಫೋನ್‌ ಬಂತು. ಮೂವೀಗೆ ಹೋಗೋಣ ಬರ್ತೀಯ? ಅಂತ ಕೇಳಿದ. ಯಾವುದು? ಅಂದಾಗ ‘ಕನ್ನಡ, ಸೈನೈಡ್‌’ ಅಂದ. ‘ನೆನಪಿರಲಿ’ ಸಿನಿಮಾ ನೋಡಲಾಗದ್ದಿದ್ದಕ್ಕೆ ನಿರಾಶೆಗೊಂಡಿದ್ದೆ. ‘ಜೋಗಿ’ ನೋಡಿ ನಿರಾಶೆಗೊಂಡಿದ್ದೆ. ನಿರಾಶನಾಗಬಾರದು ಅನ್ನುವ ಕಾರಣಕ್ಕೆ ‘ಅಮೃತಧಾರೆ’ ನೋಡಿರಲಿಲ್ಲ.

‘ಸೈನೈಡ್‌’ ಎರಡು ಘಂಟೆಯ ಒಳಗೇ ಮುಗಿದು ಹೋಗುತ್ತದೆ. ಅನಾಸಿನ್‌-ಅಮೃತಾಂಜನ ಕಂಪನಿಯ ಪ್ರಾಯೋಜಕತ್ವ ಪಡೆದುಕೊಂಡು ವರ್ಷಾನುಗಟ್ಟಲೆ ಕುಂಟೆ-ಬಿಲ್ಲೆ ಆಡುತ್ತಿರುವ ಸೃಜನಶೀಲ ನಿರ್ದೇಶಕರ ಮೆಗಾ ಸೀರಿಯಲ್‌ಗಳಿಗಿಂತ ಇದು ವಾಸಿ.

ಸೈನೈಡ್‌ ಚಿತ್ರದ ಬಗ್ಗೆ ಬಹಳ ಕೇಳಿದ್ದೆ- ದೊಡ್ಡ ದೊಡ್ಡವರಿಂದ, ಮಾಧ್ಯಮಗಳ ಮೂಲಕ. ಸಾಲದ್ದಕ್ಕೆ ಕ್ರೈಮ್‌ ಡೈರಿಯಲ್ಲೂ ಎರಡು ರಾತ್ರಿ ಈ ಸಿನಿಮಾದ ಬಗ್ಗೆ ಪ್ರಚಾರ ನಡೆದಿತ್ತು. ಬೆಂಗಳೂರಿಗೆ ಬಂದು ತಿಂಗಳೂ ಆಗಿಲ್ಲ ಅಷ್ಟರಲ್ಲೇ ಒಳ್ಳೆಯ ಕನ್ನಡ ಸಿನಿಮಾ ನೋಡುವ ಸೌಭಾಗ್ಯ ದೊರಕಿದ್ದಕ್ಕೆ ಸಂತೋಷಗೊಂಡು ಹೊರಟೆ. ಈ ಸಿನಿಮಾ ನೋಡಿದ ಮೇಲೆ ಮೂಡಿದ ಅನಿಸಿಕೆಗಳನ್ನು ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲಿಚ್ಚಿಸುತ್ತೇನೆ.

ನಿಮಗೆಲ್ಲ ತಿಳಿದಿರುವಂತೆ ಈ ಸಿನಿಮಾ ರಾಜೀವ್‌ ಹತ್ಯೆಯ ನಂತರ ಎಲ್‌ಟಿಟಿಇ ತಂಡ ‘ಆತ್ಮಹತ್ಯೆ’ ಮಾಡಿಕೊಳ್ಳುವವರೆಗಿನ ಘಟನಾವಳಿಗಳ ಸರಪಳಿ. ನೀವು ಮನೆಯಲ್ಲಿ ಹೆಂಡತಿಯೊಂದಿಗೋ ಗಂಡನೊಂದಿಗೋ ಮಕ್ಕಳೊಂದಿಗೋ ಹಿರಿಯರೊಂದಿಗೋ ಜಗಳವಾಡಿದ್ದರೆ, ಜಗಳ ಮುಗಿದ ಮೇಲಿನ ಮೌನ ಎಷ್ಟು ಅಸಹನೀಯವಾಗಿರುತ್ತದೆ ಎಂಬುದನ್ನು ಬಲ್ಲಿರಿ. ಒಂದು ಘಟನೆಗೆ ನಮ್ಮ ಮನಸ್ಸು ನಮಗೇ ಅರಿವಿಲ್ಲದಂತೆ ಸ್ಪಂದಿಸುವ ರೀತಿಯೇ ಒಂದು ಸೋಜಿಗ. ಗೋಡೆ, ಕಿಟಕಿ, ಕಪಾಟು, ಫ್ಯಾನು, ಟಿ.ವಿ ಎಲ್ಲವೂ ಹಾಗೇ ಇರುತ್ತವೆ, ಆದರೂ ಮನೆ- ಮನೆ ಎನಿಸುವುದಿಲ್ಲ. ಮನಸ್ಸು ಹೊತ್ತಿಕೊಳ್ಳುವುದು ಸ್ಥಳಗಳನ್ನಲ್ಲ, ಅವುಗಳೊಡನೆ ಮಿಲಿತಗೊಂಡಿರುವ ಭಾವವನ್ನ. ಆ ಭಾವನೆಗಳಿಗೆ ದ್ಯೋತಕವಾಗಿ ಸ್ಥಳಗಳು. ಮನಸ್ಸಿನ ಮೇಲೆ ಘಟನೆಯ ಪ್ರಭಾವ ಅಷ್ಟು ತೀವ್ರವಾಗಿರುತ್ತದೆ.

ನಿಮಗೆ ಪ್ರಿಯವಾದ ಗಾಯಕ ವಿಪರೀತ ಕುಡುಕ; ಕುಡಿಯದೆ ವೇದಿಕೆಯ ಮೆಟ್ಟಿಲೇ ಹತ್ತುವುದಿಲ್ಲ ಎಂದು ಸುದ್ದಿಯಾದರೆ ಅವನ ಹಾಡಿನಲ್ಲಿ ಶರಾಬಿನ ವಾಸನೆ ಬಡಿಯುತ್ತದೆ, ರಾಗಗಳ ರಸವಲ್ಲ. ಅಷ್ಟೇ ಏಕೆ, ಕೋಟಿ ಭಕ್ತರ ಶ್ರದ್ಧಾ ಕೇಂದ್ರವಾದ ಒಂದು ದೇವಸ್ಥಾನದಲ್ಲಿ ನಡೆಯಬಾರದ್ದು ನಡೆದಿದೆ ಎನ್ನುವ ಸುದ್ದಿ ಪ್ರಚಾರ ಪಡೆಯುತ್ತಿರುವಾಗ ನೀವು ಆ ಗುಡಿಯೊಳಕ್ಕೆ ಹೋದಾಗ, ಅದೇ ಪೂಜಾರಿ ಅದೇ ಗಂಟೆ ಬಾರಿಸುತ್ತಿದ್ದರೂ ನಿಮಗೆ ಆ ದೇವಸ್ಥಾನದಲ್ಲಿ ದೇವರು ಕಾಣುವುದಿಲ್ಲ. ಮನಸ್ಸು ಆ ಸ್ಥಳವನ್ನು ಬೇರೆಯದೇ ಅಲೋಚನೆಯ ಪ್ರಭಾವದಲ್ಲಿ ಗ್ರಹಿಸುತ್ತದೆ. ಅದು ಮಾಸುವುದು ಅಷ್ಟು ಸುಲಭವಲ್ಲ. ಆದರೆ ತೀವ್ರತೆ ಮಾತ್ರ ಖಂಡಿತ ಕಮ್ಮಿಯಾಗುತ್ತದೆ.

ಎಲ್‌ಟಿಟಿಇ ತಂಡ ರಂಗನಾಥ್‌ ಮನೆಯಲ್ಲಿ ಬೀಡುಬಿಟ್ಟು ಅಲ್ಲಿಂದ ಹೊರನಡೆದ ಮೇಲೂ ಆ ಮನೆಯಲ್ಲಿ ಅವರುಗಳು ಉಳಿಸಿಹೋಗುವ ಭಯದ ನೆರಳು ಎಷ್ಟು ಪರಿಣಾಮಕಾರಿಯಾದದ್ದು ಎನ್ನುವುದನ್ನು ಚಿತ್ರಿಸುವುದರಲ್ಲಿ ನಿರ್ದೇಶಕರು ಸಂಪೂರ್ಣವಾಗಿ ಸಫಲರಾಗಿದ್ದಾರೆ.

ರಂಗನಾಥ್‌ ಆಗಿ ರಂಗಾಯನ ರಘು ಓವರ್‌ಆ್ಯಕ್ಟ್‌ ಮಾಡದೇ ಇರುವುದು ಈ ಚಿತ್ರದ ಮೊದಲ ಸಮಾಧಾನಕರ ಸಂಗತಿ. ಆಮೇಲೇನಿದ್ದರೂ ಸರ್ವಂ ತಾರಾಮಯಂ. ರಾಷ್ಟ್ರಮಟ್ಟದಲ್ಲಿ ಕನ್ನಡತನದ ಕನ್ನಡ ನಟಿಯೊಬ್ಬಳ ಬಗ್ಗೆ ಹೇಳಿಕೊಳ್ಳಬೇಕು ಅಂತಿದ್ದರೆ ಅದು ಸದ್ಯಕ್ಕೆ ತಾರಾ ಅವರೊಬ್ಬರೇ. ಅವರ ಮೂಲಕ ಮತ್ತು ಅದ್ಭುತವಾದ ಲೈಟಿಂಗ್‌ಗಳ ಮೂಲಕ ರಂಗನಾಥ್‌ ಮನೆಯಲ್ಲಿ ಎಲ್‌ಟಿಟಿಇಗಳು ಎಂತಹ ತಲ್ಲಣ ಸೃಷ್ಟಿಸಿದ್ದರು ಅನ್ನುವುದನ್ನು ತೋರಿಸುವಲ್ಲಿ ನಿರ್ದೇಶಕರ ಪ್ರತಿಭೆ ಮತ್ತು ಶ್ರಮ ಗೆದ್ದಿದೆ. ಇಷ್ಟೇ ಆಗಿದ್ದರೆ, ಸಿನಿಮಾ ಬಹಳ ಚೆನ್ನಾಗಿದೆ ಅನ್ನುವುದಷ್ಟೇ ಆಗಿದ್ದರೆ, ಈ ಸಿನಿಮಾದ ಬಗ್ಗೆ ಬರೆಯುವ ಅವಶ್ಯಕತೆಯೇ ಇರಲಿಲ್ಲ. ಈ ಚಿತ್ರದ ಉದ್ದೇಶ-ಸಂದೇಶಗಳ ಬಗ್ಗೆ ತಕಾರಿರುವ ಎರಡು ಸಂಗತಿಗಳಿವೆ.

ಒಂದು: ಚಿತ್ರದಲ್ಲಿ ಮೊದಲಿಗೆ This is a tribute to the police ಅಂತೇನೋ ಹಾಕುತ್ತಾರೆ. ಪೊಲೀಸ್‌ ಅಧಿಕಾರಿ ಕೆಂಪಯ್ಯನವರ ಅಲೋಚನೆಗಳು, ಅವರ ಮೇಲಿದ್ದ ಒತ್ತಡಗಳು, ಆಗಿನ ಅವರ ಮನಃಸ್ಥಿತಿ ಎಲ್ಲವನ್ನೂ ಅಧ್ಯಯನ ಮಾಡಿರುವುದಾಗಿ ನಟ ಅವಿನಾಶ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ತಮಾಷೆಯೆಂದರೆ ಶಿವರಾಸನ್‌ ಮತ್ತು ಅವನ ತಂಡದವರನ್ನ ಹಣೆಯುವಲ್ಲಿ ಪೋಲಿಸರ ಶ್ರಮ, ಚಕ್ಯತೆ, ಅವರ ಮೇಲಿದ್ದ ಒತ್ತಡ, ಅನುಭವಿಸಿದ ಟೆಂಶನ್‌ ಎಲ್ಲ ಹತ್ತಿಪ್ಪತ್ತು ಸೆಕೆಂಡಿನಲ್ಲಿ ಮುಗಿದುಹೋಗುತ್ತದೆ.

ಕೆಂಪಯ್ಯನ ಪಾತ್ರ ಪೋಷಣೆ ಏನೇನೂ ಸಾಲದು. ಕೊನೆಯಲ್ಲಿ ಬರುವ ತಮಿಳಿನ ಅಮೋಘ ನಟ ನಾಜರ್‌ ಈ ಚಿತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಒಟ್ಟಾರೇ ಪೊಲೀಸ್‌ ತಂಡವೇ ಅಷ್ಟು. ಉಳಿದ ಚಿತ್ರದಲ್ಲಿರುವಂತೆ ಇಲ್ಲೂ ಇದ್ದಾರೆ, ಅಂತಹ ಮಹತ್ವವೇನೂ ಇಲ್ಲ. ಉದಾಹರಣೆಗೆ: ರಂಗನಾಥ್‌ ಪೊಲೀಸರ ಕೈಗೆ ಸಿಕ್ಕ ಮೇಲೆ ಅವರನ್ನು ಹೊಡೆಯುವುದನ್ನು ಒಂದು ಸಹಜ ಕ್ರಿಯೆಯಂತೆ ತೋರಿಸದೆ ಅದನ್ನೊಂದು ದೌರ್ಜನ್ಯವೆಂಬಂತೆ ಬಿಂಬಿಸಲಾಗಿದೆ.

ಎರಡನೆಯದಾಗಿ, ಕತೆ ಕೇವಲ ರಂಗನಾಥ್‌-ಮೃದುಲರ ಸುತ್ತ ಸಾಗಿ, ಅವರ ಬದುಕಿನ ಮೇಲಾಗಿರುವ ಆಘಾತಗಳಲ್ಲೇ ಅಂತ್ಯಗೊಂಡಿದ್ದರೆ ಅಡ್ಡಿಯಿಲ್ಲ. ರಂಗನಾಥ್‌, ಅಸಹಾಯಕನಾಗಿ ಎಲ್‌ಟಿಟಿಇ ಪರ ಇರುವುದೂ ಸಹ್ಯ. ಇದೇ ನಿರ್ದೇಶಕರ ಉದ್ದೇಶವಾಗಿದ್ದರೆ ಉಗ್ರರ ಹತ್ಯೆಯಾದ ಮೇಲೆ ರಂಗನಾಥ್‌ ಮತ್ತು ಮೃದುಲರ ಕತೆಯನ್ನು ಮುಂದುವರೆಸಬಹುದಿತ್ತು. ಕತೆಯ ಅಂತ್ಯದಲ್ಲಿ ಎರಡು ನಿಮಿಷದ ಮಟ್ಟಿಗಾದರೂ ರಂಗನಾಥ್‌ ಜೈಲು ಸೇರಿ ಬಿಡುಗಡೆಯಾದ ಮೇಲಿನ ಅವರ ಬದುಕಿನ ಬಗ್ಗೆ ಸ್ವಲ್ಪ ಹೇಳಬಹುದಿತ್ತು. ಆದರೆ, ನಿರ್ದೇಶಕರು ಹೇಳುವುದಿಲ್ಲ. ಎಲ್‌ಟಿಟಿಇ ತಂಡದವರ ಕ್ರಾಂತಿಕಾರಕ ನುಡಿಗಳಲ್ಲಿ, ಆತ್ಮಹತ್ಯೆಯಲ್ಲಿ, ಕೊನೆಯಲ್ಲಿ ‘ಬಂದೂಕು ಹಿಡಿದವನನ್ನು ಬಂದೂಕೇ ಕೊಲ್ಲುತ್ತದೆ’ ಅನ್ನುವ ಕೆಲಸಕ್ಕೆ ಬಾರದ ಕಣ್ಣೊರೆಸುವ ಘೋಷಣೆಯಲ್ಲಿ ಕತೆ ಅಂತ್ಯಗೊಳ್ಳುತ್ತದೆ.

ಚಿತ್ರದುದ್ದಕ್ಕೂ ನಿರ್ಲಿಪ್ತರಾಗಿರುವ ನಿರ್ದೇಶಕರು ಕೊನೆಯಲ್ಲಿ ಎಲ್‌ಟಿಟಿಇ ತಂಡದ ಅಂತ್ಯಕ್ಕೆ ಸ್ಪಂದಿಸುವುದರ ಅಗತ್ಯವಾದರು ಏನಿತ್ತು?. ರಮೇಶ್‌ಗೆ ಗೊತ್ತಿದೆ, ಉಗ್ರರನ್ನು ವೈಭವೀಕರಿಸಲು ಸಾಧ್ಯವಿಲ್ಲ, ಅದನ್ನು ಯಾರೂ ಒಪ್ಪುವುದೂ ಇಲ್ಲ. ಆದ್ದರಿಂದ ಸಹಾನುಭೂತಿ ತೋರಿಸುತ್ತಾರೆ. ಎಲ್‌ಟಿಟಿಇ ಸಮಸ್ಯೆಗಳಾಗಲೀ, ರಾಜೀವ್‌ ಹತ್ಯೆಗೆ ಕಾರಣಗಳಾಗಲೀ, ಹತ್ಯೆಯ ಬಗ್ಗೆ ಖೇದವಾಗಲೀ, ಖಂಡನೆಯಾಗಲೀ ಈ ಸಿನಿಮಾದಲ್ಲಿಲ್ಲ.

ಎಲ್‌ಟಿಟಿಇಯವರಿಂದ ಉಗ್ರವಾದಕ್ಕೊಂದು ಸಮರ್ಥನೆಯಿದೆ- ನಮ್ಮವರನ್ನು ಅವರು ಕೊಂದರು ನಮ್ಮ ಹಕ್ಕಿಗಾಗಿ ನಾವು ಯಾರನ್ನು ಬೇಕಾದರೂ ಬಲಿತೆಗೆದುಕೊಂಡು ನಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳುತ್ತೇವೆ. ಇದನ್ನು ಖಂಡಿಸುವ ಪರಿಣಾಮಕಾರಿಯದ ಅಂಶವೇ ಚಿತ್ರದಲ್ಲಿಲ್ಲ. ತಾತ್ವಿಕವಾಗಿ ಆಗಲೀ ಮಾನವೀಯವಾಗಿಯೇ ಆಗಲೀ ಯಾವುದೇ ಆಧಾರವಿಲ್ಲದೆ ಈ ಸಿನಿಮಾ ಎಲ್‌ಟಿಟಿಇ ಅನುಕಂಪದೊಂದಿಗೆ ಅಂತ್ಯಗೊಳ್ಳುವುದು ಒಂದು ವಿಪರ್ಯಾಸ. ಅವರುಗಳು ಅದಕ್ಕೆ ಯೋಗ್ಯರೇ ಅನ್ನುವ ಪ್ರಶ್ನೆಗೆ ಉತ್ತರವೀಯದೆ ಕೊನೆಗೊಳ್ಳುತ್ತದೆ. ನಿರ್ದೇಶಕರಲ್ಲಿರುವ ಸ್ಪಂದನೆಯನ್ನು ಪ್ರೇಕ್ಷಕನಲ್ಲಿ ಮೂಡಿಸುವಲ್ಲಿ ಸೋಲುತ್ತಾರೆ. ಆದ್ದರಿಂದ ಪ್ರೇಕ್ಷಕನ ಅನುಕಂಪದಿಂದಲೂ ವಂಚಿತರಾಗುತ್ತಾರೆ.

ಯಾವುದೇ ಸಂಘಟನೆ ಅಥವಾ ಹೋರಾಟ ಸಾರ್ಥಕ ಅಥವಾ ನಿರರ್ಥಕವಾಗುವುದು ಅವುಗಳ ಫಲಿತಾಂಶದಲ್ಲಿ. ಆ ಹೋರಾಟ ಸಫಲವಾಗದಿದ್ದರೂ, ಗುಣಾತ್ಮಕ ಸಂಚಲನವನ್ನುಂಟು ಮಾಡಿದರೆ ಗೆದ್ದಂತೆಯೇ. ಆದರೆ ಯಾವಾಗ ಆ ಹೋರಾಟ ಪ್ರತಿಕೂಲವಾಗುತ್ತದೋ ಅಲ್ಲಿಗೆ ಸರ್ವನಾಶ. ಸುಖವಿಲ್ಲದಿದ್ದರೂ ಚಿಂತೆಯಿಲ್ಲ ಎಲ್ಲಿ ಆತಂಕವಿಲ್ಲದೆ ಬದುಕಲು ಸಾಧ್ಯವೋ ಅದು ಮನುಷ್ಯರು ‘ಬದುಕಲು’ ಯೋಗ್ಯವಾದ ಸಮಾಜ. ಅಂತಹ ಸಮಾಜದ ನೆಮ್ಮದಿಗೆ ಅಪಾಯವೊಡ್ಡುವ ಯಾವುದೇ ಹೋರಾಟ ಅರ್ಥಹೀನ ಮಾತ್ರವಲ್ಲ ಕಿಂಚಿತ್ತು ಅನುಕಂಪಕ್ಕೂ ಅನರ್ಹ.

ಈ ಚಿತ್ರದ ಬಗ್ಗೆ ಬೆಂಗಳೂರಿನಲ್ಲಿ ಒಂದು ಸೆಮಿನಾರ್‌ ನಡೆದಿತ್ತು. ಅದರ ವಿವರಗಳು ಅಷ್ಟಾಗಿ ನನಗೆ ತಿಳಿದಿಲ್ಲ. ಟಿ.ವಿ ಯಲ್ಲಿ ನೋಡುವಾಗ, ಈ ಚಿತ್ರದ ಬಗ್ಗೆ ಪ್ರಬಂಧ ಮಂಡಿಸಿದವರು- ಈ ಚಿತ್ರವನ್ನು ಈಗಾಗಲೇ pro LTTE ಅಂತ ಕೆಲವರು ಠರಾವು ಹೊರಡಿಸಿದ್ದಾರೆ, ಬೇಕಿದ್ದರೆ ಇದನ್ನು A Political movie ಅಂತ ಕರೆಯಿರಿ ಎಂದರು. ನಮಗೆ ಅದೆಲ್ಲ ತಿಳಿಯಾಕಿಲ್ಲ ಬುದ್ದಿ. ಅದನ್ನೆಲ್ಲ ನೀವ್‌ ನೀವು ದೊಡ್‌ ದೊಡ್ಡವ್ರು ಮಾತಾಡಿಕೊಳ್ಳಿ.

ತಮಗೆ ವೇದಿಕೆಯ ಒದಗಿಸಿಕೊಟ್ಟವರ ಬಗ್ಗೆ, ದಾಕ್ಷಿಣ್ಯಕ್ಕೆ ಒಳಪಟ್ಟು ಜನರು ಒಳ್ಳೆಯ ಮಾತನ್ನೇ ಆಡುತ್ತಾರೆ. ಸತ್ಯ ನಿಷ್ಠುರವಾಗಿ ಮಾತಾಡುವವರು ಬಹು ವಿರಳ. ಈ ಸೆಮಿನಾರಿನಲ್ಲಿ ಯಾರೂ ಎಲ್ಲಿಯೂ ಚಿತ್ರದ ಗುಣಮಟ್ಟ, ಗಾಂಭೀರ್ಯ, ಶ್ರೇಷ್ಠತೆಯ ಹೊರತಾಗಿ ಚಿತ್ರದ ತಾತ್ವಿಕ ನೆಲೆಗಟ್ಟನ್ನು ಪ್ರಶ್ನಿಸುವ, ಅದನ್ನು ಚರ್ಚಿಸುವ ಗೊಡವೆಗೆ ಹೋದಂತೆ ಕಾಣುವುದಿಲ್ಲ.

ಸೈನೈಡ್‌ ಬಗ್ಗೆ ಬರೆದು ಮುಗಿಸುವ ಹೊತ್ತಿಗೆ ಮುಂಬಯಿ ಮತ್ತು ಶ್ರೀನಗರದಲ್ಲಿ ನಡೆದ ಸರಣಿ ಬಾಂಬ್‌ ಸ್ಪೋಟಗಳ ಸುದ್ದಿ ಬಂದಿದೆ. ಈ ಕೃತ್ಯ ಎಸಗಿದವರಿಗೂ ಒಂದು ಕಾರಣವಿದೆ. ಅವರನ್ನು ವಿರೋಧಿಸುವವರಿಗೂ, ಹೊಡೆದು ಬೀಳಿಸುವವರಿಗೂ ಒಂದು ಕಾರಣವಿದೆ. ಅದ್ಯಾವುದನ್ನೂ ತರ್ಕಿಸದೆ ಲೆಕ್ಕಿಸದೆ ಈ ಕೃತ್ಯಗಳಿಗೆ ಕಾರಣಕರ್ತರಾದವರ ಬಗ್ಗೆ ಮರುಗುವ ಚಿತ್ರವೊಂದು ನಾಳೆ ಬರಬಹುದು. ಸೆಮಿನಾರಿನಲ್ಲಿ ನೆರೆದಿದ್ದ ಎಲ್ಲ ಹಿರಿಯರ ಸಾಧನೆ ಮತ್ತು ಬೌದ್ಧಿಕ ಎತ್ತರವನ್ನು ಗೌರವಿಸುತ್ತಲೇ ನನ್ನದೊಂದು ಪ್ರಶ್ನೆ- ನಾಳೆ, ಇಂತಹ ಸಿನಿಮಾದ ಬಗ್ಗೆ ಚರ್ಚೆಯಾದರೆ ಇದೇ ರೀತಿ ಚಿತ್ರದ ಗುಣಮಟ್ಟವನ್ನು ಹೊಗಳುತ್ತ, ಉಗ್ರರನ್ನು, ಚಿತ್ರದ ನಿಲುವನ್ನು ಖಂಡಿಸದೆ ಇದೊಂದು ಪೊಲಿಟಿಕಲ್‌ ಚಿತ್ರ ಎಂದಷ್ಟೇ ಹೇಳಿ ಕೈತೊಳೆದುಕೊಳ್ಳುತ್ತೀರಾ?

ಕೊನೆಯಲ್ಲಿ : ಥಿಯೇಟರ್‌ನಿಂದ ಹೊರಬರುತ್ತಿರುವಾಗ ಕೆಳಗೆ lobbyಯಲ್ಲಿ ರಾತ್ರಿ ಹನ್ನೆರಡು ಘಂಟೆಯ ಸಮಯ, ಯಾರೋ ಹೋಗುವವರನ್ನೆಲ್ಲ ಸಿನಿಮಾದ ಬಗ್ಗೆ ವಿಚಾರಿಸುತ್ತಿದ್ದರು. ‘ಸಿನಿಮಾ ಹೇಗಿದೆ ಸಾರ್‌?’, ‘ಪಿಕ್ಚರ್‌ ಇಷ್ಟ ಆಯ್ತಾ?’. ಎಲ್ಲೋ ನೋಡಿದ ಹಾಗಿದೆಯಲ್ಲ ಅಂದುಕೊಂಡರೆ ಅದು ಬೇರಾರೂ ಅಲ್ಲ, ಚಿತ್ರದ ನಿರ್ದೇಶಕ ರಮೇಶ್‌! ಇದೇನು ಸಿನಿಮಾ ಪ್ರೀತಿಯೋ? ತನ್ನ ಸಿನಿಮಾ ಎನ್ನುವ ಮೋಹವೋ? ಧೈನ್ಯ ಸ್ಥಿತಿಯೋ? ಇಲ್ಲಾ ಕನ್ನಡ ನಿರ್ದೇಶಕನೊಬ್ಬನ ಶೋಚನೀಯ ಅವಸ್ಥೆಯೋ? ನಕ್ಕು ಮನೆ ಸೇರಿದೆ.

Post your views

ಪೂರಕ ಓದಿಗೆ :
ಮಿಸ್‌ಮಾಡದಿರಿ, ಒಳ್ಳೆ ಚಿತ್ರಕ್ಕೆ ‘ಸೈನೈಡ್‌’ ಮಾದರಿ
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada