»   » ಪ್ರೇಕ್ಷಕರ ಗಲಾಟೆಯ ನಡುವೆ ನಾಗರಹಾವು ಕಪ್‌ ಕಂಬಳದಾಟ !

ಪ್ರೇಕ್ಷಕರ ಗಲಾಟೆಯ ನಡುವೆ ನಾಗರಹಾವು ಕಪ್‌ ಕಂಬಳದಾಟ !

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಪ್ರೇಕ್ಷಕರ ಅಬ್ಬರ, ಕಿರಿಕಿರಿ, ಪೊಲೀಸರ ಲಾಠಿ ಪ್ರಹಾರ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಕೆಸರುಗದ್ದೆಯಲ್ಲಿ ಕಂಬಳ... ಈ ಅಪರೂಪದ ಕ್ರಿಕೆಟ್ಟೇ ಅಲ್ಲದ ಕ್ರಿಕೆಟ್ಟಲ್ಲಿ ಗೆದ್ದದ್ದು ವಿಷ್ಣು ನೇತೃತ್ವದ ತಂಡ. ರಣತುಂಗಾ ನಾಯಕತ್ವದ ತಂಡದ 55 ರನ್‌ಗಳ ಬೆನ್ನತ್ತಿದ ವಿಷ್ಣು ಪಡೆ ನಿಧಾನ ಗತಿಯಲ್ಲೇ ಶುರುಮಾಡಿ, ಗೆಲುವು ಸಂಪಾದಿಸಿತು. ಹೇಗೆ ಅನ್ನುವುದರ ಲೆಕ್ಕ, ವಿವರಣಾತ್ಮಕ ಸ್ಕೋರು ಅಲಭ್ಯ.

ರಾಕ್‌ಲೈನ್‌ ತಂತ್ರವೇನೋ ಯಶಸ್ವಿಯಾಯಿತು. ನಾಗರಹಾವು ಚಿತ್ರದ ಆಡಿಯೋ ಕೆಸೆಟ್ಟುಗಳೂ ಸಾಕಷ್ಟು ಬಿಕರಿಯಾಗಿವೆ ಅನ್ನುವುದೂ ದಿಟ. ಆದರೆ ಶ್ರೀಲಂಕಾದಿಂದ ಬಂದಿದ್ದ ಕ್ರಿಕೆಟಿಗರು ಹಾಗೂ ತಾರೆಯರು ಬೆಚ್ಚಿದ್ದಂತೂ ನಿಜ. ಪ್ರೇಕ್ಷಕರ ದಾಂದಲೆಯ ಪರಿ ಹಾಗಿತ್ತು. ಒಬ್ಬ ಅಭಿಮಾನಿ ಗಾಯಗೊಂಡು ಆಸ್ಪತ್ರೆಗೆ ಸೇರುವವರೆಗೆ ಕ್ರೀಡಾಂಗಣ ತಣ್ಣಗಾಗಲಿಲ್ಲ.

ಕಪಿಲ್‌ ಬರುವಿಕೆ ವಿಳಂಬವಾದ ಕಾರಣವೋ ಏನೋ ಪಂದ್ಯ ತಡವಾಗಿ ಶುರುವಾಯಿತು. ಹತಾಶರಾಗಿದ್ದ ಪ್ರೇಕ್ಷಕರು ಆಗಲೇ ಸಾಕಷ್ಟು ಕುರ್ಚಿಗಳನ್ನು ಎಸೆದಾಗಿತ್ತು. ಈ ಗಲಭೆಯಲ್ಲೇ ಮೇಲಿನ ಗ್ಯಾಲರಿಯಿಂದ ಒಬ್ಬಾತ ಬಿದ್ದು ಗಾಯಗೊಂಡ. ಆತನನ್ನು ಆಸ್ಪತ್ರೆಗೆ ಒಯ್ಯಲಾಯಿತು. ಹಾಗೂ ಹೀಗೂ ಪಂದ್ಯ ಶುರುವಾಯಿತು. ರಣತುಂಗ ನಾಯಕತ್ವದ ಪಡೆ ಮೊದಲು ಬ್ಯಾಟ್‌ ಮಾಡಿತು. ವಿಷ್ಣು ಪತ್ನಿ ಭಾರತಿ ಅಂಪೈರಿಂಗ್‌, ಫೀಲ್ಡಿಂಗ್‌ ಹಾಗೂ ತಮ್ಮ ಪತಿಗೆ ನೀರು ಸರ್ವಿಂಗ್‌- ಎಲ್ಲವನ್ನೂ ಮಾಡುವುದರ ಮೂಲಕ ಆಲ್‌ರೌಂಡ್‌ ಪ್ರದರ್ಶನವಿತ್ತರು. ಮಾಡಿದ ಎಲ್‌ಬಿಡಬ್ಲ್ಯು ಮನವಿಗಳಿಗೆಲ್ಲ ಅವರು ಅಸ್ತು ಎಂದದ್ದು ಅಂಪೈರಿಂಗ್‌ ಅವರಿಗೆ ಏನೇನೂ ಗೊತ್ತಿಲ್ಲ ಅನ್ನುವುದಕ್ಕೆ ಕನ್ನಡಿ ಹಿಡಿದಂತಿತ್ತು. ಭಾರತಿ ನೆರವಿಗೆ ದೊಡ್ಡಣ್ಣ ದೊಡ್ಡದಾಗಿ ನಿಂತಿದ್ದರು. ಇನ್ನೊಬ್ಬ ಅಂಪೈರ್‌ ಆಗಿ ಸುಮಲತ ತೀರ್ಪು ಕೊಟ್ಟಿದ್ದೇ ಕಾಣಲಿಲ್ಲ.

ಆರನೇ ಓವರ್‌ ಹೊತ್ತಿಗೆ ಮಳೆರಾಯ ಜಿನುಗಿದಾಗ ಪ್ರೇಕ್ಷಕರು ಮೈದಾನಕ್ಕೇ ಇಳಿದರು. ಪೊಲೀಸರೂ ಅವರ ಮೇಲೆ ಲಾಠಿ ಹಿಡಿದು ಎರಗಿದರು. ಆದರೆ ಆಗ ನಡೆದದ್ದು ಅಕ್ಷರಶಃ ಕಂಬಳದಾಟ. ಪೊಲೀಸರು, ಪ್ರೇಕ್ಷಕರು ಜಾರಿಬಿದ್ದದ್ದೇ ಮುಫತ್‌ ಮನರಂಜನೆ. ಎಲ್ಲದರ ನಡುವೆ ವಿಕೆಟ್‌ ಕೀಪಿಂಗ್‌ ಮಾಡುತ್ತಿದ್ದ ಕಿರ್ಮಾನಿ ಮೊಬೈಲ್‌ನಲ್ಲಿ ಮಾತಿಗೆ ನಿಂತರು. ರಾಕ್‌ಲೈನ್‌ ತಲೆ ಮೇಲೆ ಕೈಹೊತ್ತರು.

ಕೊನೆಗೂ ಮಳೆ ನಿಂತಿತು. ಕ್ರೀಡಾಂಗಣದ ಸಿಬ್ಬಂದಿಯ ಮನವೊಲಿಸಿ, ರಾಕ್‌ಲೈನ್‌ ಪಿಚ್ಚನ್ನೇ ಬದಲಿಸಿ, ಮತ್ತೆ ಕ್ರಿಕೆಟ್‌ ಮುಂದುವರೆಸಿದರು. ಸುದೀಪ್‌, ಅಪ್ಪು, ದರ್ಶನ್‌ ಬೌಂಡರಿಗಳನ್ನು ಬಾರಿಸಿ ಶೀಟಿ ಗಿಟ್ಟಿಸಿದರೆ, ರಣತುಂಗ, ಮಹಾನಾಮ ಸಿಕ್ಸರ್‌ಗಳನ್ನು ಬಾರಿಸಿ ಮನರಂಜನೆ ಕೊಟ್ಟರು. ಶಿವರಾಜ್‌ ಫಾಸ್ಟ್‌ ಬೌಲಿಂಗ್‌, ಅಪ್ಪು ಆಫ್‌ಸ್ಪಿನ್‌, ವಿಷ್ಣು ಲೆಗ್‌ ಸ್ಪಿನ್‌, ಮೂರು ಬಾರಿ ಔಟಾದ ಉಪ್ಪಿ- ಎಲ್ಲಾ ನೋಡಿ ನಕ್ಕವರೇ ಹೆಚ್ಚು.

ಅಂಪೈರ್‌ಗಳು ಇದ್ದಕ್ಕಿದ್ದಂತೆ ಮಾಯವಾದರು. ದೊಡ್ಡಣ್ಣನೇ ಆ ಜಾಗ ತುಂಬಿದರು. ನಡುನಡುವೆ ಅಭಿಮಾನಿಗಳ ದಂಡೊಂದು ಕಬ್ಬಿಣದ ತಡೆ ಮುರಿದು, ಜಿಗಿದು ಹಾರಿಬಂದು ಮೈದಾನದಲ್ಲಿ ನರ್ತನ ಮಾಡಿ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡೋದು ನಡೆಯುತ್ತಲೇ ಇತ್ತು.

ಕೊನೆಗೆ ಶುಭಂ. ಗೆದ್ದದ್ದು ವಿಷ್ಣು ಟೀಂ. ಸನ್ಮಾನ ಸ್ವೀಕರಿಸಲು ಗುಂಡಪ್ಪ ವಿಶ್ವನಾಥ್‌ ಬಂದಿರಲಿಲ್ಲ. ಕಪಿಲ್‌ ಆಟ ನಿರೀಕ್ಷಿಸಿದ್ದವರಿಗೆ ಏನೇನೂ ಸಿಕ್ಕಲಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರಿಗೆ ಜೈಕಾರ ಕೂಗುತ್ತ ಕೊನೆಗೂ ಹೊರನಡೆದರು. ಪೊಲೀಸರು ಸುಸ್ತಾಗಿದ್ದರು. ರಾಕ್‌ಲೈನ್‌ ಬೇಸ್ತು ಬಿದ್ದು, ಸಾಕಪ್ಪಾ ಎನ್ನುವಂಥಾ ಮುಖ ಭಾವ ಹೊತ್ತು ನಿಂತಿದ್ದರು !

ಗೆದ್ದ ಕಪ್‌ ವಿತರಣೆ ಸಮಾರಂಭ ಮೈದಾನದಲ್ಲಿ ನಡೆಯುವ ಬದಲು ಡ್ರೆಸಿಂಗ್‌ ರೂಂಗೆ ಶಿಫ್ಟ್‌ ಆಗಿತ್ತು.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada