»   » ನಾನು ಪೇಮೆಂಟ್‌ ಟೈಮಲ್ಲಿ ಕುರಿ, ತೆರೆ ಮೇಲೆ ಕೋತಿ : ಮೋನಿ

ನಾನು ಪೇಮೆಂಟ್‌ ಟೈಮಲ್ಲಿ ಕುರಿ, ತೆರೆ ಮೇಲೆ ಕೋತಿ : ಮೋನಿ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ಕುರಿಗಳು ಸಾರ್‌ ಕುರಿಗಳು’ ಹಾಗೂ ‘ಕೋತಿಗಳು ಸಾರ್‌ ಕೋತಿಗಳು’ ಪೈಕಿ ಒಂದು ಕುರಿ ಹಾಗೂ ಕೋತಿಯಾಗಿ ಅಚ್ಚುಕಟ್ಟಾಗಿ ನಟಿಸಿದ್ದ ಮೋಹನ್‌ಗೆ ಕತ್ತೆಯಾಗುವ ಅವಕಾಶ ತಪ್ಪಿದ್ದು ಯಾಕೆ?
ಸಂಭಾವನೆ ಹೆಚ್ಚಿಸಿಕೊಂಡದ್ದಕ್ಕೆ ಅಂತ ಒಂದೇ ಮಾತಲ್ಲಿ ಹೇಳಬಹುದು. ಹೀಗೆ ಹೇಳಿ ಕೆಣಕಿದರೆ, ಮೋನಿ ‘ಸಂಭಾವನೆ ಏರಿಸಿಕೊಳ್ಳೋದರಲ್ಲೇನು ತಪ್ಪಿದೆ’ ಅಂತ ಪ್ರಶ್ನೆ ಎಸೆಯುತ್ತಾರೆ. ಆ ಪ್ರಶ್ನೆಯಲ್ಲಿ ಮೊದಲಿನ ಬಿಗುವಂತೂ ಇಲ್ಲ. ದುಂಡಗಿನ ಮೊಗವೀಗ ಹ್ಯಾಪು ಮೋರೆಯಾಗಿದೆ. ಉದಯೋನ್ಮುಖನಾಗುತ್ತಿರುವಾಗಲೇ ಅಸ್ತಂಗತನಾಗುವ ಪರಿಸ್ಥಿತಿ ಬಂದರೆ ಒಬ್ಬ ನಟ ಇನ್ನು ಹೇಗಿರೋಕೆ ಸಾಧ್ಯ? !

ಮೋನಿಗಾದದ್ದು ಏನು?
ಕುರಿಯಾದದ್ದಕ್ಕೆ ಸಿಕ್ಕ ಸಂಭಾವನೆ 60 ಸಾವಿರ ರುಪಾಯಿ. ಕೋತಿಯಾದಾಗ ರೇಟು ಮೂರು ಲಕ್ಷವಾಗಿತ್ತು. ಕತ್ತೆಯಾಗಲು ಮೂರು ಲಕ್ಷದ ಮೇಲೆ ಇನ್ನೂ 50 ಸಾವಿರ ಜಾಸ್ತಿ ಕೊಡಿ ಅಂತ ಕೇಳಿದರು ಮೋನಿ. ನಿರ್ಮಾಪಕಿ ವಿಜಯಲಕ್ಷ್ಮಿ ಜೈಜಗದೀಶ್‌ ಆಗಲ್ಲ ಅಂದರು. ಮೋನಿ ರಾಜಿಯಾಗಲಿಲ್ಲ. ಕತ್ತೆಯಾಗುವ ಭಾಗ್ಯ ಒಲಿಯಲಿಲ್ಲ. ಹಾಗಿದ್ದರೂ ಮೋಹನ್‌ ಏನು ಅಂತ ಸ್ಯಾಂಡಲ್‌ವುಡ್‌ಗೀಗ ಚೆನ್ನಾಗಿ ಗೊತ್ತು. ಈತ ನಟನಷ್ಟೇ ಅಲ್ಲ ; ಸಿನಿಮಾ ಸಾಹಿತಿ ಕೂಡ ಹೌದು. ಹಾಡೊಂದನ್ನು ಬಿಟ್ಟು ಮಿಕ್ಕೆಲ್ಲಾ ಬರವಣಿಗೆ ಕೆಲಸ ಮಾಡಿದ್ದಾರೆ. ಇವರನ್ನು ನಟರಾಗಿ ಸ್ವೀಕರಿಸಿದರೆ, ರೈಟಿಂಗು ಮುಫತ್ತು !

ಆ್ಯಕ್ಟಿಂಗು ರೈಟಿಂಗು ಎರಡೂ ಮಾಡಬೇಕು ಅಂದರೆ ಅಹರ್ನಿಶಿ ಕೆಲಸ ಮಾಡುವುದು ಅನಿವಾರ್ಯ. ಸೃಜನಶೀಲತೆಗಾಗಿ ಈ ರಿಸ್ಕಿಗೆ ಮೋನಿಯೇನೋ ಸಿದ್ಧರಾಗೇ ಕೆಲಸ ಮಾಡಿದರು. ಆದರೀಗ ಮೋಹನ್‌ ಭವಿತವ್ಯಕ್ಕೆ ಕಲ್ಲು ಹಾಕುವ ಯತ್ನ ಮೂವತ್ತು ವರ್ಷಗಳ ಅನುಭವಿಯೋಬ್ಬರಿಂದ ನಡೆದಿದೆ. ಅದಾರು ಅನ್ನೋದನ್ನ ಮೋನಿ ಹೇಳಲು ತಯಾರಿಲ್ಲ.

ಮೋಹನ್‌ ಹಾಕಿಕೊಂಡು ಸಿನಿಮಾ ಮಾಡುವ ಯೋಚನೆ ಯಾವ ನಿರ್ಮಾಪಕರಿಗೆ ಬಂದರೂ ಅಲ್ಲಿಗೊಂದು ಫೋನ್‌ ಕಾಲ್‌ ಬಂದು, ಏನೇನೋ ಹೇಳುತ್ತದೆ. ಆಮೇಲೆ ಮೋಹನ್‌ ಸಹವಾಸ ಬೇಡ ಎಂಬ ತೀರ್ಮಾನಕ್ಕೆ ನಿರ್ಮಾಪಕ ಬಂದು ಬಿಡುತ್ತಾನೆ.

ಇದರಿಂದ ಹತಾಶರಾಗಿ ಮೋಹನ್‌ ಎಡವಿ ರವಿಚಂದ್ರನ್‌ ಗರಡಿಗೆ ಬಂದು ಬಿದ್ದಾಗ, ರವಿ ಕೈಹಿಡಿದು ಮೇಲಕ್ಕೆತ್ತಿದ್ದಾರೆ. ಈಗ ಮೋನಿ ಕೆಲಸ ಏನಿದ್ದರೂ ರವಿಗೆ ಮಾತ್ರ ಮೀಸಲು, ಮುಂಬರುವ ರವಿ ಚಿತ್ರಗಳೇನಾದರೂ ಸದ್ದು ಮಾಡಿದಲ್ಲಿ, ಮೋನಿ ಅದೃಷ್ಟವೂ ಖುಲಾಯಿಸೀತು.

ಈಚೆಗೆ ಟಿವಿ ಸಂದರ್ಶನವೊಂದರಲ್ಲಿ ಮೋನಿ ಹೇಳಿದ್ದರು- ‘ಪೇಮೆಂಟ್‌ ಟೈಮಲ್ಲಿ ನಾನು ಕುರಿ, ತೆರೆ ಮೇಲೆ ಕೋತಿ’ ಅಂತ. ಇದೀಗ ಅದು ಹಕೀಕತ್ತಾಗಿದೆ. ಪೇಮೆಂಟಿನ ಕಾರಣಕ್ಕೇ ಮೋನಿ ಬಲಿಕುರಿಯಾಗಿದ್ದಾರೆ.

ಈ ಕೆಲಸ ಯಾರು ಮಾಡ್ತಿದ್ದಾರೆ ಅಂತ ಮೋನಿಗೆ ಚೆನ್ನಾಗಿ ಗೊತ್ತಂತೆ. ಮೋಹನ್‌ ಅಳುವುದೊಂದೇ ಬಾಕಿ ಎಂಬಷ್ಟು ಕುಗ್ಗಿಹೋಗಿದ್ದಾರೆ. ಒಂದು ಕಾಲದಲ್ಲಿ ಕೆ.ಬಾಲಚಂದರ್‌ ಅಂಥವರಿಗೆ ಸ್ಕಿೃಪ್ಟ್‌ ಬರೆದುಕೊಟ್ಟ ಮೋಹನ್‌ಗೆ ಹೀಗಾಗಬಾರದಿತ್ತು. ಮೋಹನ್‌ ಅವಕಾಶ ತಪ್ಪಿಸುತ್ತಿರುವ ಮೂವತ್ತು ವರ್ಷಗಳ ಅನುಭವಿ ಯಾರು ಅಂತ ನೀವು ಗೆಸ್‌ ಮಾಡಬಲ್ಲಿರಾ? ಟ್ರೆೃ ಮಾಡಿ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada